Advertisement

ಫ್ಲೈಓವರ್‌ ಕಾಮಗಾರಿಗಾಗಿ ಬಂದಿಳಿದ ಯಂತ್ರಗಳು

10:03 AM Dec 20, 2019 | mahesh |

ಕುಂದಾಪುರ: ಮಾರ್ಚ್‌ ಅಂತ್ಯದ ವೇಳೆಗೆ ಕಾಮಗಾರಿ ಮುಗಿದು ಎಪ್ರಿಲ್‌ನಲ್ಲಿ ಲೋಕಾರ್ಪಣೆಯಾಗಿ ಕುಂದಾಪುರ ನಗರದ ಫ್ಲೈಓವರ್‌ ಮೇಲೆ ವಾಹನಗಳ ಓಡಾಟ ಆರಂಭವಾಗಲಿದೆ. ಇದು ಸದ್ಯದ ಮಟ್ಟಿಗೆ ಕುಂದಾಪುರ ಜನತೆ ಕಾಣುತ್ತಿರುವ ಕನಸು. ಅದೆಷ್ಟು ನನಸಾಗಲಿದೆ ಗೊತ್ತಿಲ್ಲ. ಏಕೆಂದರೆ ಅಧಿಕಾರಿಗಳಿಗೂ ಜನಪ್ರತಿನಿಧಿಗಳಿಗೂ ಇದು ಪರಿಹರಿಸಿಕೊಳ್ಳುವ ದರ್ದು ಕಾಣದ ತಲೆನೋವು.

Advertisement

ಇಕ್ಕಟ್ಟಿನ ಸ್ಥಿತಿ
ಫ್ಲೈಓವರ್‌ ಕಾಮಗಾರಿ ಬೇಗ ಪೂರ್ಣ ಗೊಳಿಸಬೇಕೆಂದು ಒತ್ತಡ ಹೆಚ್ಚಾಗುತ್ತಿದೆ. ವಿವಿಧ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಬಹುದೊಡ್ಡ ಪಕ್ಷವಾದ ಬಿಜೆಪಿಗೆ ಇದು ನುಂಗಲಾರದ ತುತ್ತಾಗಿದೆ. ಅತ್ತ ಕಾಂಗ್ರೆಸ್‌, ಎಡಪಕ್ಷಗಳು, ವಿವಿಧ ಸಂಘಟನೆಗಳು, ರಾಷ್ಟ್ರೀಯ ಹೆದ್ದಾರಿ ಜಾಗೃತಿ ಹೋರಾಟ ಸಮಿತಿ, ಪತ್ರಕರ್ತರ ಸಂಘದವರು ಧರಣಿ, ಪ್ರತಿಭಟನೆ, ಪ್ರಧಾನಿಗೆ ಮನವಿ ಎಂದು ನಾನಾ ವಿಧದಲ್ಲಿ ಫ್ಲೈಓವರ್‌ ಕಾಮಗಾರಿ ಪೂರ್ಣಗೊಳಿಸಲು ಹೋರಾಟ ಮಾಡುತ್ತಿದ್ದಾರೆ. ಈ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಲೂ ಆಗದೆ ಫ್ಲೈಓವರ್‌ ಕಾಮಗಾರಿಯನ್ನು ಸಮರ್ಥಿಸಲೂ ಆಗದೇ ಬಿಜೆಪಿ ಇಕ್ಕಟ್ಟಿನಲ್ಲಿದೆ. ತಮ್ಮದೇ ಪಕ್ಷದ ಸಂಸದರು, ಕೇಂದ್ರ ಸರಕಾರ ಇರುವಾಗ ಎಂಟತ್ತು ವರ್ಷಗಳಿಂದ ಬಾಕಿಯಾದ, ಇಡಿ ಜಿಲ್ಲೆಗೆ ಇರುವ ಏಕೈಕ ಫ್ಲೈಓವರನ್ನು ಪೂರ್ಣಗೊಳಿಸಲು ಸಾಧ್ಯವಾಗದ ಸ್ಥಿತಿ ಇದೆ. ಗುತ್ತಿಗೆದಾರರು ನಾನಾ ಕಾರಣಗಳಿಂದ ಕಾಮಗಾರಿಯ ವೇಗ ಕುಂಠಿತಗೊಳಿಸುತ್ತಿದ್ದಾರೆ. ಕಾನೂನು ಸಂಘರ್ಷ, ಆರ್ಥಿಕ ಹೊಡೆತ ಎಂದು ಗುತ್ತಿಗೆದಾರರು ಕಾಮಗಾರಿ ನಡೆಸುತ್ತಿಲ್ಲ. ಸಿಬಂದಿ ವೇತನ ಕೂಡ ಸರಿಯಾದ ಸಮಯದಲ್ಲಿ ನೀಡದ ಕಾರಣ ನೌಕರರ ಪ್ರತಿಭಟನೆ ಕೂಡ ನಡೆದಿದೆ.

