Advertisement

ಬಸ್‌ ನಿಲ್ದಾಣಕ್ಕೆ ಸ್ಥಳ ಗುರುತಿಸಲು ಸೂಚನೆ

05:08 PM Nov 18, 2020 | Suhan S |

ಆಳಂದ: ಕೇಂದ್ರೀಯ ವಿದ್ಯಾಲಯ ಬಳಿಬಸ್‌ ನಿಲ್ದಾಣ ಸ್ಥಾಪಿಸಲು ಶೀಘ್ರವೇ ಸ್ಥಳ ಒದಗಿಸುವಂತೆ ತಹಶೀಲ್ದಾರ್‌ಗೆ ಕೇಳಿಕೊಳ್ಳಲಾಗಿದೆ ಎಂದು ಶಾಸಕ ಸುಭಾಷ ಗುತ್ತೇದಾರ ಹೇಳಿದರು.

Advertisement

ಪಟ್ಟಣದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ಕೋವಿಡ್‌-19 ಹರಡಿದ ಹಿನ್ನೆಲೆಯಲ್ಲಿ ಹಾಗೂ ತಮ್ಮಅನಾರೋಗ್ಯದ ನಿಮಿತ್ತ ಅನೇಕ ಕೆಲಸಗಳನ್ನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸದ ಹಿನ್ನೆಲೆಯಲ್ಲಿ ಹಿನ್ನಡೆಯಾಗಿದೆ. ಇನ್ಮುಂದೆ ಪ್ರಸ್ತಾಪಿತ ಕಾರ್ಯಗಳಿಗೆ ಮರುಜೀವ ನೀಡಲು ಮುಂದಾಗಿದ್ದೇನೆ ಎಂದರು.

ಬಹುದಿನಗಳ ಬೇಡಿಕೆಯಾದ ಹೊಸ್‌ ಚೆಕ್‌ಪೋಸ್ಟ್‌ನಿಂದ ಎಚ್‌ಕೆಇ ಪದವಿ ಕಾಲೇಜು ಮಾರ್ಗದ ತಡಕಲ್‌ ರಸ್ತೆ ವರೆಗೆ ವರ್ತುಲ (ಬೈಪಾಸ್‌) ರಸ್ತೆ ನಿರ್ಮಾಣಕ್ಕೆ ಎರಡು ಕೋಟಿ ರೂ. ಇಡಲಾಗಿದ್ದು, ಟೆಂಡರ್‌ ಪ್ರಕ್ರಿಯೆ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ. ಇದರಿಂದ ಸಂಚಾರ ದಟ್ಟಣೆ ನಿಯಂತ್ರಣವಾಗುತ್ತದೆ ಎಂದು ಹೇಳಿದರು.

ಉಮರಗಾ ರಸ್ತೆಯ ತೆಲಾಕುಣಿ ಮಾರ್ಗದಲ್ಲಿ ಈ ಹಿಂದೆ ಮಿನಿ ವಿಧಾನಸೌಧಕ್ಕೆ ನೀಡಿದ ಜಾಗದಲ್ಲಿ ಬಸ್‌ ನಿಲ್ದಾಣ ಸ್ಥಾಪಿಸಬೇಕು ಎನ್ನುವಉದ್ದೇಶವಿತ್ತು. ಆದರೆ ಆ ಸ್ಥಳವನ್ನು ಮಾಲೀಕರು ವಾಪಸ್‌ ಪಡೆದಿದ್ದಾರೆ. ಚೆಕ್‌ ಪೋಸ್ಟ್‌ ಹತ್ತಿರ ಸಂತೋಷ ಗುತ್ತೇದಾರ ಎನ್ನುವರು ಎರಡು ಎಕರೆ ನಿವೇಶನ ನೀಡಲು ಮುಂದೆ ಬಂದಿದ್ದಾರೆ. ಇದು ಪಟ್ಟಣದಿಂದದೂರವಾಗುತ್ತದೆ. ಅಲ್ಲದೇ ಬಸ್‌ ನಿಲ್ದಾಣಕ್ಕೆ ಕನಿಷ್ಠ 10 ಎಕರೆ ನಿವೇಶನ ಅಗತ್ಯವಿದೆ. ಈಗಿರುವ ಬಸ್‌ ನಿಲ್ದಾಣ ಹತ್ತಿರ, ಎಪಿಎಂಸಿ ನಿವೇಶನದಲ್ಲೇ ನಿಲ್ದಾಣ ಸ್ಥಾಪಿಸಬೇಕು ಎಂದರೆ ಸದ್ಯ ನಿವೇಶನ ಕೋರ್ಟ್‌ನಲ್ಲಿ ವ್ಯಾಜ್ಯವಿದೆ. ಹೀಗಾಗಿ ಸೂಕ್ತ ಸ್ಥಳ ದೊರೆತರೆ ಬಸ್‌ ನಿಲ್ದಾಣ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ಕೇಂದ್ರೀಯ ವಿದ್ಯಾಲಯಕ್ಕೆ ಚಿತಲಿ ಪಾಟಿಯ ಹತ್ತಿರ ಅಥವಾ ಕಲಬುರಗಿ ಮಾರ್ಗದ ಡೋಗಾಳ ಹತ್ತಿರದ ನಿವೇಶನದಲ್ಲಿ ಬಸ್‌ ನಿಲ್ದಾಣ ಸ್ಥಾಪಿಸುವ ಉದ್ದೇಶವಿದೆ. ಎರಡರಲ್ಲಿ ಒಂದು ಸ್ಥಳ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

Advertisement

ಅತಿಯಾದ ಮಳೆಯಿಂದ ತಾಲೂಕಿನ 190 ಮನೆಗಳಿಗೆ ಹಾನಿಯಾಗಿದೆ. ಈ ಪ್ರಯುಕ್ತ 12.90ಲಕ್ಷ ರೂ. ಪರಿಹಾರ ವಿತರಣೆಯಾಗಿದೆ. ಬೆಳೆ ಹಾನಿ ಡಾಟಾಎಂಟ್ರಿ ಕಾರ್ಯ ಪ್ರಗತಿಯಲಿದೆ. ಈಗಾಗಲೇ 42 ಸಾವಿರ ರೈತರ ಹಾನಿಯನ್ನು ದಾಖಲಿಸಲಾಗಿದೆ. ಇನ್ನಷ್ಟು ಬಾಕಿ ನೋಂದಣಿ ಮುಗಿದ ಮೇಲೆ ಪರಿಹಾರ ಮೊತ್ತ ರೈತರ ಖಾತೆಗಳಿಗೆ ಬರಲಿದೆ ಎಂದರು.

ಪುರಸಭೆ ಅಧ್ಯಕ್ಷೆ ರಾಜೇಶ್ರೀ ಶ್ರೀಶೈಲ, ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ಸದಸ್ಯ ಶ್ರೀಶೈಲ ಪಾಟೀಲ, ಬಿಜೆಪಿ ಅಧ್ಯಕ್ಷ ಆನಂದ ಪಾಟೀಲ, ಶಿವಪುತ್ರಪ್ಪ ಬೆಳ್ಳೆ, ಮಲ್ಲಣ್ಣಾ ನಾಗೂರೆ, ಅಪ್ಪಾಸಾಬ ಗುಂಡೆ, ವಿಜಯಕುಮಾರ ಕೋಥಳಿಕರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next