Advertisement
ನಮ್ಮ ಇಂದಿನ ಪ್ರಗತಿ ಕಲ್ಲಿದ್ದಲು ಹಾಗೂ ಪೆಟ್ರೋಲಿಯಂ ಇಂಧನಗಳ ಮೇಲೆ ಅತಿಯಾಗಿ ಅವಲಂಬಿಸಿದೆ. ಈ ಪಳೆಯುಳಿಕೆ ಇಂಧನಗಳನ್ನು ಉರಿಸಿದಾಗ ಇಂಗಾಲಾಮ್ಲ (cಟ2) ಉತ್ಪತ್ತಿ ಯಾಗುತ್ತದೆ. ಇದು ಭೂಮಿಯ ತಾಪಮಾನವನ್ನು ಹೆಚ್ಚಿಸುವುದರಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಕೈಗಾರಿಕಾ ಕ್ರಾಂತಿಗೆ ಮೊದಲು ವಾತಾವರಣದಲ್ಲಿ ಇದ್ದ ಇಂಗಾಲಾಮ್ಲದ ಪ್ರಮಾಣ 280 ಪಿ.ಪಿ.ಎಂ. (ಪಾರ್ಟ್ಸ್ ಪರ್ ಮಿಲಿಯನ್) 2019ರ ಹೊತ್ತಿಗೆ ಅದು 415 ಪಿ.ಪಿ.ಎಂ. ಮುಟ್ಟಿತ್ತು. ವಿಜ್ಞಾನಿಗಳ ಪ್ರಕಾರ 350 ಪಿ.ಪಿ.ಎಂ. ಸುರಕ್ಷಿತ ಮಟ್ಟ. 1950ರಲ್ಲಿ ಜಗತ್ತಿನ ಇಂಗಾಲಾಮ್ಲದ ಉತ್ಸರ್ಜನೆ (ಎಮಿಷನ್) 150 ಕೋಟಿ ಟನ್‌ಗಳಾಗಿದ್ದರೆ 2016ರ ಹೊತ್ತಿಗೆ ಅದು 3,600 ಕೋಟಿ ಟನ್‌ಗಳಷ್ಟಾಗಿತ್ತು.
ಜೀವ ಜಗತ್ತಿನ ಸರ್ವನಾಶವನ್ನು ತಡೆಗಟ್ಟಲು ಇಂಗಾ ಲಾಮ್ಲದ ಉತ್ಸರ್ಜನೆಯನ್ನು ಎಲ್ಲ ದೇಶಗಳೂ ತೀವ್ರ
ವಾಗಿ ಕಡಿಮೆ ಮಾಡಬೇಕು ಎಂಬ ಉದ್ದೇಶದಿಂದ 2015ರಲ್ಲಿ ಪ್ಯಾರಿಸ್‌ನಲ್ಲಿ ಹವಾಮಾನ ಸಮ್ಮೇಳನ ನಡೆಯಿತು. ಸಮ್ಮೇಳನ
ದಲ್ಲಿ ಅಂಕಿತ ಹಾಕಲಾದ ಪ್ಯಾರಿಸ್ ಒಪ್ಪಂದವನ್ನು ರಾಜಕಾರಣಿ ಗಳು ಹಾಗೂ ಜಾಗತಿಕ ಮಾಧ್ಯಮಗಳು ಐತಿಹಾಸಿಕ, ಕ್ರಾಂತಿಕಾರಕ ಒಪ್ಪಂದ ಎಂದೆಲ್ಲ ಬಣ್ಣಿಸಿದವಾ ದರೂ ಕೆಲವೇ ದಿನಗಳಲ್ಲಿ ವಿಜ್ಞಾನಿಗಳು ಇದೊಂದು ವಂಚನೆ ಎನ್ನುವ ಮೂಲಕ ಅದರ ಬಣ್ಣ ಬಯಲು ಮಾಡಿದರು.