ಭೇಟಿ
ಚುನಾವಣೆ ಸಂದರ್ಭ ಹಾಗೋ ಹೀಗೋ ಫ್ಲೈಓವರ್‌ ಆಗುತ್ತದೆ ಎಂದು ಮಾತು ತೇಲಿಸಿ, ಮೋದಿ ಹೆಸರಿನಲ್ಲಿ ಗೆಲುವು ದೊರೆತರೂ ಫ್ಲೈಓವರ್‌ ಮಾತ್ರ ಮೇಲೇಳಲೇ ಇಲ್ಲ. ನಂತರದ ದಿನಗಳಲ್ಲಿ ಫ್ಲೈಓವರ್‌ ನಿರ್ಮಾಣ, ಮಂಜೂರು ಕುರಿತಂತೆ ಹೇಳಿಕೆಗಳ ಕೆಸರೆರಚಾಟ ನಡೆಯಿತು. ನನ್ನ ಅವಧಿಯದ್ದಲ್ಲ, ಮಾಡಿಸಿದವರ ತಪ್ಪು ಎಂಬಂತೆ ಸಂಸದರು ಮಾತನಾಡಿದರೆ ನನ್ನ ಅವಧಿಯಲ್ಲಿ ಜನರ ಬೇಡಿಕೆಯಂತೆ ಮಂಜೂರಾಗಿದೆ ಎಂದು ಮಾಜಿ ಸಂಸದರು ತಿರುಗೇಟು ನೀಡಿದ್ದೂ ಆಯಿತು. ಇವೆಲ್ಲ ಬೆಳವಣಿಗೆಗಳ ಜತೆಗೆ ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜತೆ ಕುಂದಾಪುರದಲ್ಲೇ ಸಂಸದರು ಸಭೆ ನಡೆಸಿದರು. ಕಾಮಗಾರಿ ಆಗದೆ ಇದ್ದಲ್ಲಿ ಟೋಲ್‌ ನಿಲ್ಲಿಸುವುದಾಗಿ ಜಿಲ್ಲಾಧಿಕಾರಿ ಎಚ್ಚರಿಸಿದರು. ಯಾವುದೇ ಪ್ರಯೋಜನ ನಡೆಯಲಿಲ್ಲ. ಖುದ್ದು ಹೆದ್ದಾರಿ ಸಚಿವರನ್ನೇ ಭೇಟಿ ಮಾಡಿದ ಸಂಸದೆ ಮನವಿ ನೀಡಿದರು. ಸಂಸದರ ಸಭೆಯಲ್ಲಿ ಶಾಸಕರು ಕೂಡ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿದ್ದಾರೆ. ಅದಾದ ಬಳಿಕ ಒಂದಷ್ಟು ಕಾಮಗಾರಿ ನಡೆದಿರುವುದು ನಿಜ.

ಕೇಸಿನ ಎಚ್ಚರಿಕೆ
ಎಸಿಯವರಂತೂ ಹೆದ್ದಾರಿ ವಿಚಾರದಲ್ಲಿ ಸ್ಪಷ್ಟ ನಿಲುವು ಹೊಂದಿದ್ದಾರೆ. ಎಪಿಎಂಸಿ ಬಳಿ ಪ್ರತಿಭಟನೆ ನಡೆದಾಗ, ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಪ್ರತಿಭಟಿಸಿದಾಗ, ಪತ್ರಕರ್ತರ ಸಂಘ ಪ್ರತಿಭಟಿಸಿದಾಗ ಅವರು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೀಗ ಹೆದ್ದಾರಿ ಅಧಿಕಾರಿಗಳನ್ನು ಸಂಪರ್ಕಿಸಿ ಗುತ್ತಿಗೆದಾರರ ವಿರುದ್ಧ ಕೇಸು ಮಾಡುವುದು ಖಚಿತ ಎಂದು ಎಚ್ಚರಿಸಿದ್ದಾರೆ. ಈ ಹಿಂದಿನ ಎಸಿಯವರು ಕೇಸು ದಾಖಲಿಸಿ 2019ರ ಮಾರ್ಚ್‌ ಕೊನೆಗೆ ಕಾಮಗಾರಿ ಪೂರ್ಣಗೊಳಿಸಲು ಆದೇಶ ನೀಡಿದ್ದರು. ಆ ಆದೇಶವೇ ಪಾಲನೆಯಾಗಿಲ್ಲ. ಆದ್ದರಿಂದ ಅದೇ ಕೇಸನ್ನು ಮರುತೆರೆದು ಮುಂದುವ ರಿಸುವುದಾಗಿ ಈಗಿನ ಎಸಿಯವರು ಎಚ್ಚರಿಸಿದ್ದಾರೆ.

