ಕೊಳ್ಳೇಗಾಲ: ತಾಲೂಕಿನ ನರೀಪುರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಹನೂರು ಶಾಸಕ ಆರ್.ನರೇಂದ್ರ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಹದಗೆಟ್ಟಿರುವ ರಸ್ತೆ ಅಭಿವೃದ್ಧಿಗಾಗಿ ಸಚಿವರ ಗಮನ ಸೆಳದು, ರಸ್ತೆ ಡಾಂಬರೀಕರಣಕ್ಕೆ 15 ಕೋಟಿ ರೂ. ಅನುದಾನ ಮಂಜೂರು ಹಾಗಿದ್ದು, ತಾಲೂಕಿನ ನರೀಪುರ ಗ್ರಾಮದಿಂದ ಮತ್ತೀಪುರದ ವರೆಗಿನ 5.11 ಕಿಲೋ ಮೀಟರ್ ರಸ್ತೆ ಮತ್ತು ಪಟ್ಟಣದ ಆರ್‌ಸಿಎಂ ಶಾಲೆ ಯಿಂದ ಮಧುವನ ಹಳ್ಳಿಯ ವರೆಗೆ 3.33 ಕಿಲೋ ಮೀಟರ್ ಡಾಂಬರ್ ರಸ್ತೆ ಹಾಗೂ ಗುಂಡಾಲ್ ಜಲಾಶಯದ ಅಡ್ಡ ರಸ್ತೆಯಿಂದ ಲೊಕ್ಕನಹಳ್ಳಿವರೆಗೆ 6.75 ಕಿಲೋ ಮೀಟರ್ ರಸ್ತೆ ಸೇರಿದಂತೆ 3 ಕಾಮಗಾರಗಳಿಂದ ಒಟ್ಟು 15 ಕೋಟಿ ರೂ. ಅಂದಾಜಿನಲ್ಲಿ 15 ಕಿಲೋ ಮೀಟರ್ ಡಾಂಬರೀಕಣ ರಸ್ತೆ ನಿರ್ಮಾಣವಾಗಲಿದೆ. ಕ್ಷೇತ್ರದಲ್ಲಿ ಎಂ.ಡಿ.ಆರ್ ರಸ್ತೆ 72 ಕಿಲೋ ಮೀಟರ್ ಇದೆ. ಇದರಲ್ಲಿ 70 ಕಿಲೋ ಮೀಟರ್ ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಉಳಿದ ರಸ್ತೆಯನ್ನು ಮುಂದಿನ ಸೋಮವಾರ ಭೂಮಿಪೂಜೆ ಮಾಡಿ, ರಸ್ತೆ ಡಾಂಬರೀಕರಣ ಮಾಡಲಾಗುವುದು ಎಂದು ಹೇಳಿದರು.
ರಸ್ತೆ ಗುಂಡಿ ಮುಚ್ಚಲು ಕ್ರಮ: ನೂತನ ವರ್ಷದ ಜನವರಿ ತಿಂಗಳಲ್ಲಿ ತಾಲೂಕಿನ ಪವಾಡ ಪುರುಷ ಚಿಕ್ಕಲ್ಲೂರು ಸಿದ್ದಪ್ಪಾಜಿ ಬೃಹತ್ ಜಾತ್ರಾ ಮಹೋತ್ಸವ ನಡೆಯಲಿದೆ. ಹದಗೆಟ್ಟಿರುವ ರಸ್ತೆಗಳನ್ನು ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ತಾಲೂಕಿನ ಸತ್ತೇಗಾಲ ದಿಂದ ಚಿಕ್ಕಲ್ಲೂರಿನ ರಸ್ತೆ ಮತ್ತು ಪಾಳ್ಯದಿಂದ ಚಿಕ್ಕಲ್ಲೂರು ರಸ್ತೆಗಳನ್ನು ಸರಿಪಡಿಸಿ, ಜಾತ್ರೆ ಸುಗಮವಾಗಿ ನಡೆಯುವಂತೆ ಮಾಡಲಾಗುವುದು.
ಜಾತ್ರೆ ಹಿನ್ನಲೆಯಲ್ಲಿ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣಕ್ಕೆ ಸಚಿವರಿಂದ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದು, ಜಾತ್ರೆಯ ಬಳಿಕ ಎಲ್ಲಾ ರಸ್ತೆಗಳು ಡಾಂಬರೀಕರಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ತಾಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್ ಕುಮಾರ್, ತಾಲೂಕು ಪಂಚಾಯ್ತಿ ಸದಸ್ಯ ಸುರೇಶ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಮರಗದ ಮಣಿ, ಧನಗೆರೆ ಗ್ರಾಪಂ ಅಧ್ಯಕ್ಷ ಕುಮಾರ್, ಲೋಕೋಪಯೋಗಿ ಇಲಾಖೆ ಎಇಇ ಮಹದೇವಸ್ವಾಮಿ, ಸಹಾಯಕ ಎಂಜಿನಿಯರ್ ರಮೇಶ್, ಗುತ್ತಿಗೆದಾರ ವಾಲೆ ಮಹದೇವು, ಮುಖಂಡ ಯಡಕುರಿಯ ಮಹದೇವ, ಧನಗೆರೆ ಮಹದೇವ, ಗ್ರಾಪಂ ಮಾಜಿ ಅಧ್ಯಕ್ಷ ಶಿವಶಂಕರ್, ಸಿದ್ದರಾಜು, ವೆಂಕಟರಾಮು, ಸೀಗ ನಾಯಕ ಹಾಜರಿದ್ದರು.