Advertisement

ನಾಗೋಡಿ ಘಾಟಿ ; ಹಲವೆಡೆ ಕುಸಿತ; ಸಂಚಾರ ಸಂಕಷ್ಟ

01:03 PM Jul 29, 2019 | keerthan |

ಕುಂದಾಪುರ: ಹುಲಿಕಲ್‌, ಆಗುಂಬೆ ಘಾಟಿ ಬಿಟ್ಟರೆ ಕರಾವಳಿಯಿಂದ ಮಲೆನಾಡು ಮತ್ತು ಅದರಾಚೆಗೆ ಕುಂದಾಪುರ – ಕೊಲ್ಲೂರು ಮಾರ್ಗವಾಗಿ ಸಂಪರ್ಕಿಸುವ ನಾಗೋಡಿ ಘಾಟಿ ಭಾರೀ ಮಳೆಗೆ ಅಲ್ಲಲ್ಲಿ ಕುಸಿದಿದೆ. ಕುಸಿತ ಮುಂದುವರಿಯುತ್ತಲೇ ಇದ್ದು, ಮಳೆ ಹೆಚ್ಚಾದಂತೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.

Advertisement

ಮಳೆಗಾಲಕ್ಕೂ ಮೊದಲೇ ಈ ಘಾಟಿ ರಸ್ತೆಯ ಹಲವೆಡೆ ಹೊಂಡ – ಗುಂಡಿಗಳಾಗಿದ್ದವು. ಈಗ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವು ದರಿಂದ ಘಾಟಿ ರಸ್ತೆ ಜರ್ಝರಿತಗೊಂಡಿದೆ. ಅಲ್ಲಲ್ಲಿ ಗುಡ್ಡ ಕುಸಿದು ರಸ್ತೆಗೆ ಬೀಳುತ್ತಿದೆ. ತಿರುವುಗಳಲ್ಲಿ ರಸ್ತೆಗೆ ಬಾಗಿರುವ ಮರಗಳ ಗೆಲ್ಲು, ಪೊದೆಗಳನ್ನು ಮಳೆಗಾಲಕ್ಕೆ ಮುನ್ನ ತೆರವು ಮಾಡದ್ದರಿಂದ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ರಾತ್ರಿ ವೇಳೆ ವಾಹನ ಸಂಚಾರಕ್ಕೆ ಇದು ದೊಡ್ಡ ಅಡಚಣೆ, ಅಪಘಾತ ಸಂಭವಿಸುವ ಸಾಧ್ಯತೆಗಳೂ ಇವೆ.

4 ವರ್ಷಗಳ ಹಿಂದೆ 10 ಕೋ.ರೂ. ವೆಚ್ಚದಲ್ಲಿ ಈ ರಸ್ತೆಯ ಸುಮಾರು 7 ಕಿ.ಮೀ. ದೂರವನ್ನಷ್ಟೇ ಕಾಂಕ್ರೀಟೀಕರಣಗೊಳಿಸಲಾ ಗಿತ್ತು. ಘಾಟಿರಸ್ತೆ ಕೊಲ್ಲೂರು ಸಮೀಪದಿಂದ ಒಟ್ಟು 14 ಕಿ.ಮೀ. ಇದೆ. ದುರಸ್ತಿ ಕಾಣದೇ ಇರುವ ಈ ರಸ್ತೆಯ ಅಭಿವೃದ್ಧಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.

ಬೈಂದೂರು – ಹೊನ್ನಾಳಿ ರಾಜ್ಯ ಹೆದ್ದಾರಿಯನ್ನು ಮುಂದಿನ 10 ವರ್ಷ ಅವಧಿಗೆ ಅಭಿವೃದ್ಧಿ ಪಡಿಸಲು ರಾ. ಹೆದ್ದಾರಿ ಇಲಾಖೆಗೆ ವರ್ಗಾಯಿಸಲಾಗಿದ್ದು, ರಸ್ತೆ, ಘಾಟಿ ಎಲ್ಲದರ ನಿರ್ವಹಣೆ ಹೊಣೆ ವಹಿಸ ಲಾಗಿದೆ. ಆದರೆ ಈವರೆಗೆ ಯಾವುದೇ ಕಾಮಗಾರಿ ಮಾಡಿಲ್ಲ ಎನ್ನುವ ಆರೋಪ ಕೇಳಿ ಬಂದಿವೆ.

ಪ್ರಮುಖ ಘಾಟಿ
ಈಗ ಈ ಘಾಟಿಯಲ್ಲಿ ಹಿಂದಿಗಿಂತ ವಾಹನಗಳ ಒತ್ತಡ ಹೆಚ್ಚಿದೆ. ಗುಡ್ಡ ಕುಸಿತದಿಂದಾಗಿ ಈ ಮಾರ್ಗದಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತಾಗಿದೆ. ಇತಿಹಾಸ ಪ್ರಸಿದ್ಧ ದೇವಸ್ಥಾನಗಳಾದ ಕೊಲ್ಲೂರಿನಿಂದ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದು. ಶಿವಮೊಗ್ಗದಿಂದ ಕೊಲ್ಲೂರಿಗೂ ಹತ್ತಿರದ ಮಾರ್ಗ. ಹೊನ್ನಾಳಿ – ಬೈಂದೂರು ರಾಜ್ಯ ಹೆದ್ದಾರಿ ಕೂಡ ಇದೇ ಘಾಟಿ ಮೂಲಕ ಹಾದು ಹೋಗುತ್ತದೆ. ಇದಲ್ಲದೆ ಕೊಲ್ಲೂರಿನಿಂದ ಶಿವಮೊಗ್ಗ ಮೂಲಕವಾಗಿ ಬೆಂಗಳೂರಿಗೂ ಈ ಮಾರ್ಗವಾಗಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಕುಂದಾಪುರದಿಂದ ನಿತ್ಯ ಸಾಗರಕ್ಕೆ ಇದೇ ಘಾಟಿ ಮೂಲಕ ಬಸ್‌ಗಳು ಸಂಚರಿಸುತ್ತವೆ.

Advertisement

ಸಂಸದರ ಗಮನಕ್ಕೆ ತಂದು ದುರಸ್ತಿ
ಘಾಟಿ ರಸ್ತೆ ಸಾಗರ ಮತ್ತು ಬೈಂದೂರು ಎರಡು ವಿಧಾನಸಭಾ ಕ್ಷೇತ್ರಗಳ ಮಧ್ಯೆ ಹಾದು ಹೋಗುತ್ತಿದ್ದು, ಅಭಿವೃದ್ಧಿಪಡಿಸುವ ಸಂಬಂಧ ಸಂಸದರ ಗಮನಕ್ಕೆ ತರಲಾಗುವುದು. ಈಗ ಕುಸಿದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ, ತತ್‌ಕ್ಷಣ ಸ್ಥಳಕ್ಕೆ ಭೇಟಿ ನೀಡಲು ತಿಳಿಸುತ್ತೇನೆ.
– ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next