ಕಾಮಗಾರಿ
ಕೆಎಸ್‌ಆರ್‌ಟಿಸಿ ಬಳಿ ಕ್ಯಾಟಲ್‌ ಅಂಡರ್‌ಪಾಸ್‌, ಬಸ್ರೂರು ಮೂರುಕೈ ಬಳಿ ಪಾದಚಾರಿ ಅಂಡರ್‌ಪಾಸ್‌ ಕಾಮಗಾರಿ ನಡೆದಿದೆ. ಫ್ಲೈಓವರ್‌ಗೆ ಸಂಪರ್ಕ ರಸ್ತೆ ಕಲ್ಪಿಸಲು ಮಣ್ಣು ತುಂಬಿಸುವ ಕೆಲಸ ಸ್ವಲ್ಪ ನಡೆದಿದೆ. ರಸ್ತೆ ನಿರ್ಮಾಣಕ್ಕೆ ಸ್ವಲ್ಪ ಗುಂಡಿ ತೆಗೆಯಲಾಗಿದೆ. ಉಳಿದಂತೆ ಎಲ್ಲ ಕಾಮಗಾರಿಗಳೂ ಹಾಗೆಯೇ ಇದೆ. ಯಂತ್ರಗಳನ್ನು ತಂದಿಳಿಸಲಾಗಿದೆ.

Advertisement

ಎಸಿಗೆ ಸ್ಪಂದನೆ
ಹೆದ್ದಾರಿ ಜಾಗೃತಿ ಹೋರಾಟ ಸಮಿತಿ ಕುಂದಾಪುರ ಉಪವಿಭಾಗಾಧಿಕಾರಿಗಳನ್ನು ಭೇಟಿಯಾಗಿ ಕಾಮಗಾರಿ ನಿಂತಿರುವುದನ್ನು ಗಮನಕ್ಕೆ ತಂದಿತು. ಹೋರಾಟ ಮುಂದುವರಿಸುವ ಸುಳಿವು ನೀಡಲು ತೆರಳಿದ್ದರು. ಸಮಿತಿಯವರ ಎದುರೇ ನವಯುಗದ ಅಧಿಕಾರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ನವಯುಗದ ಅಧಿಕಾರಿ ನಾಳೆಯಿಂದಲೇ ಹೆಚ್ಚಿನ ಯಂತ್ರೋಪಕರಣಗಳು, ಟಿಪ್ಪರ್‌ ಇತ್ಯಾದಿ ವಾಹನಗಳು ಬರಲಿವೆ, ಕಾಮಗಾರಿ ವಿಳಂಬವಾಗದು ಎಂದು ಹೇಳಿದ್ದಾರೆ. ಅದರಂತೆ ಯಂತ್ರಗಳು ಬಂದಿಳಿದಿವೆ.

ಪ್ರತಿನಿತ್ಯ ಟ್ರೋಲ್‌
ಮಂಗಳೂರು ಪಂಪ್‌ವೆಲ್‌ ಫ್ಲೈಓವರ್‌ ದಿನದಿನ ವಿಧವಿಧ ರೀತಿಯಲ್ಲಿ ಟ್ರೋಲ್‌ಗೆ ಒಳಗಾಗುತ್ತಿದೆ. ಪಂಪ್‌ವೆಲ್‌ ಕುರಿತಾಗಿ ಸಂದೇಶ ಬಂದ ಕೂಡಲೇ ಕುಂದಾಪುರ ಫ್ಲೈಓವರ್‌ ಕುರಿತೂ ಸಂದೇಶ ಸೃಷ್ಟಿಯಾಗಿ ಹರಡುತ್ತದೆ. ಕುಂದಾಪುರ ಫ್ಲೈಓವರ್‌ ಕುರಿತೂ ಸಾಮಾಜಿಕ ಜಾಲತಾಣದಲ್ಲಿ ಪ್ರತಿ ನಿತ್ಯ ಟ್ರೋಲ್‌ಗ‌ಳು ಮಾಮೂಲಿ ಬಿಟ್ಟಿದೆ.

ಹೋರಾಟ ನಿಲ್ಲದು
ನವಯುಗ ಮತ್ತು ಎನ್‌ಎಚ್‌ಎಐ ಜನರನ್ನು ಮೂರ್ಖರಾಗಿಸುವ ಪ್ರಯತ್ನ ಮಾಡುತ್ತಿದೆ. ನಮ್ಮ ಹೋರಾಟ ನಿಲ್ಲುವುದಿಲ್ಲ. ಸದ್ಯದಲ್ಲೇ ಆ ಕುರಿತು ಸಭೆ ಕರೆಯಲಿದ್ದೇವೆ.
-ಕಿಶೋರ್‌ ಕುಮಾರ್‌, ಸಂಚಾಲಕರು, ರಾಷ್ಟ್ರೀಯ ಹೆದ್ದಾರಿ ಜಾಗೃತಿ ಹೋರಾಟ ಸಮಿತಿ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next