Advertisement

ಚಾಮರಾಜನಗರ ಜಿಲ್ಲೆ 25 ಮಾದರಿ ಗ್ರಾಪಂ ಸಮಗ್ರ ಅಭಿವೃದ್ಧಿಗೆ ಚಾಲನೆ

11:49 AM Sep 09, 2020 | Suhan S |

ಕೊಳ್ಳೇಗಾಲ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯ 25 ಗ್ರಾಮ ಪಂಚಾಯಿತಿಗಳನ್ನು ಮಾದರಿ ಗ್ರಾಮ ಪಂಚಾಯಿತಿಗಳನ್ನಾಗಿಸುವ ವಿಶೇಷ ಕಾರ್ಯಕ್ರಮಕ್ಕೆ ತಾಲೂಕಿನ ಸತ್ತೇಗಾಲ ಗ್ರಾಮದ ಸರ್ಕಾರಿ ಶಾಲೆಯ ಅವರಣದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ಕುಮಾರ್‌ ಚಾಲನೆ ನೀಡಿದರು.

Advertisement

ಬಳಿಕ ಮಾತನಾಡಿದ ಅವರು, ಉದ್ಯೋಗ ಖಾತರಿ ಯೋಜನೆಯಡಿ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು ಹಾಗೂ ಹನೂರು ತಾಲೂಕಿನ ಆಯ್ದ ಗ್ರಾಮಪಂಚಾಯಿತಿಗಳನ್ನು ಮಾದರಿ ಗ್ರಾಮ ಪಂಚಾಯಿತಿಗಳನ್ನಾಗಿ ಅಭಿವೃದ್ಧಿಪಡಿಸಲುಆಯ್ಕೆ ಮಾಡಿಕೊಳ್ಳಲಾಗಿದೆ. ಇನ್ನಷ್ಟು ಗ್ರಾಮ ಪಂಚಾಯಿತಿಗಳ ವಿಸ್ತರಣೆಯನ್ನು ಮುಂದಿನ ಹಂತದಲ್ಲಿ ಮಾಡಲಾಗುವುದು ಎಂದರು.

ಸಂಜೀವಿನಿ ಶೆಡ್‌: ಮಹಿಳಾ ಸ್ವಸಹಾಯಸಂಘಗಳ ಅರ್ಥಿಕ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಮಾದರಿ ಗ್ರಾಮ ಪಂಚಾಯಿತಿ ಯೋಜನೆಯಡಿ ಸಂಜೀವಿನಿ ಶೆಡ್‌ ನಿರ್ಮಾಣ ಮಾಡಲಾಗುತ್ತದೆ. ಅತ್ಯಂತ ಪೌಷ್ಟಿಕ ಆಹಾರ ಎನಿಸಿರುವ ಹಣಬೆ ಬೇಸಾಯಕ್ಕೂಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಗ್ರಾಮ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿ ಯೋಜನೆ ಇತರೆ ಜಿಲ್ಲೆಗಳಿಗೂ ಮಾದರಿಯಾಗಲಿ ಎಂದು ಹಾರೈಸಿದರು.

ತ್ವರಿತ ಕೆಲಸ: ಶಾಸಕ ಆರ್‌. ನರೇಂದ್ರ ಮಾತನಾಡಿ, ನೂತನ ಮಾದರಿ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಯೋಜನೆ ಎಲ್ಲಾ ಗ್ರಾಮಗಳಿಗೂ ಅನುಕೂಲವಾಗಲಿ. ಅಭಿವೃದ್ಧಿ ಕೆಲಸಗಳು ತ್ವರಿತವಾಗಿ ನಡೆಯಲಿ ಎಂದು ಆಶಿಸಿದರು.

ತಾಪಂ ಅಧ್ಯಕ್ಷ ಸುರೇಶ್‌, ಜಿಪಂ ಸಿಇಒ ಬೋಯರ್‌ ಹರ್ಷಲ್‌ ನಾರಾಯಣ್‌ ರಾವ್‌, ಎಸಿ ಡಾ. ಗಿರೀಶ್‌ ದಿಲೀಪ್‌ ಬಡೋಲೆ, ತಾಪಂ ಇಒ ಎಲ್‌. ಗಂಗಾಧರ್‌, ತಹಶೀಲ್ದಾರ್‌ ಕೆ. ಕುನಾಲ್‌, ಜಿ.ಪಂ. ಉಪ ಕಾರ್ಯದರ್ಶಿ ಧರಣೇಶ್‌ ಇತರರಿದ್ದರು.

Advertisement

ಮಾದರಿ ಗ್ರಾಪಂನಲ್ಲಿ ಏನೇನು ಇರಲಿದೆ? : ಈ ಯೋಜನೆಯಡಿ ಗ್ರಾಮಗಳ ನೈರ್ಮಲ್ಯ, ಕೊಳಚೆ ನೀರಿನ ಸಮರ್ಪಕ ನಿರ್ವಹಣೆಗೆ ಸೋಕ್‌ಪಿಟ್‌ಗಳ ನಿರ್ಮಾಣ ಮಾಡಲಾಗುತ್ತದೆ. ಮನೆಯ ಹಿತ್ತಲಿನಲ್ಲಿ ಪೌಷ್ಟಿಕ ತೋಟ ನಿರ್ಮಾಣವು ಸಹ ಆಗಲಿದೆ. ಶಾಲೆಗಳಲ್ಲಿಯೂ ಪೌಷ್ಟಿಕ ತೋಟ ನಿರ್ಮಾಣವನ್ನು ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಕಾರ್ಯ ಚಟುವಟಿಕೆಗಳ ಬಗ್ಗೆ ಉತ್ಸಾಹತುಂಬಬಹುದಾಗಿದೆ ಎಂದು ಸಚಿವ ಸುರೇಶ್‌ ಕುಮಾರ್‌ ತಿಳಿಸಿದರು.

ಮಳೆ ನೀರು ಕೊಯ್ಲು ಸಹ ಯೋಜನೆಯಡಿ ಕೈಗೊಂಡಿರುವ ಪ್ರಮುಖ ಗುರಿಯಾಗಿದೆ. ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಂಗ್ರಹಿಸಿ ಇತರೆ ಉದ್ದೇಶಗಳಿಗೆ ಬಳಸುವ ಹಿನ್ನೆಲೆಯಲ್ಲಿ ಮಳೆ ನೀರು ಕೊಯ್ಲು ಕಾಮಗಾರಿಯನ್ನು ಗ್ರಾಮ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿ ಯೋಜನೆಯಡಿ ಕೈಗೊಳ್ಳಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next