ನಿಡಗುಂದಿ: ರಾಷ್ಟ್ರಕ್ಕೆ ನರೇಂದ್ರ ಮೋದಿಯವರಂತ ಉತ್ತಮ ನಾಯಕ ನಮಗೆಲ್ಲ ದೊರಕಿದ್ದು ನಮ್ಮ ಭಾಗ್ಯ. ಅವರ, ದೂರದೃಷ್ಟಿ ಆಲೋಚನೆ, ಉತ್ತಮ ನಿರ್ಧಾರಗಳ ಪರಿಣಾಮ ಮುಂದಿನ ಕೆಲ ವರ್ಷದಲ್ಲಿ ವಿಶ್ವವೇ ಮೆಚ್ಚುವಂತ ದೇಶ ನಮ್ಮದಾಗಲಿದೆ ಎಂದು ಶಾಸಕ, ಆಹಾರ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಕಾಶಿನಕುಂಟಿ ಹಾಗೂ ಬೂದಿಹಾಳ ಗ್ರಾಮದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದಡಿಯಲ್ಲಿ 4.9 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಕಳೆದ ಹಲವಾರು ವರ್ಷಗಳಾದರೂ ಮೂಲಭೂತ ಸೌಲಭ್ಯಗಳಿಲ್ಲದೇ ಜನರು ತೊಂದರೆ ಅನುಭವಿಸುತ್ತಿದ್ದರು. ಆದರೆ, ಮತಕ್ಷೇತ್ರದ 68 ಹಳ್ಳಿಗಳಲ್ಲಿ 180 ಕೋಟಿ ವೆಚ್ಚದಲ್ಲಿ ಪ್ರತಿ ಹಳ್ಳಿಗೂ ಸಿಸಿರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಜನರು ಬಯಸಿದ ಸೌಕರ್ಯಗಳನ್ನು ನೀಡುವಲ್ಲಿ ಪ್ರಾಮಾಣಿಕ ಕಾರ್ಯ ಮಾಡುತ್ತಿದ್ದೇನೆ. ಪ್ರತಿಗ್ರಾಮದಲ್ಲಿ ರೈತರ ಜಮೀನಿಗೆ ಹಾಗೂ ಗ್ರಾಮಕ್ಕೆಶಾಶ್ವತ ವಿದ್ಯುತ್ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗುತ್ತಿದೆ. ಇನ್ನೂ ಕೆಲವೇದಿನಗಳಲ್ಲಿ ಕಾರ್ಯ ನಡೆಸಲಾಗುತ್ತದೆ ಎಂದರು.
ಮತಕ್ಷೇತ್ರದಲ್ಲಿ ಸಣ್ಣ ನೀರಾವರಿಗೊಳಪಡುವ 23 ಕೆರೆಗಳಿದ್ದು ಎಲ್ಲ ಕೆರೆಗಳನ್ನು ತುಂಬಿಸಿದ ಪರಿಣಾಮ ಅಂತರ್ಜಲ ಹೆಚ್ಚಳವಾಗಿ ಸುತ್ತಲಿನ ಸಾವಿರಾರುಹೆಕ್ಟೇರ್ ಪ್ರದೇಶ ನೀರಾವರಿಯಾಗಿ ಬೆಳೆಯುತ್ತಿವೆ. ಸ್ಥಳೀಯ ವಿದ್ಯಾವಂತ ಯುವಕರು ಉದ್ಯೋಗ ಅರಸಿ ನಗರಕ್ಕೆ ತೆರಳುವುದನ್ನು ತಡೆಯುವ ನಿಟ್ಟಿನಲ್ಲಿ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ಮೂಲಸೌಕರ್ಯಗಳಿಗೆ ಹೆಚ್ಚಿನ ಮಹತ್ವ ನೀಡಿ ಕಾರ್ಯಗತಗೊಳಿಸಲಾಗುತ್ತಿದೆ ಎಂದರು.
ಸರಕಾರ ಕಲಂ 79ಕ್ಕೆ ತಿದ್ದುಪಡಿ ತರುವ ಮೂಲಕ ಎಲ್ಲರೂ ಜಮೀನು ಖರೀದಿಸಿ ತಮ್ಮ ಜಮೀನಿನಲ್ಲಿ ಉತ್ತಮ ಆದಾಯ ಹೊಂದುವಂತೆ ಮಾಡಿದ್ದು ಆ ಮೂಲಕವೂ ಉದ್ಯೋಗ ಹೆಚ್ಚವಾಗುವ ಆಶಾಭಾವ ಹೊಂದಲಾಗಿದೆ. ಜನಪ್ರತಿನಿಧಿ ಗಳು ಹಿಂದೆ ಕಾನೂನು ಹೇಳಿ ಸುಮ್ಮನಾಗುತ್ತಿದ್ದರು. ಆದರೆ, ಕಾನೂನಿನ ಜತೆಗೆ ಜನರ ಕಷ್ಟಗಳಿಗೆ ಸ್ಪಂದಿಸಿ ಅಭಿವೃದ್ಧಿ ಮಾಡುವ ಶಾಸಕರನ್ನು ಆಯ್ಕೆ ಮಾಡಿದ್ದಿರಿ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಚ್ಯುತಿಯಾಗದಂತೆ ನಡೆದುಕೊಳ್ಳುವ ಜತೆಗೆ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲಾಗುವುದು ಎಂದರು.
ಕಬ್ಬು ಬೆಳೆಯುವ ರೈತನ ಬಾಳು ಕೆಲ ದಿನದಲ್ಲಿ ಹಸನಾಗಲಿದೆ. ಕಬ್ಬಿನ ಸಿಪ್ಪೆ ಮೂಲಕ ಇಥೆನಾಲ್ ತಯಾರಿಕೆ ಮಾಡಲಾಗುತ್ತಿದೆ. ಇದರಿಂದ ಮುಂದಿನ ದಿನದಲ್ಲಿ ಕಬ್ಬು ಬೆಳೆಯುವ ರೈತರ ಆದಾಯ ದ್ವಿಗುಣವಾಗಲಿದೆ. ದಾಸೋಹ ಮಾಡುವ ಮಹತ್ತರ ನಿಗಮ ನನಗೆ ಸಿಕ್ಕಿದ್ದು ನನ್ನ ಭಾಗ್ಯ. ಪ್ರತಿ ವ್ಯಕ್ತಿಗೆ ಆಹಾರ ಧಾನ್ಯ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಡೆಸಲಾಗುವುದು ಎಂದರು.
ಎನ್.ಟಿ. ಗೌಡರ, ಶಿಕ್ಷಕ ಸಂಘದ ಮುಖಂಡ ಬಿ.ಟಿ. ಗೌಡರ, ಮಂಜುನಾಥ ಹಳೆಮನಿ, ಬಾಲಚಂದ್ರ ಕರಕಣ್ಣವರ, ಮಲಕೇಂದ್ರಗೌಡ ಪಾಟೀಲ, ಮುತ್ತಣ್ಣ ಹುಗ್ಗಿ, ಸೋಮನಗೌಡ ಬಿರಾದರ, ಹುಲ್ಲಳ್ಳಿ, ವಿಶ್ವನಾಥ ಬಡಿಗೇರ, ಬಿ.ಎಸ್. ಪಾಟೀಲ (ವಣಿಕಾಳ), ರಾಮಣ್ಣ ಗೌಡರ, ಯಲ್ಲಪ್ಪ ಗೌಡರ, ಬಸವರಾಜ ಕಾಳಗಿ, ಗಂಗಾಧರ ಜುಲಗುಡ್ಡ ಇದ್ದರು.