Advertisement

ಶೀಘ್ರದಲೇ ವೈದ್ಯಕೀಯ ಕಾಲೇಜಿಗೆ ಭೂಮಿಪೂಜೆ

12:41 AM Sep 30, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಸದ್ಯದಲೇ ಮುಖ್ಯಮಂತ್ರಿಗಳಿಂದ ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲೆಯ ನೂತನ ಪ್ರಭಾರಿ ಉಸ್ತುವಾರಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು.

Advertisement

ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ಭಾನುವಾರ ಆರಂಭಗೊಂಡ ನವರಾತ್ರಿ ಉತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಗೆ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರ 670 ಕೋಟಿ ರೂ. ಅನುದಾನ ಒದಗಿಸಲು ಸಿದ್ಧವಿದೆ ಎಂದರು.

ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ: ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಕೈಗೆತ್ತಿಕೊಳ್ಳಲಿದೆ. ಈ ಭಾಗದ ಜನರ ಆಶೋತ್ತರಗಳಿಗೆ ಪೂರಕವಾಗಿ ರಾಜ್ಯ ಸರ್ಕಾರ ಕೆಲಸ ಮಾಡಲಿದೆ. ಈ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಶಾಶ್ವತ ನೀರಾವರಿ ಬಗ್ಗೆಯು ಸರ್ಕಾರ ಗಂಭೀರ ಚಿಂತನೆ ನಡೆಸಲಿದೆ. ಈಗಾಗಲೇ ಅನುಷ್ಠಾನಗೊಳ್ಳುತ್ತಿರುವ ಎತ್ತಿನಹೊಳೆ ಹಾಗೂ ಹೆಬ್ಟಾಳ ಹಾಗೂ ನಾಗವಾರ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಹೊಸ ಜಿಲ್ಲೆಗೆ ಅಪಸ್ವರ ಬೇಡ: ನೂತನ ಜಿಲ್ಲೆಯಾಗಿ ವಿಜಯನಗರ ರಚನೆಗೆ ಆ ಭಾಗದ ಪ್ರಭಾವಿ ಮುಖಂಡರು ವಿರೋಧ ವ್ಯಕ್ತಪಡಿಸಿರುವ ಕುರಿತು ಗಮನ ಸೆಳೆದಾಗ, ಕೆಲವರು ಅವರವರ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಒಟ್ಟಾರೆ ಈ ಸರ್ಕಾರದಲ್ಲಿ ಒಳ್ಳೆಯ ಕಾರ್ಯಗಳು ಆಗಬೇಕು. ಈ ಭಾಗದ ಜನರ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು. ಆ ದಿಸೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ನಿಲುವು ತೆಗೆದುಕೊಳ್ಳುತ್ತಾರೆ. ಆ ನಿಟ್ಟಿನಲ್ಲಿ ನಾವು ಅನುಷ್ಠಾನಕ್ಕೆ ತರುವ ಕೆಲಸ ಮಾಡುತ್ತೇವೆ. ವಿಜಯ ನಗರಕ್ಕೂ ಕೂಡ ಇತಿಹಾಸವಿದೆ. ಆ ಭಾಗದ ಅಭಿವೃದ್ಧಿ ಕೂಡ ಸರ್ಕಾರದ ಗಮನದಲ್ಲಿದೆ. ವಿಜಯನಗರ ಜಿಲ್ಲೆಯಾಗುವುದನ್ನು ಪ್ರತಿಯೊಬ್ಬರು ಸ್ವಾಗತಿಸಬೇಕು ಎಂದರು.

ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ಸರ್ಕಾರ ವಿಫ‌ಲವಾಗಿದೆ ಎಂಬ ವಿರೋಧ ಪಕ್ಷಗಳ ಹೇಳಿಕೆಯನ್ನು ಅಲ್ಲಗಳೆದ ಅವರು, ಈಗಾಗಲೇ ರಾಜ್ಯ ಸರ್ಕಾರ ನೆರೆ ಸಂತ್ರಸ್ತರ ಜಿಲ್ಲೆಗಳಿಗೆ 1500 ಕೋಟಿ ರೂ. ಪರಿಹಾರ ಹಣವನ್ನು ಸಂಬಂಧಪಟ್ಟ ಜಿಲ್ಲೆಗಳಿಗೆ ಬಿಡುಗಡೆ ಮಾಡಿದೆ. ಮನೆ ಕಳೆದುಕೊಂಡ ಸಂತ್ರಸ್ತರಿಗೆ 5 ಲಕ್ಷ ರೂ. ವೆಚ್ಚದಲ್ಲಿ ಮನೆ ಕಟ್ಟಿ ಕೊಡುವ ಕೆಲಸವನ್ನು ಸರ್ಕಾರ ಕೈಗೆತ್ತಿಕೊಂಡಿದೆ. ನೆರೆ ಸಂತ್ರಸ್ತರಿಗೆ ಶಾಶ್ವತವಾದ ಪರಿಹಾರ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದರು.

Advertisement

ಅನರ್ಹರು ಪಕ್ಷಕ್ಕೆ ಬಂದರೆ ಸ್ವಾಗತ: ಅನರ್ಹ ಶಾಸಕರು ಬಿಜೆಪಿಗೆ ಬಂದರೆ ಸ್ವಾಗತ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ ತಿಳಿಸಿದರು. ಈಗಾಗಲೇ ಘೋಷಣೆಯಾಗಿರುವ 15 ಕ್ಷೇತ್ರಗಳಲ್ಲಿನ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು ಬಿಜೆಪಿ ಎಲ್ಲಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next