ಅಜ್ಜಂಪುರ: ಅಮೃತ್ ಮಹಲ್ ಭೂಮಿ ರಕ್ಷಿಸಿದ್ದ ಕಾವಲುಗಾರರಿಗೆ ಒತ್ತುವರಿದಾರ ಎಂಬ ಹಣೆಪಟ್ಟಿ ಹೊರಿಸಲಾಗಿದೆ. ಕಾವಲು ರಕ್ಷಣೆಗೆ ಪ್ರತಿಯಾಗಿ ನೀಡಿದ್ದ ಭೂಮಿ ಕಸಿಯಲಾಗಿದೆ. ಜೀವನಕ್ಕೆ ಆಧಾರವಾಗಿದ್ದ ಭೂಮಿ ಕೈತಪ್ಪಿದ್ದು, ಕುಟುಂಬ ಬೀದಿಗೆ ಬಿದ್ದಿದೆ. ವಿಷ ಕುಡಿಯುವ ಪರಿಸ್ಥಿತಿ ಎದುರಾಗಿದೆ ಎಂದು ಬಾಸೂರು ಅಮೃತ್ ಮಹಲ್ ಕಾವಲುಗಾರರು ಅಳಲು ತೋಡಿಕೊಂಡಿದ್ದಾರೆ.
ಅಜ್ಜಂಪುರದ ಅಮೃತ್ ಮಹಲ್ ತಳಿ ಸಂವರ್ಧನಾ ಮತ್ತು ಸಂಶೋಧನಾ ಕೇಂದ್ರ ವ್ಯಾಪ್ತಿಗೆ ಸೇರಿದ ಬಾಸೂರು ಕಾವಲಿನ ಕಾವಲುಗಾರರಿಗೆ ನೀಡಲಾಗಿದ್ದ ಭೂಮಿಯನ್ನು ಕೇಂದ್ರದ ಉಪನಿರ್ದೇಶಕರು ಖುದ್ದು ಹಾಜರಿದ್ದು, ವಶಕ್ಕೆ ಪಡೆದರು.
ಈ ವೇಳೆ ಕಾವಲುಗಾರಿಕೆ ಮಾಡಿಕೊಂಡಿದ್ದ ಕೆದಿಗೆರೆಯ ಕೆ.ಎಚ್. ಶಿವಪ್ಪ, ಕೆ.ಎಲ್. ದಿನೇಶ್, ಮಲ್ಲಪ್ಪ, ಗಿರಿಯಾಪುರದ ರಾಜಶೇಖರಪ್ಪ, ಚಂದ್ರಮೌಳಿ, ಬಿಸಲೆರೆಯ ಚಂದ್ರಪ್ಪ, ಬಾಸೂರಿನ ಶಿವಕುಮಾರ್, ಶಿವು, ಪ್ರಶಾಂತ್ ಅಮೃತ್ ಮಹಲ್ ಕೇಂದ್ರ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಲೆತಲಾಂತರದಿಂದ ಕಾವಲುಗಾರಿಕೆಯಲ್ಲಿ ತೊಡಗಿದ್ದೇವೆ. ಕಾವಲು ಭೂಮಿ ರಕ್ಷಿಸಿದ್ದೇವೆ. ಒತ್ತುವರಿ ಅಗದಂತೆ ಮತ್ತು ಮೇವು ನಷ್ಟವಾಗದಂತೆ ನೋಡಿದ್ದೇವೆ. ಮರಳು, ಮಣ್ಣು ಕಳವು ತಡೆದಿದ್ದೇವೆ. ಗಿಡ-ಮರ ಕಾಪಾಡಿದ್ದೇವೆ. ವೇತನ ಬದಲು ಉಳುಮೆಗೆ ನೀಡಲಾಗಿದ್ದ ಭೂಮಿಯನ್ನೇ ನಂಬಿ ಬದುಕಿದ್ದೇವೆ. ಈಗ ಏಕಾಏಕಿ ಕಾವಲುಗಾರಿಕೆ ಮತ್ತು ಉಳುಮೆ ಭೂಮಿಯಿಂದ ಹೊರದಬ್ಬಲಾಗುತ್ತಿದೆ ಎಂದು ಕಾವಲುಗಾರರು ಅಸಮಾಧಾನ ವ್ಯಕ್ತಪಡಿಸಿದರು.
ಕಾವಲುದಾರರಿಗೆ ನ್ಯಾಯ ಒದಗಿಸಬೇಕು. ಈವರೆಗೂ ಕಾವಲು ಭೂಮಿ ರಕ್ಷಿಸಿದವರಿಗೆ ಕನಿಷ್ಠ 5 ಎಕರೆ ನೀಡಬೇಕು ಎಂದು ಒತ್ತಾಯಿಸಿದರು. ಕಾವಲುದಾರಿಕೆಯಲ್ಲಿ ತೊಡಗಿದ್ದವರು ವಾಣಿಜ್ಯ ಬೆಳೆ ಬೆಳೆದು ನಿಯಮ ಉಲ್ಲಂಘಿಸಿದ್ದರು. ಇದು ಕೋರ್ಟ್ ಮೆಟ್ಟಿಲೇರಿತ್ತು. ಆರೋಪ ಸಾಬೀತಾಗಿ, ಭೂಮಿ ಹಿಂಪಡೆಯುವಂತೆ ಹೈಕೋರ್ಟ್ ಫೆ. 8 ರಂದು ತೀರ್ಪು ನೀಡಿತ್ತು. ಇದೇ ಹಿನ್ನೆಲೆಯಲ್ಲಿ ಎ.ಸಿ. ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿತ್ತು. ಅದು ಒತ್ತುವರಿ ಗುರುತಿಸಿತ್ತು. ಒಟ್ಟು 9 ಮಂದಿಗೆ ನೀಡಿದ್ದ 41 ಎಕರೆ ಸುಪರ್ದಿಗೆ ಪಡೆಯುವಂತೆ ನಿರ್ದೇಶಿಸಿತ್ತು. ಆ ಸಮಿತಿ ಆದೇಶ ಪಾಲಿಸಿದ್ದೇನೆ.
–
ಹನುಮಂತ ನಾಯಕ ಕಾರುಬಾರಿ,
ಅಮೃತ್ ಮಹಲ್ ಕೇಂದ್ರದ ಉಪನಿರ್ದೇಶಕ