Advertisement
ಅಸಾಧ್ಯ ಬೇಗೆಯನ್ನು ಕಳೆಯಲು ಧುಮುಕುವ ಮಳೆ, ಮಳೆಯೊಂದಿಗೆ ಬರುವ ಬೆಳೆ, ಸುಖ- ಸಮೃದ್ಧಿಯನ್ನೂ, ಭೀಕರತೆಯೊಂದಿಗೇ ಬರುವ ಮಾರ್ದವತೆಯನ್ನೂ ಗಮನಿಸಿ ಕಟ್ಟಿದ ಹಾಡು-ಹಸೆ ಅಸಂಖ್ಯ. ‘ಮಳೆ ಜೀವದ ಸೆಳೆ’ ಎನ್ನುವ ಭಾವ ಜಾನಪದರದ್ದಾಗಿತ್ತು.
Related Articles
ಕಳೆದ ಶತಮಾನದಿಂದಲೇ ಜಾಗತಿಕ ತಾಪಮಾನ ಏರಿಕೆಯ ಸಮಸ್ಯೆ ಅರಿವಿಗೆ ಬಂದಿದ್ದು, ವಿಜ್ಞಾನಿಗಳು ಹೇಳುವಂತೆ ಈ ಕಾರಣದಿಂದಲೇ ಮಳೆ ಅನಿಯಂತ್ರಿತ, ಆಕಸ್ಮಿಕ ಹಾಗೂ ಅನಪೇಕ್ಷಣೀಯವಾಗಿ ಸುರಿಯುತ್ತದೆ.ತಾಪಮಾನ 1° ಸೆಲ್ಸಿಯಸ್ ಗೆ ಏರಿದರೆ, ಮಳೆ 7-10 ಪ್ರತಿಶತ ಹೆಚ್ಚಾಗುತ್ತದೆ. ಈ ರೀತಿ ಹೆಚ್ಚಾದ ಮಳೆಯೇ ಭೂ ಕುಸಿತದ ರೂವಾರಿ ಎನ್ನುತ್ತಾರೆ ಕೆಲ ಅಧಿಕಾರಿಗಳು.
Advertisement
ಭಾರತದ ಹಲವು ಪ್ರದೇಶಗಳಲ್ಲಿ ಹಲವು ದಿನದ ಅಂತರಗಳಲ್ಲಿ ಇಷ್ಟೇ ಪ್ರಮಾಣದ ಮಳೆ ಸುರಿಯುವ ವಾಡಿಕೆ ಹಿಂದೆಯೂ ಇತ್ತು. ಅಗ ಇಷ್ಟು ವ್ಯಾಪಕ ಕುಸಿತ ಉಂಟಾಗುತ್ತಿರಲಿಲ್ಲ. ಪ್ರಾಣಹಾನಿಯೂ ಸಂಭವಿಸುತ್ತಿರಲಿಲ್ಲ. ಪ್ರತೀ ವರ್ಷ ದಾಖಲೆಯ ಮಳೆ ಸುರಿಯುವುದಾದರೂ, ನೀರು ಇಂಗಲು, ಹರಿಯಲು ಮಾನವರು ನಿರ್ಮಿಸಿದ ಅಡೆ ತಡೆಗಳೆ ಹೆಚ್ಚಿನ ಅಪರಾಧಿ.
ಮಡಿಕೇರಿಯ ಬ್ರಹ್ಮಗಿರಿ ಪ್ರಕರಣವನ್ನೇ ಗಮನಿಸಿ. ‘ಭಾರತೀಯ ಭೂ ಸರ್ವೇಕ್ಷಣಾ ಇಲಾಖೆ’ ತನ್ನ ವರದಿಯಲ್ಲಿ (2019), ಬ್ರಹ್ಮಗಿರಿ ಬೆಟ್ಟದಾದ್ಯಂತ ಸೀಳು ಬಿಟ್ಟಿರುವ ಬಿಂದುಗಳನ್ನು ಗುರುತಿಸಿ ಎಚ್ಚರಿಸಿತ್ತು. ಅರಣ್ಯ ಇಲಾಖೆ ನಿರ್ಮಿಸಿದ ತೋಡುಗಳು, ರೈಲ್ವೇ ಹಳಿ ಕಾಮಗಾರಿ, ರಸ್ತೆ ಕಾಮಗಾರಿಗೆ ಅಗೆದ ಬೆಟ್ಟದ ಬುಡಕ್ಕೆ ಯಾವುದೇ ತಡಗೋಡೆ ಇಲ್ಲದಿರುವುದು, ಪಶ್ಚಿಮ ಘಟ್ಟದ ಮೃದು ಮಣ್ಣಿನ ಸ್ವಭಾವ, ಬೆಟ್ಟದ ನಡುವೆ ಕಟ್ಟಡಗಳು, ಇಂಗುಗುಂಡಿ, ಜಲಾಶಯದ ನೀರಿನ ಭೂ ಒತ್ತಡ ಇತ್ಯಾದಿ ಅಂಶಗಳು ಸೇರಿ ಈ ಪ್ರದೇಶ ಶಿಥಿಲವಾಗಿದೆ ಎಂದೂ ಅಭಿಪ್ರಾಯ ಪಟ್ಟಿತ್ತು. ಆದರೆ, ಈ ಬಗ್ಗೆ ಜಾಗೃತಿ ಯಾಕೋ ಮೂಡಲಿಲ್ಲ.
