ವಿಜಯಪುರ: ಸರ್ಕಾರಿ ಶಾಲೆಗೆ ತನ್ನನ್ನು ಶಾಶ್ವತವಾಗಿ ಎಸ್.ಡಿ.ಎಂ.ಸಿ. ಅಧ್ಯಕ್ಷನಾಗಿ ಮಾಡುವಂತೆ ಆಗ್ರಹಿಸಿ ವ್ಯಕ್ತಿಯೊಬ್ಬ ಶಾಲೆಗೆ ಬೀಗ ಜಡಿದಿದ್ದು, ಮಕ್ಕಳು ಶಾಲೆಯ ಹೊರಗೆ ಕುಳಿತಿರುವ ಘಟನೆ ನಡೆದಿದೆ.
ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಳಗಾನೂರ ಕ್ರಾಸ್ ಬಳಿ ಇರುವ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಗೆ ರಾಮನಗೌಡ ದೋರನಹಳ್ಳಿ ಎಂಬಾತನೇ ಬೀಗ ಜಡಿದ ವ್ಯಕ್ತಿ.
ಸದರಿ ಸರ್ಕಾರಿ ಶಾಲೆಗೆ ನಮ್ಮ ಕುಟುಂಬದಿಂದ 3 ಗುಂಟೆ ಭೂಮಿ ದಾನ ನೀಡಿದ್ದೇವೆ. ಹೀಗಾಗಿ ಈ ಶಾಲೆಗೆ ನಾನೇ ಶಾಶ್ವತವಾಗಿ ಎಸ್.ಡಿ.ಎಂ.ಸಿ. ಅಧ್ಯಕ್ಷನಾಗಬೇಕು. ನನ್ನನ್ನೇ ಅಧ್ಯಕ್ಷನಾಗಿ ನೇಮಕ ಮಾಡಿ ಎಂದು ಪಟ್ಟು ಹಿಡಿದಿದ್ದಾನೆ.
ಆದರೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರದ ನಿಯಮದ ಪ್ರಕಾರ ಸದರಿ ಶಾಲೆಯಲ್ಲಿ ಸದ್ಯ ಓದುತ್ತಿರುವ ಮಕ್ಕಳ ಪಾಲಕರಲ್ಲಿ ಒಬ್ಬರನ್ನು ಅಧ್ಯಕ್ಷರಾಗಿ ನೇಮಿಸಲು ಮಾತ್ರ ಅವಕಾಶವಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಆದರೂ ಪಟ್ಟು ಸಡಿಲಿಸದ ರಾಮನಗೌಡ ಬುಧವಾರ ಏಕಾಏಕಿ ಶಾಲೆಯ ಎಲ್ಲ ಕೋಣೆಗಳು ಹಾಗೂ ಶಾಲಾ ಕಾಂಪೌಂಡ್ ಗೇಟ್ ಗೆ ಬೀಗ ಜಡಿದಿದ್ದಾನೆ.
ಇದರಿಂದಾಗಿ ಎಂದಿನಂತೆ ಪುಸ್ತಕದ ಬ್ಯಾಗ್ ಸಮೇತ ಶಾಲೆಗೆ ಬಂದ ಮಕ್ಕಳು, ಶಿಕ್ಷಕರು ಶಾಲೆಯ ಒಳಗೆ ಹೋಗಲಾಗದೇ ರಸ್ತೆಯಲ್ಲೇ ಕುಳಿತುಕೊಳ್ಳುವ ದುಸ್ಥಿತಿ ಎದುರಾಗಿದೆ.
ಇದನ್ನೂ ಓದಿ: Siddapura: ನಮಗೆ ಕಾಲು ಸಂಕ ಬೇಕು:ಹೊಳೆ ದಾಟುವಾಗ ಅಯ್ಯಪ್ಪನೇ ಕಾಪಾಡಬೇಕು!