Advertisement

ನಮೋ ನಗರ ಮಾದರಿಯಾಗಲಿ

04:26 PM Nov 12, 2020 | Suhan S |

ವಿಜಯಪುರ: ಪ್ರಧಾನಿಗಳ ಹೆಸರಿನಲ್ಲಿ ವಿಜಯಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ನಮೋ ನಗರ ಅಗತ್ಯ ಮೂಲಭೂತ ಸೌಲಭ್ಯಗಳಿಂದಾಗಿ ರಾಜ್ಯದಲ್ಲೇಮಾದರಿ ನಗರವಾಗಿ ರೂಪುಗೊಳ್ಳಲಿ ಎಂದು ವಸತಿ ಇಲಾಖೆ ಸಚಿವ ವಿ.ಸೋಮಣ್ಣ ಹೇಳಿದರು.

Advertisement

ಬುಧವಾರ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯಿಂದ ನಗರದ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯ ಅಫೋರ್ಡೆಬಲ್‌ ಹೌಸಿಂಗ್‌ ಇನ್‌ ಪಾರ್ಟನರ್‌ಶಿಪ್‌ ಉಪ ಘಟಕದಡಿ ವಿಜಯಪುರ ನಗರದ ಸರ್ವೇ ನಂ. 709, ಮಹಾಲ ಬಾಗಾಯತ್‌ ರಿ.ಸ.ನಂ 709 ರಲ್ಲಿ 1493 (ಜಿ+1) ಮಾದರಿ ಗುಂಪು ಮನೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆ ಭವಿಷ್ಯದಲ್ಲಿ ಇನ್ನಷ್ಟು ಅಭಿವೃದ್ಧಿಹೊಂದಲಿದೆ. ಹೀಗಾಗಿ ನಗರದಲ್ಲಿ ಇನ್ನೂ ಅಗತ್ಯ ಇರುವ ಮನೆಗಳ ನಿರ್ಮಾಣಕ್ಕೂ ಶೀಘ್ರವೇ ಆದೇಶಿಸಿ ಟೆಂಡರ್‌ ಮುಗಿಸುವ ಭರವಸೆ ನೀಡಿದರು. ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿವಿಧವಸತಿ ಯೋಜನೆಗಳ ಮನೆಗಳು ಅರ್ಹ ಬಡವರಿಗೆ ನೀಡಲಾಗುತ್ತದೆ. ಹೀಗೆ ಬಡವರಿಗೆ ಕಡಿಮೆ ದರದಲ್ಲಿಮನೆ ನಿರ್ಮಿಸಿಕೊಡುವ, ವಂತಿಕೆ ಹಣಕ್ಕೆ ಬ್ಯಾಂಕ್‌ ಸಾಲ ನೀಡುತ್ತಿರುವ ಕ್ರಮ ಶ್ಲಾಘನೀಯ. ಅರ್ಹಫಲಾನುಭವಿಗಳು ಮನೆಯನ್ನು ಅನ್ಯರಿಗೆ ಮಾರಾಟ ಮಾಡದಂತೆ ವಿನಂತಿಸಿದ ಸಚಿವ ಸೋಮಣ್ಣ, ಈ ವಿಷಯದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಸತಿ ಇಲಾಖೆಗೆ ಮೂಲಭೂತ ಸೌಕರ್ಯಗಳಿಗಾಗಿಯೇ ಅಗತ್ಯ ನೆರವು ನೀಡುತ್ತಿದೆ. ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಇಲಾಖೆಯಿಂದ ಗಮನಾರ್ಹ ಕಾರ್ಯಗಳಾಗಿವೆ. ರಾಜ್ಯದ ಪ್ರತಿ ಬಡವರಿಗೂ ಹಕ್ಕು ಪತ್ರ ವಿತರಿಸುವ ಕ್ರಾಂತಿಕಾರಕ ನಿರ್ಧಾರವನ್ನೂ ಸರ್ಕಾರ ತೆಗೆದುಕೊಂಡಿದೆ. ಇತ್ತೀಚೆಗೆ ನೆರೆ ಪ್ರವಾಹದಿಂದ ಹಾನಿಗೊಳಗಾದ ಮನೆಗಳಿಗೂ ಸರ್ಕಾರದಿಂದ ಧನಪರಿಹಾರ ಒದಗಿಸಲಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, 2022ರೊಳಗೆ ದೇಶದಲ್ಲಿನ ಸರ್ವರಿಗೂ ಸೂರು ಒದಗಿಸುವ ಗುರಿ ಹಾಕಿಕೊಂಡಿರುವ ಪ್ರಧಾನಿಗಳ ಆಶಯ ಈಡೇರಲಿದೆ. ವಸತಿ ರಹಿತ ಎಲ್ಲರಿಗೂ ಮನೆ ಸೌಲಭ್ಯ ನೀಡುವುದು ರಾಜ್ಯ ಸರ್ಕಾರದ ಆಶಯ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರ ಅನುಕೂಲಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರದೊಂದಿಗೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆಂ ಅನುಷ್ಠಾನ ಮಾಡುತ್ತಿರುವುದಾಗಿ ಹೇಳಿದರು.

