Advertisement

LandSlide: ಹಲವು ರೈಲುಗಳು ರದ್ದು, ಐದು ದಿನಗಳಲ್ಲಿ ಸಹಜ ಸ್ಥಿತಿ ಸಾಧ್ಯತೆ

10:32 AM Jul 28, 2024 | Team Udayavani |

ಮಂಗಳೂರು/ಸುಬ್ರಹ್ಮಣ್ಯ: ಎಡಕುಮೇರಿ ಕಡಗರಳ್ಳಿ ಮಧ್ಯೆ ಉಂಟಾಗಿರುವ ಗಂಭೀರ ಸ್ವರೂಪದ ಭೂಕುಸಿತದಿಂದ ಇನ್ನೂ ಹಳಿ ದುರಸ್ತಿಪಡಿಸುವ ಕಾರ್ಯ ಮುಂದುವರಿದಿದ್ದು, ಇನ್ನೂ ಹಲವು ದಿನ ರೈಲು ಸಂಚಾರ ಅಸಾಧ್ಯವಾಗಿದೆ.

Advertisement

ರೈಲು ಹಳಿಯ ಕೆಳಭಾಗದಲ್ಲಿ ಭಾರೀ ಆಳಕ್ಕೆ ಮಣ್ಣು ಜರಿದು ಹೋಗಿದ್ದು, ಹಳಿಗೆ ಅಪಾಯ ಎದುರಾಗಿದೆ. ರೈಲು ಇಲಾಖೆ ಸಿಬಂದಿ ಹಗಲಿರುಳು ದುರಸ್ತಿ ಕಾರ್ಯ ಕೈಗೊಂಡಿದ್ದರೂ ಸುರಿಯು ತ್ತಿರುವ ಜಡಿಮಳೆ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಶುಕ್ರವಾರ ಸಂಜೆ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿ ರುವುದರಿಂದ ಶನಿವಾರವೂ ಹಲವು ರೈಲುಗಳು ಮಾರ್ಗ ಬದಲಾಯಿಸಿ ತೆರಳಿದವು ಅಥವಾ ರದ್ದುಗೊಂಡವು.

ಶುಕ್ರವಾರ ಬೆಂಗಳೂರಿಗೆ ಶೋರ್ನೂರು ಮೂಲಕ ಹೋಗಿದ್ದ ಮುರುಡೇಶ್ವರ- ಬೆಂಗಳೂರು, ಕಾರವಾರ-ಬೆಂಗಳೂರು ರೈಲು ಹಾಗೂ ಬೆಂಗಳೂರಿನಿಂದ ಆಗಮಿಸಬೇಕಾದ ಬೆಂಗಳೂರು- ಕಣ್ಣೂರು, ಬೆಂಗ ಳೂರು – ಮುರುಡೇಶ್ವರ ರೈಲು ಹಲವು ಗಂಟೆ ತಡವಾಗಿ ಗಮ್ಯ ತಲುಪಿವೆ.

ಇನ್ನೆರಡು ದಿನ ಸೇವೆ ವ್ಯತ್ಯಯ
16585 ಎಸ್‌ಎಂವಿಟಿ ಬೆಂಗಳೂರು-ಮುರುಡೇಶ್ವರ ರೈಲು ಜು. 27, 28ರಂದು ಪೂರ್ಣ ರದ್ದಾಗಿದೆ. 16586 ಮುರುಡೇಶ್ವರ-ಎಸ್‌ಎಂವಿಟಿ ರೈಲು ಜು. 28, 29ರಂದು ರದ್ದುಗೊಂಡಿದೆ. 06567 ಎಸ್‌ಎಂವಿಟಿ ಬೆಂಗಳೂರು-ಕಾರವಾರ ಜು. 28ರಂದು ರದ್ದು. 06568 ಕಾರವಾರ-ಎಸ್‌ಎಂವಿಟಿ ರೈಲು ಜು. 28ರಂದು, 16595 ಕೆಎಸ್‌ಆರ್‌ ಬೆಂಗಳೂರು-ಕಾರವಾರ ರೈಲು ಜು. 27, 28ರಂದು ರದ್ದಾಗಿದೆ.

16596 ಕಾರವಾರ-ಕೆಎಸ್‌ಆರ್‌ ಬೆಂಗಳೂರು ರೈಲು ಜು. 27, 28ರಂದು ಸಂಪೂರ್ಣ ರದ್ದಾಗಿದ್ದರೆ 16585 ಎಸ್‌ಎಂವಿಟಿ-ಮುರುಡೇಶ್ವರ ರೈಲು ಜು. 27ರ ಸೇವೆ ರದ್ದುಗೊಂಡಿದೆ.