ಪಶ್ಚಿಮ ಘಟ್ಟಗಳಷ್ಟೇ ಬಲಿಯೇ..?ಪಶ್ಚಿಮ ಘಟ್ಟಕ್ಕೆ ಮಾತ್ರ ಈ ರೀತಿಯ ಕುಸಿತ ಸೀಮಿತವಾಗಿಲ್ಲ. ಸಣ್ಣ ಸಣ್ಣ ದಿಡ್ಡೆಗಳೂ ಕುಸಿಯುತ್ತಿವೆ. ಬೋಳು ಬಯಲು ಪ್ರದೇಶವೂ ಜರಿಯುತ್ತಿದೆ. ಇದಕ್ಕೆ ಕಾರಣ, ಅವೈಜ್ಞಾನಿಕ ಕಾಮಗಾರಿ. ಸಣ್ಣ ದಿಡ್ಡೆ (ಬರೆ)ಯನ್ನು ಒಂದಾಳು ಎತ್ತರಕ್ಕಿಂತ ಎತ್ತರ ಕಡಿಯಬಾರದು ಎನ್ನುವ ನಮ್ಮ ಹಿರಿಯರ ಅನುಭವವನ್ನು ಬದಿಗೊತ್ತಿ ಹಲವು ಮೀಟರ್ ಎತ್ತರಕ್ಕೆ ಅಗೆಯುವ ನಮ್ಮ ಇಂಜಿನಿಯರ್ ಗಳ ಮತ್ತು ಹಣವಂತರ ಬುದ್ಧಿ. ಒಂದು ಕಡೆ ಗುಡ್ಡೆ ಅಗೆದರೆ, ಅದರ ಮತ್ತೊಂದು ಬದಿಯವರೆಗೂ ಎಲ್ಲಾದರೂ ಕುಸಿತ ಸಂಭವಿಸಬಹುದು. ಅದಕ್ಕೆ ದೊಡ್ಡ ಮಳೆಯೇನೋ ಬೇಕಾಗಿಲ್ಲ. ಆಗಿಂದಾಗಲೇ, ಬೀಳದಿದ್ದರೂ ಬುಡ ಶಿಥಿಲವಾಗಿ ಒಂದಲ್ಲ ಒಂದು ದಿನ ಗುಡ್ಡ ಮೈಚಾಚಲೇಬೇಕು. ಹಾಗೆಯೇ, ಅಸಮರ್ಪಕ ಚರಂಡಿಯಿಂದ, ಕೃತಕ ನೆರೆ ಬಂದು, ಅಸಹಜ ಹಾದಿಯಲ್ಲಿ ನೀರು ಹರಿದಾಗಲೂ ಈ ರೀತಿಯ ಕುಸಿತ ಸಂಭವಿಸಬಹುದು. ನಮ್ಮ ಹಿರಿಯರು ಆದಷ್ಟು ಬಯಲಲ್ಲೇ ಮನೆ ತೋಟ ಮಾಡಿ ಬದುಕುತ್ತಿದ್ದರು. ಅನಿವಾರ್ಯವಾದಾಗ ಮಾತ್ರ ಗುಡ್ಡದಲ್ಲಿ ತೋಟ ಮಾಡಲಾಗುತ್ತಿತ್ತು. ಹೊಲ ಮಾಡುವಾಗಲೂ, ಬುಲ್ಡೋಝರ್ ಇಲ್ಲದೆ ಕೈ ಕೆಲಸವೇ ಆಗಬೇಕಿದ್ದರಿಂದ ತುಂಬಾ ಎತ್ತರಕ್ಕೆ ಕಡಿಯುತ್ತಿರಲಿಲ್ಲ. ನಾವೀಗ ಈ ಬಗೆಯ ಪ್ರಾಕೃತಿಕ ತಾದಾತ್ಮ್ಯದ ಸೆರಗಿಂದ ಹೊರಗೆ ಬಂದಿದ್ದೇವೆ. ನಾವು ನಡೆದದ್ದೇ ದಾರಿ ಎಂದು ಸಾಗುತ್ತಿದ್ದೇವೆ. ಅದಕ್ಕಾಗಿಯೇ, ಈ ಪರಿ ಪ್ರಾಣಹಾನಿ, ಆಸ್ತಿಹಾನಿಯಾಗುತ್ತಿದೆ. ಇನ್ನಾದರೂ ಸರ್ಕಾರ ಮತ್ತು ವ್ಯಕ್ತಿಗಳು ಜಾಗೃತರಾದರೆ ಮಾತ್ರ ಮುಂದಿನ ಪೀಳಿಗೆಗಾಗಿ ಈ ನೆಲ ಉಳಿದೀತು. ಪ್ರಕೃತಿಯ ಜತೆ ಸೆಣಸಾಡಲು ನಾವು ಶಕ್ತರಲ್ಲವೆಂದು ಇನ್ನೂ ಅರ್ಥವಾಗದಿದ್ದಲ್ಲಿ ಭವಿಷ್ಯ ಮತ್ತಷ್ಟು ಕಠಿಣವಿದೆ. ರಾಧಿಕಾ, ಕುಂದಾಪುರ