ರಾಯಚೂರು: ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಧೋರಣೆಗೆ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ತೀವ್ರ ಬೇಸರ ವ್ಯಕ್ತಪಡಿಸಿದ ಪ್ರಸಂಗ ಶನಿವಾರ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕೈಗಾರಿಕೆ ಅಭಿವೃದ್ಧಿ ಕುರಿತು ಕ್ರಿಯಾ ಯೋಜನೆ
ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೈಗಾರಿಕಾ ಕೇಂದ್ರದಲ್ಲಿ ಜಮೀನು ಕೊರತೆಯಿದ್ದು, ಬೇಡಿಕೆ ಹೆಚ್ಚಿದ್ದರೂ ಅಧಿಕಾರಿಗಳು ಭೂಸ್ವಾಧೀನಕ್ಕೆ ಮುಂದಾಗುತ್ತಿಲ್ಲ. ತಾಲೂಕು ಪ್ರದೇಶಗಳಲ್ಲೂ ಕೈಗಾರಿಕೆಗಳಿಗೆ ಲಭ್ಯವಿರುವ ಕೈಗಾರಿಕಾ ಕೇಂದ್ರಗಳ ಅಭಿವೃದ್ಧಿ ಯೋಜನೆ ರೂಪಿಸಬೇಕು.
ದೇವದುರ್ಗದಲ್ಲಿ ಶೇ.22.30ರಷ್ಟು ಕೈಗಾರಿಕೆ ಭೂಮಿಯಿದ್ದು, ಅದನ್ನು ಅಭಿವೃದ್ಧಿ ಪಡಿಸಿ ಕೃಷಿ ಮತ್ತು ನೀರಾವರಿ ಪ್ರದೇಶಕ್ಕೆ ಅಗತ್ಯವಿರುವ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಬೇಕು ಎಂದರು.
ರಾಜ್ಯ ಹಣಕಾಸು ಸಂಸ್ಥೆಯಿಂದ 2018-19ನೇ ಸಾಲಿಗೆ 11 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಮಹಿಳಾ ಉದ್ಯೋಗಕ್ಕಾಗಿ ಶೇ.4ರಷ್ಟು ಬಡ್ಡಿ ದರದಲ್ಲಿ ಉದ್ಯೋಗಕ್ಕಾಗಿ ಸಾಲ ಯೋಜನೆ ಮಂಜೂರಾಗಿದೆ. ಹೊಸ ಕೈಗಾರಿಕೆಗಳು ಸ್ಥಾಪಿಸಲು ಪ್ರೋತ್ಸಾಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕೈಗಾರಿಕಾ ಕೇಂದ್ರದಲ್ಲಿರುವ 18 ಕೈಗಾರಿಕೆಗಳಿಂದ ಹೊರಬರುವ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪಿಸಲು ಐದು ಎಕರೆ ಭೂಮಿಯನ್ನು ಲೀಸ್ ಆಧಾರದ ಮೇಲೆ ಒಪ್ಪಂದ ಮಾಡಿಕೊಂಡಿದ್ದು, ಶೀಘ್ರ ಘಟಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸಭೆಗೆ ತಿಳಿಸಿದರು.
ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಶಿ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕೆ.ಮಹ್ಮದ್ ಇರ್ಫಾನ್,
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮುರಳಿ, ದೇಶಬಂಧು ದಾಸ್, ಕೆಎಸ್‌ಎಫ್‌ಸಿ ವ್ಯವಸ್ಥಾಪಕ ಚಂದ್ರಶೇಖರ, ಜವಳಿ ಇಲಾಖೆ ಅಧಿಕಾರಿ ರಾಘವೇಂದ್ರ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.