Advertisement

ಸುಮಾರು 50 ಮೀಟರ್‌ ಆಳಕ್ಕೆ ಕುಸಿತ
ದಿಢೀರ್‌ ಆಗಿ ಹೆಚ್ಚು ಪ್ರಮಾಣದಲ್ಲಿ ಸುರಿಯುವ ಮಳೆಗೆ ಗುಡ್ಡದ ಮಣ್ಣು ಮೆದುವಾಗಿರುವುದೇ ಭೂಕುಸಿತಕ್ಕೆ ಕಾರಣವೆಂದು ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ರೈಲು ಹಳಿಯ ಪ್ರಪಾತದ ಬದಿಗೆ ಮಣ್ಣು ಸುಮಾರು 50-60 ಮೀಟರ್‌ನಷ್ಟು ಕುಸಿದು ಜಾರಿಕೊಂಡು ಹೋಗಿದೆ. ಇದರಿಂದಾಗಿ ರೈಲು ಹಳಿಗೇ ಅಪಾಯ ಎದುರಾಗಿದೆ.

ಪರ್ವತ ಬದಿಯಿಂದ ಭಾರೀ ಮಳೆಗೆ ನೀರು ಕೂಡ ಹರಿದು ಬಂದಿದ್ದು, ಕಾರ್ಯಾಚರಣೆಗೆ ಸವಾಲಾಗಿದೆ. 20 ವ್ಯಾಗನ್‌ನಷ್ಟು ದೊಡ್ಡ ಬಂಡೆಗಳು ಬೇಕಾಗುತ್ತದೆ. ಪರ್ವತಗಳಿಗೆ ಹಾಕುವಂತಹ ಗೇಬಿಯನ್‌ ಮೆಷ್‌ ಬೇಲಿ ರೀತಿ ಹಾಕಿ, ಬಂಡೆಗಳನ್ನು ತುಂಬುತ್ತ ಬರಬೇಕಿದೆ. ಆದರೆ ಗುಡ್ಡದ ಮಣ್ಣು ಮೆತ್ತಗಾಗಿರುವುದನ್ನು ನೋಡಿದರೆ ಈ ಮೆಷ್‌ ಹಾಕುವುದೂ ಕಷ್ಟವಾಗಿ ಪರಿಣಮಿಸಿದೆ. ಮಳೆಯ ತೀವ್ರತೆಗೆ ಹಾಕಿದ ವಸ್ತುಗಳೆಲ್ಲವೂ ಕೊಚ್ಚಿಕೊಂಡು ಹೋಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕನಿಷ್ಠ ಐದು ದಿನ ಅಗತ್ಯ?
ಸದ್ಯದ ಮಾಹಿತಿ ಪ್ರಕಾರ ಕಾರ್ಯಾಚರಣೆ ಕ್ಲಿಷ್ಟಕರವಾಗಿದ್ದು, ನಿರಂತರ ಕೆಲಸ ಮಾಡಿದರೂ ರೈಲು ಮಾರ್ಗ ಸಹಜ ಸ್ಥಿತಿಗೆ ತರುವುದಕ್ಕೆ ಐದು ದಿನ ಬೇಕಾಗಬಹುದು. ಈ ಪ್ರದೇಶಕ್ಕೆ ಯಾವುದೇ ರಸ್ತೆ ಸಂಪರ್ಕ ಇಲ್ಲ, ಎಲ್ಲ ದುರಸ್ತಿಗೆ ಬೇಕಾದ ವಸ್ತುಗಳನ್ನು ರೈಲಿನ ವ್ಯಾಗನ್‌ ಮೂಲಕವೇ ತರಬೇಕಾಗುತ್ತದೆ.

ಅದೂ ಈಗಿನ ಸಂದರ್ಭದಲ್ಲಿ ಅಪಾಯವಿರುವ ಕಾರಣ ಎಚ್ಚರಿಕೆಯಿಂದ ವ್ಯಾಗನ್‌ಗಳ ಮುಂದೆ, ಹಿಂದೆ ಎರಡೆರಡು ಎಂಜಿನ್‌ ಹಾಕಿ ಬಂಡೆ, ಇನ್ನಿತರ ವಸ್ತು ಸಾಗಿಸಲಾಗುತ್ತದೆ. ಅದನ್ನು ತಂದರೂ ಕುಸಿತವಾದ ಜಾಗಕ್ಕೆ ತರಲಾಗದು, ಯಾಕೆಂದರೆ ಹಳಿಯ ಕೆಳಭಾಗದಲ್ಲಿ ಸ್ಥಿರತೆ ಇಲ್ಲದೆ ಹಳಿ ಬಾಗುವ, ಹಾನಿಗೊಳ್ಳುವ ಅಪಾಯವೂ ಇದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.