ಬದಿಯಡ್ಕ: ಕಾಸರಗೋಡು ಜಿಲ್ಲೆಯ ಇತಿಹಾಸ ಪ್ರಸಿದ್ಧವಾದ ಅಗಲ್ಪಾಡಿ ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರದ ಸಮೀಪದಲ್ಲಿ ಅಪಾಯಕಾರಿ ಭೂ ಕುಸಿತ ಮತ್ತು ಬಿರುಕು ಕಂಡು ಬಂದಿದೆ. ದೇವಸ್ಥಾನದ ಮುಂಭಾಗದಲ್ಲಿರುವ ಬೃಹತ್ ಗುಡ್ಡೆಯ ಸ್ವಲ್ಪ ಭಾಗವು ಕಳೆದ ತಿಂಗಳು ಜರಿದು ಬಿದ್ದಿತ್ತು. ನಿನ್ನೆ ಮಧ್ಯಾಹ್ನದಿಂದ ಸತತವಾಗಿ ಸುರಿದ ಮಳೆಗೆ ಕ್ಷೇತ್ರದ ಮುಂಭಾಗ ಕುಸಿದು ಬಿದ್ದಿದೆ.
ಮಾರ್ಪನಡ್ಕ ಶ್ರೀ ಅನ್ನಪೂರ್ಣೇಶ್ವರಿ ಶಾಲೆಗೆ ಸಂಚರಿಸುವ ದಾರಿಯಲ್ಲಿ ಸುಮಾರು 12 ಮೀ.ಗಳಷ್ಟು ಉದ್ದವಾಗಿ ಬಿರುಕು ಕಾಣಿಸಿಕೊಂಡಿದೆ. ಶಾಲೆಗೆ ಸಂಚರಿಸಲು ಅನ್ಯ ದಾರಿ ಇಲ್ಲದ ಕಾರಣ ಶಾಲೆ ಸ್ಥಳಾಂತರಿಸಲು ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ.
ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರಕ್ಕೆ ಮಾರ್ಪನಡ್ಕ ಜುಮಾ ಮಸೀದಿಯ ಮುಸ್ಲಿಂ ಬಾಂಧವರು ಸೌಹಾರ್ದತೆಯ ಪ್ರತೀಕವಾಗಿ ಭೇಟಿ ನೀಡಿದರು. ಮಾತ್ರವಲ್ಲದೇ ಬಕ್ರೀದ್ ಪ್ರಯುಕ್ತ ನಡೆದ ವಿಶೇಷ ಪ್ರಾರ್ಥನೆಯಲ್ಲೂ ಕ್ಷೇತ್ರದ ಪರವಾಗಿ ಪ್ರಾರ್ಥನೆ ಸಲ್ಲಿಸಿದರು. ಹಾಗೇಯೇ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆಯನ್ನಿತ್ತರು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಭೇಟಿ ನೀಡಿದರು. ಜಿ.ಪಂ. ಸದಸ್ಯ ನ್ಯಾಯವಾದಿ ಶ್ರೀಕಾಂತ್, ಶಿಕ್ಷಣ ಇಲಾಖೆಯ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ, ಗ್ರಾ.ಪಂ. ಕಾರ್ಯದರ್ಶಿ ಅಚ್ಯುತ, ಉಪಾಧ್ಯಕ್ಷ ಆನಂದ ಕೆ.ಮವ್ವಾರು, ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಕ್ಷೇತ್ರದ ಟ್ರಸ್ಟಿ ವಾಸುದೇವ ಭಟ್ ಉಪ್ಪಂಗಳ, ಎಂ.ಸುಧಾಮ ಗೋಸಾಡ, ಶಿವಶಂಕರ ಭಟ್, ವಾರ್ಡು ಸದಸ್ಯೆ ಶಾಂತಾ ಭಟ್, ರಾಜೆಶ್ ಮಜಕ್ಕಾರು, ರಾಜೇಶ್ ಮಾಸ್ತರ್, ವಾಸುದೇವ ಭಟ್ ಚೋಕೆಮೂಲೆ ರಾಮ ಭಟ್, ಕೀರ್ತನ ಭಟ್, ಸುಹಾಸ್, ಪ್ರಭಾಶ್ ಶರ್ಮ ಮೊದಲಾದವರು ಜೊತೆಯಲಿದ್ದರು.
ಇತಿಹಾಸ ಪ್ರಸಿದ್ಧ ಆಗಲ್ಪಾಡಿ ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರ ಪರಿಸರದಲ್ಲೂ ಭೂಕುಸಿತ ಸಂಭವಿಸಿದ್ದು ಯಾವುದೇ ದುರಂತ ಸಂಭವಿಸದಿದ್ದರೂ ಶಾಲಾ ಮಕ್ಕಳಿಗೆ ಉಂಟಾದ ತೊಂದರೆ ಗಮನಕ್ಕೆ ಬಂದಿದ್ದು ಸೂಕ್ತ ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಯಾವುದೇ ರೀತಿಯ ಸಹಾಯ ಸಹಕಾರ ನೀಡಲು ಪ್ರಯತ್ನಿಸುವೆ.
– ಎನ್.ಎ.ನೆಲ್ಲಿಕುನ್ನು , ಶಾಸಕರು ಕಾಸರಗೋಡು.
ಪ್ರಾಕೃತಿಕ ವಿಕೋಪ ಬಾಧಿತ ಪ್ರದೇಶಗಳಲ್ಲಿ ಆದಷ್ಟು ಬೇಗ ಸರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು.
– ನ್ಯಾಯವಾದಿ, ಶ್ರೀಕಾಂತ್, ಜಿಲ್ಲಾ ಪಂಚಾಯತ್ ಸದಸ್ಯರು.