ಹುಣಸೂರು: ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ 3.65 ಕೋಟಿ ರೂಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿಗೆ ಶಾಸಕ ಎಚ್.ಪಿ ಮಂಜುನಾಥ್ ಗುದ್ದಲಿಪೂಜೆ ನೆರವೇರಿಸಿದರು.
ಬನ್ನಿಕುಪ್ಪೆ-ಮಾದಹಳ್ಳಿಕೊಪ್ಪಲು ಬಳಿಯ ಕೆ.ಇ.ಬಿ.ಸಬ್‌ಸ್ಟೇಷನ್ ಎದುರಿನ ಸರಕಾರಿ ಜಮೀನಿನಲ್ಲಿ ಸಮಾಜ ಕಲ್ಯಾಣ ಇಲಾಖೆವತಿಯಿಂದ ನಿರ್ಮಿಸಲುದ್ದೇಶಿಸಿರುವ 3 ಅಂತಸ್ತಿನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು ಕಳೆದ ಹತ್ತು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿನಿಲಯವನ್ನು ನಡೆಸಲಾಗುತ್ತಿರುವುದನ್ನು ಮನಗಂಡ ತಾವು ಸಿದ್ದರಾಮಯ್ಯರ ಅವಧಿಯಲ್ಲಿ ವಿದ್ಯಾರ್ಥಿನಿಲಯಕ್ಕೆ ಅನುದಾನ ಬಿಡುಗಡೆ ಮಾಡಿಸಿದ್ದೆ. ಅನುದಾನ ಬಿಡುಗಡೆಯಾಗಿದ್ದರೂ ಸಹ ಈ ಜಮೀನಿನ ವ್ಯಾಜ್ಯವು ನ್ಯಾಯದಮೆಟ್ಟಿಲೇರಿದ್ದರಿಂದಾಗಿ ಕಟ್ಟಡ ನಿರ್ಮಾಣ ಕಾಮಗಾರಿ ವಿಳಂಬವಾಗಿತ್ತು. ಈ ವಸತಿ ನಿಲಯದಿಂದಾಗಿ ಈ ಭಾಗದ ಸುತ್ತಮುತ್ತಲ 26 ಹಳ್ಳಿಗಳಲ್ಲಿ ನೂರಾರು ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಇಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಇತರೆ ಸಮುದಾಯದವರಿಗೂ ಅವಕಾಶವಿದ್ದು. ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಭವಿಷ್ಯವನ್ನು ಉಜ್ವಲವಾಗಿಸಿಕೊಳ್ಳಿರೆಂದು ಸೂಚಿಸಿದರು.
ಅಕ್ಷರ, ಆರೋಗ್ಯಕ್ಕ್ಕೆ ಆಶ್ರಯ ನೀಡಿ: ಆಸ್ಪತ್ರೆ, ಶಾಲೆಗಳ ನಿರ್ಮಾಣಕ್ಕೆ ಹಿಂದೆ ನಮ್ಮ ಹಿರಿಯರು ಭೂಮಿಯನ್ನು ದಾನವಾಗಿ ನೀಡುತ್ತಿದ್ದ ಕಾಲವಿತ್ತು, ಅದೇ ಭೂಮಿಗೆ ಇಲಾಖೆಗಳು ಖಾತೆ ಮಾಡಿಸದೆ ವಿಳಂಬ ಮಾಡಿದ್ದರಿಂದ ಹಲವು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಮುಂದೆ ಹೀಗಾಗದಂತೆ ಎಚ್ಚರ ವಹಿಸಬೇಕು. ಸರಕಾರಗಳು ಹಳ್ಳಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆAದು ವಿದ್ಯಾರ್ಥಿನಿಲಯಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಸರಕಾರವು ಅನುದಾನ ನೀಡುತ್ತಿದೆ. ಆದ್ದರಿಂದ ಸಾರ್ವಜನಿಕರು ಕುಡಿಯುವ ನೀರು, ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿ ಸಹಕರಿಸಿ ಊರಿನ ಅಭಿವೃದ್ಧಿ ಸಹಕರಿಸಿರೆಂದು ಮನವಿ ಮಾಡಿದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕವನ್ನು ವಿತರಿಸಿದರು.
ಭರವಸೆ: ಸರಕಾರಿ ಭೂಮಿ ಉಳುಮೆ ಮಾಡುತ್ತಿದ್ದವರಿಗೆ ರ‍್ಯಾಯ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯ್ತಿ ಅಧ್ಯಕ್ಷೆ ಎಚ್.ಸಿ.ಬೇಬಿ ಉಪವಿಭಾಗಾಧಿಕಾರಿ ವರ್ಣಿತ್‌ನೇಗಿ, ತಹಸಿಲ್ದಾರ್ ಡಾ.ಅಶೋಕ್, ತಾ.ಪಂ ಇ.ಒ ಗಿರೀಶ್, ಸಮಾಜ ಕಲ್ಯಾಣ ಇಲಾಖಾಧಿಕಾರಿ ಮೋಹನ್‌ಕುಮಾರ್, ಗ್ರಾ.ಪಂ.ಸದಸ್ಯರಾದ ನಿಂಗೇಗೌಡ, ರೇವಣ್ಣಚಾರಿ, ಚಂದ್ರೇಗೌಡ, ಚಂದ್ರಶೇಖರ್, ಬನ್ನಿಕುಪ್ಪೆ ನಾಡ ಯಜಮಾನ ಕೂಸಪ್ಪ, ಕಾಂಗ್ರೆಸ್ ಮುಖಂಡ ಲೋಕೇಶ್‌ನಾಯಕ, ಮುಖಂಡರಾದ ಹಗರನಹಳ್ಳಿಕುಮಾರ್, ರವಿಗೌಡ, ಗುಡ್ಡಪ್ಪ, ಸೇರಿದಂತೆ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.