Advertisement
ಹಾಸನದ ಹೊರವರ್ತುಲ ರಸ್ತೆಯಿಂದ ತಾಲೂಕಿನ ಹೆಗದ್ದೆ ಗ್ರಾಮದ ಹೊರವಲಯದವರೆಗಿನ 54 ಕಿ.ಮೀ. ರಸ್ತೆ ಚತುಷ್ಪಥಕ್ಕೆ 2016 ರಲ್ಲಿ ಟೆಂಡರ್ ಕರೆಯಲಾಗಿದ್ದು, 2019ರ ಏಪ್ರಿಲ್ ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಳಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಕಾಮ ಗಾರಿ ಕೈಗೆತ್ತಿಕೊಂಡ ಐಸೋಲೆಕ್ಸ್ ಕಂಪನಿ ಯಾವುದೇ ಮುಂದಾಲೋಚನೆ ಇಲ್ಲದೆ ತುಂಡು ಗುತ್ತಿಗೆ ನೀಡುವ ಮೂಲಕ 54 ಕಿ.ಮೀ. ರಸ್ತೆಯನ್ನು ಇಕ್ಕೆಲಗಳಲ್ಲಿನ ಮಣ್ಣು ತೆಗೆದ ಪರಿಣಾಮ ಹಲವೆಡೆ ಭೂಕುಸಿತಕ್ಕೆ ಕಾರಣವಾಗಿತ್ತು.
Related Articles
Advertisement
ಮಳೆಯಿಲ್ಲದೇ ಕುಸಿತ, ಮಳೆ ಬಂದರೆ ಇನ್ನೇನು ಕಥೆ?: ಬೇಸಿಗೆಯಲ್ಲೇ ಈ ರೀತಿ ಭೂ ಕುಸಿತವಾಗಿದ್ದು, ಇನ್ನು ಭಾರೀ ಮಳೆ ಸುರಿದರೆ ಮುಂದೇನಾಗುವುದೆಂಬ ಪ್ರಶ್ನೆ ಉದ್ಭವವಾಗಿದೆ. ರಸ್ತೆಗೆ ಮಣ್ಣು ಸುರಿದ ನಂತರ ಮಣ್ಣಿನ ಮೇಲೆ ಕಾಂಕ್ರೀಟ್ ಬೆಡ್ಡಿಂಗ್ ಹಾಕಲು ಕೆಲ ಸಮಯ ನೀಡಬೇಕು. ಆದರೆ, ಗುಂಡಿ ಇರುವ ಜಾಗಗಳಲ್ಲಿ ಮಣ್ಣು ಸುರಿಯಲಾಗುತ್ತಿದ್ದು, ಮಣ್ಣು ಹೊಂದಿಕೊಳ್ಳಲು ಸಮಯಾವಕಾಶ ತೆಗೆದುಕೊಳ್ಳದೆ ಏಕಾಏಕಿ ಕಾಂಕ್ರೀಟ್ ಹಾಕಲಾಗುತ್ತಿದ್ದು, ಇದರಿಂದ ಹಲವೆಡೆ ಭೂಕುಸಿತದ ಅಪಾಯ ಕಂಡು ಬರುತ್ತಿದೆ. ಭಾರೀ ಮಳೆ ಸುರಿದರೆ ಅನಾಹುತವಾಗುವುದು ಬಹುತೇಕ ಖಚಿತವಾಗಿದೆ.
ಪೂರ್ಣಗೊಳ್ಳದ ಕಾಮಗಾರಿ: ಕೊಲ್ಲಹಳ್ಳಿ ಸಮೀಪದ ಫ್ಲೈ ಓವರ್‌ನಲ್ಲಿ ಮಣ್ಣು ಹಾಕಲಾಗುತ್ತಿದ್ದು, ಇನ್ನು ಸಾವಿರಾರು ಲೋಡ್ ಮಣ್ಣಿನ ಅವಶ್ಯಕತೆ ಇಲ್ಲಿದೆ. ಅಲ್ಲದೇ ತಡೆಗೋಡೆ ಸಹ ನಿರ್ಮಾಣವಾಗಬೇಕಾಗಿದೆ. ಮಳಲಿ ಬೈಪಾಸ್ ಸಮೀಪ ಸುಮಾರು 500 ಮೀ. ದೂರ ಕಾಂಕ್ರೀಟ್ ರಸ್ತೆ ನಿರ್ಮಾಣಗೊಳ್ಳಬೇಕಾಗಿದೆ. ಹೇಮಾವತಿ ನದಿಗೆ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಸಹ ಪೂರ್ಣಗೊಳ್ಳಲು ಕೆಲ ಸಮಯ ಬೇಕಾಗಿದೆ.
ಬೆಳಗಾವಿ ಅಧಿವೇಶನದಿಂದ ಹಿಂತಿರುಗಿ ಬಂದ ಮೇಲೆ ಬೈಪಾಸ್ ರಸ್ತೆ ಕಾಮಗಾರಿ ಪರಿಶೀಲನೆ ಮಾಡಿ ಸಂಸದರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿ ಉದ್ಘಾಟನೆ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. – ಸಿಮೆಂಟ್ ಮಂಜು, ಶಾಸಕರು
ಬೈಪಾಸ್ ರಸ್ತೆಯಲ್ಲಿ ಮಾಡಲಾಗುತ್ತಿರುವ ಕಾಮಗಾರಿ ಕಳಪೆಯಾಗಿದೆ. ಮಳಲಿ ಸಮೀಪ ನಿರ್ಮಾಣ ಮಾಡಿರುವ ಕಲ್ಲಿನ ತಡೆಗೋಡೆ ಮಣ್ಣಿನ ಭಾರ ತಡೆಯದೆ ಮುಂದಕ್ಕೆ ಹೋಗಿದೆ. ಇನ್ನು ವಾಹನಗಳು ತಿರುಗಾಡಿದಲ್ಲಿ ಭೂ ಕುಸಿತ ಖಚಿತ. ಈ ಭಾಗದಲ್ಲಿ ಆಗಿರುವ ಅವ್ಯವಸ್ಥೆಯನ್ನು ಸರಿ ಮಾಡಬೇಕು. – ರಾಕೇಶ್, ಮಳಲಿ ಗ್ರಾಮಸ್ಥ
ಸಕಲೇಶಪುರ ತಾಲೂಕಿನ ಮಳಲಿ ಬೈಪಾಸ್ ಸಮೀಪ ಭೂಕುಸಿತ ಸ್ಥಳಕ್ಕೆ ಮೂರ್ನಾಲ್ಕು ದಿನಗಳಲ್ಲಿ ತೆರಳಿ ಪರಿಶೀಲಿಸಿ ತಡೆಗೋಡೆ ಹಾಗೂ ಇನ್ನಿತರ ಅವ್ಯವಸ್ಥೆಗಳ ಬಗ್ಗೆ ಸರಿಪಡಿಸಲು ಮುಂದಿನ ಕ್ರಮ ಕೈಗೊಳ್ಳಲಾಗುವುದು. – ಪ್ರವೀಣ್, ಯೋಜನಾ ನಿರ್ದೇಶಕ, ಎನ್‌ಎಚ್‌ಎಐ
– ಸುಧೀರ್ ಎಸ್.ಎಲ್.