Advertisement

ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಅಫೋರ್ಡೆಬಲ್‌ ಹೌಸಿಂಗ್‌ ಇನ್‌ ಪಾರ್ಟ್‌ನರ್‌ಶಿಪ್‌ ಉಪ ಘಟಕದಡಿ ವಿಜಯಪುರ ನಗರದಸರ್ವೇ ನಂ. 709, ರಿ.ಸ.ನಂ 709 ರಲ್ಲಿ (ಜಿ+1)ಮಾದರಿಯಲ್ಲಿ 1493 ಗುಂಪು ಮನೆ ನಿರ್ಮಿಸಿ ಬಡವರಿಗೆ ಹಂಚಿಕೆ ಮಾಡಲಾಗುತ್ತದೆ. ಇದರಲ್ಲಿ ಪರಿಶಿಷ್ಟ ಜಾತಿಗೆ 381, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ, ಸಾಮಾನ್ಯ ವರ್ಗದವರಿಗೆ 905 ಮತ್ತು ಅಲ್ಪಸಂಖ್ಯಾತ ಫಲಾನುಭವಿಗಳ ಸಂಖ್ಯೆ 181 ಮನೆ ನಿರ್ಮಿಸಿಕೊಡುವ ಭರವಸೆ ನೀಡಿದರು.

ಇದಕ್ಕಾಗಿ ಕೇಂದ್ರ ಸರ್ಕಾರ 22.39 ಕೋಟಿ ರೂ. ನೀಡಲಿದ್ದು, ರಾಜ್ಯ ಸರ್ಕಾರ 21.17 ಕೋಟಿ ರೂ. ಅನುದಾನ ನೀಡಲಿದೆ. ಫಲಾನುಭವಿಗಳ ಪಾಲಿನ 44.07 ಕೋಟಿ ಹಾಗೂ ಮಹಾನಗರ ಪಾಲಿಕೆ ಪಾಲು 7.23 ಕೋಟಿ ರೂ. ಹಣ ಸೇರಿ 94.93 ಕೋಟಿ ರೂ. ಮೊತ್ತವಾಗಲಿದೆ. ಅದರಲ್ಲಿ ಮನೆ ನಿರ್ಮಾಣಕ್ಕೆ 87.70 ಕೋಟಿ ರೂ., ಮೂಲ ಸೌಕರ್ಯಕ್ಕೆ 7.23 ಕೋಟಿ ರೂ. ಬಳಕೆ ಮಾಡಲಾಗುತ್ತದೆ. ಪ್ರತಿ ಮನೆ ನಿರ್ಮಾಣದ ಮೊತ್ತ 5.87 ಲಕ್ಷ ರೂ. ವೆಚ್ಚವಾಗಲಿದೆ ಎಂದು ವಿವರಿಸಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಪ್ರತಿ ಮನೆಗೆ ಕೇಂದ್ರ ಸರ್ಕಾರದಪಾಲು 1.50 ಲಕ್ಷ ಹಾಗೂ ರಾಜ್ಯ ಸರ್ಕಾರದ ಪಾಲು 2ಲಕ್ಷ ರೂ. ನೀಡಲಿವೆ. ಉಳಿದ 2.37 ಲಕ್ಷ ಆಯ್ಕೆಗೊಂಡ ಫಲಾನುಭವಿಗಳು ಭರಿಸಬೇಕಿದೆ. ಇತರೆ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಕೇಂದ್ರ 1.50 ಲಕ್ಷ ಹಾಗೂ ರಾಜ್ಯ 1.20 ಲಕ್ಷ ರೂ. ಅನುದಾನ ನೀಡಲಿದೆ. ಫಲಾನುಭವಿಗಳು 3.17 ಲಕ್ಷ ರೂ. ಭರಿಸಬೇಕು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ಸಿ. ಮನಗೂಳಿ, ಎ.ಎಸ್‌. ಪಾಟೀಲ ನಡಹಳ್ಳಿ, ದೇವಾನಂದ ಚವ್ಹಾಣ, ವೂಡಾ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಜಿಪಂ ಸಿಇಒ ಗೋವಿಂದರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next