Related Articles
Advertisement
2020ರ ಡಿಸೆಂಬರ್ 20ರಂದು ಬಿಡುಗಡೆ ಮಾಡಲಾದ U.N.E.P. (United Nations Environment Programme) Emission Gap Report ಪ್ಯಾರಿಸ್ ಒಪ್ಪಂದದ ವೈಫಲ್ಯದ ಬಗ್ಗೆ ಮತ್ತಷ್ಟು ಬೆಳಕು ಚೆಲ್ಲುತ್ತದೆ. 2016ರಿಂದ 2020ರ ಕಾಲಾವಧಿಯಲ್ಲಿ ಶಾಖವರ್ಧಕ ಅನಿಲ ಗಳ ಉತ್ಸರ್ಜನೆ ಕಡಿಮೆಯಾಗುವ ಬದಲು ಮತ್ತಷ್ಟು ಹೆಚ್ಚಾ ಗಿದೆ. ಭರವಸೆ ಈಡೇರಿಸುವುದರಲ್ಲಿ ವಿಫಲವಾದ ದೇಶಗಳ ಪಟ್ಟಿಯಲ್ಲಿ ಮೊದಲು ಇರುವುದು ಅಮೆರಿಕ, ರಷ್ಯಾ, ಚೀನ, ಜಪಾನ್, ಆಸ್ಟ್ರೇಲಿಯಾ ಹಾಗೂ ಕೆನಡಾದಂಥ ಅತೀ ಶ್ರೀಮಂತ ಹಾಗೂ ಅತೀ ಮಾಲಿನ್ಯಕಾರಕ ರಾಷ್ಟ್ರಗಳೇ. ಶ್ರೀಮಂತ ದೇಶಗಳು ಕಲ್ಲಿದ್ದಲು ಹಾಗೂ ಪೆಟ್ರೋ ಲಿಯಂ ಉತ್ಪಾದನೆಯನ್ನು ಶೇ.130ರಷ್ಟು ಹೆಚ್ಚಿಸುವ ಕಾರ್ಯಕ್ರಮದಲ್ಲಿ ತೊಡಗಿವೆ. ಇದು ವಿಪರ್ಯಾಸ ಮಾತ್ರವಲ್ಲದೆ ಬಲುದೊಡ್ಡ ದುರಂತ. ಜಗತ್ತಿನ ಶೇ. 1ರಷ್ಟು ಅತ್ಯಂತ ಶ್ರೀಮಂತರು ಶೇ.50ರಷ್ಟು ಬಡವರಿಗಿಂತ ಎರಡು ಪಟ್ಟು ಹೆಚ್ಚು ಉಷ್ಣವರ್ಧಕ ಅನಿಲಗಳನ್ನು ಉತ್ಸರ್ಜಿಸುತ್ತಾರೆ ಎಂದು ವರದಿ ತಿಳಿಸುತ್ತದೆ. ಅಭಿವೃದ್ಧಿಶೀಲ ದೇಶಗಳಿಗೆ ಉತ್ಸರ್ಜನೆ ಕಡಿಮೆ ಮಾಡಲು ನೆರವು ನೀಡುವ ಗ್ರೀನ್ ಕ್ಲೈಮೆಟ್ ಫಂಡ್‌ಗೆ ಯಾವ ಶ್ರೀಮಂತ ದೇಶಗಳೂ ದೇಣಿಗೆ ನೀಡುತ್ತಿಲ್ಲ. ಅಲ್ಲದೆ ಅಗತ್ಯ ತಂತ್ರಜ್ಞಾನಗಳನ್ನೂ ಬಡ ದೇಶಗಳಿಗೆ ನೀಡುವ ಭರ ವಸೆಯೂ ಹುಸಿಯಾಗಿದೆ.
-ಪ್ರೊ| ಬಿ.ಎಂ. ಕುಮಾರಸ್ವಾಮಿ, ಶಿವಮೊಗ್ಗ