Advertisement
ಕಡಬ ಭಾಗಕ್ಕೆ ಪ್ರತ್ಯೇಕವಾಗಿ ಅಗ್ನಿಶಾಮಕ ಠಾಣೆ ಆರಂಭಿಸಬೇಕೆನ್ನುವ ಬೇಡಿಕೆ ಹಲವು ಸಮಯದಿಂದ ಕೇಳಿಬರುತ್ತಿತ್ತು. ಪರಿಸರದಲ್ಲಿ ಅಗ್ನಿ ದುರಂತಗಳು ಹಾಗೂ ಇತರ ಅವಘಡಗಳು ಸಂಭವಿಸಿದರೆ ದೂರದ ಪುತ್ತೂರಿನಿಂದ ಅಗ್ನಿಶಾಮಕ ದಳ ಬರಬೇಕಿದೆ. ಹಲವಾರು ಸಂದರ್ಭಗಳಲ್ಲಿ ಅಗ್ನಿ ದುರಂತ ನಡೆದಾಗ ಅಗ್ನಿ ಶಾಮಕ ವಾಹನ ಕಡಬ ತಲುಪುವ ವೇಳೆಗೆ ಸೊತ್ತುಗಳು ಸುಟ್ಟು ಕರಕಲಾಗಿ ಅಪಾರ ಹಾನಿ ಸಂಭವಿಸಿರುತ್ತದೆ. ಮುಖ್ಯವಾಗಿ ಕಡಬ ಸೇರಿದಂತೆ ಪರಿಸರದ ಮರ್ದಾಳ, ಕೋಡಿಂಬಾಳ, ಐತ್ತೂರು, ಕುಂತೂರು, ಪೆರಾಬೆ, ಕೊಂಬಾರು, ಸಿರಿಬಾಗಿಲು ಮುಂತಾದೆಡೆ ಹೆಚ್ಚಾಗಿ ಅರಣ್ಯ ಪ್ರದೇಶವಿದೆ. ಕಡಬ ಸುತ್ತಮುತ್ತ ಖಾಸಗಿ ಹಾಗೂ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ಸೇರಿದ ಸಾವಿರಾರು ಎಕರೆ ರಬ್ಬರ್ ಪ್ಲಾಂಟೇಶನ್ ಕೂಡ ಇದೆ. ಅರಣ್ಯ ಅಥವಾ ರಬ್ಬರ್ ಪ್ಲಾಂಟೇಶನ್‌ಗಳಿಗೆ ಬೆಂಕಿ ಬಿದ್ದರೆ ಅದು ನೂರಾರು ಎಕರೆ ಪ್ರದೇಶಕ್ಕೆ ಪಸರಿಸಿ ಅಪಾರ ನಷ್ಟವುಂಟಾಗುತ್ತದೆ. ಸ್ಥಳೀಯರು ಸೇರಿಕೊಂಡು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಕಡಬಕ್ಕೆ ಪ್ರತ್ಯೇಕವಾಗಿ ಅಗ್ನಿಶಾಮಕ ಠಾಣೆ ಆರಂಭಿಸಬೇಕೆನ್ನುವ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
Related Articles
Advertisement
-ನಾಗರಾಜ್ ಎನ್.ಕೆ.