Advertisement

ಅಪಾಯದ ಹೆದ್ದಾರಿ: ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿಯಲ್ಲಿ ಗುಡ್ಡ ಕುಸಿತದ ಭೀತಿ

03:26 PM Sep 02, 2020 | keerthan |

ಬಂಟ್ವಾಳ: ಮಳೆಗಾಲದಲ್ಲಿ ಗುಡ್ಡ ಕುಸಿದು ಸಾವು ನೋವು ಸಂಭವಿಸುತ್ತಿರುವ ಘಟನೆಗಳು ನಡೆಯುತ್ತಿರುವುದನ್ನು ನಾವು ಪದೇ ಪದೇ ಕೇಳುತ್ತಲೇ ಇದ್ದೇವೆ. ಇಲ್ಲೊಂದು ಪ್ರದೇಶದಲ್ಲಿ ಹೆದ್ದಾರಿ ಕಾಮಗಾರಿಗಾಗಿ ಗುಡ್ಡವನ್ನು ಅಗೆಯಲಾಗಿದ್ದು, ಪ್ರಸ್ತುತ ಗುಡ್ಡಗಳು ಅಪಾಯಕಾರಿ ಸ್ಥಿತಿಯಲ್ಲಿದೆ. ಗುಡ್ಡದ ಮೇಲ್ಭಾಗದಲ್ಲಿ ಬೃಹತ್ ಗಾತ್ರದ ಮರಗಳೂ ಇರುವುದರಿಂದ ಅಪಾಯದ ಸಾಧ್ಯತೆ ಹೆಚ್ಚಿದೆ.

Advertisement

ಬಿ.ಸಿ.ರೋಡು-ಪುಂಜಾಲಕಟ್ಟೆ 19.85 ಕಿ.ಮೀ.ಹೆದ್ದಾರಿ ಅಭಿವೃದ್ಧಿಗಾಗಿ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಭೂಸ್ವಾಧೀನ ಪಡಿಸಲಾದ ಪ್ರದೇಶಗಳನ್ನು ಅಗೆದು ರಸ್ತೆ ನಿರ್ಮಿಸಲಾಗಿದೆ. ರಸ್ತೆ ಸಾಗುವ ನಾವೂರು ಗ್ರಾಮದ ಬಡಗುಂಡಿ ಪ್ರದೇಶಗಳಲ್ಲಿ ಹೆದ್ದಾರಿ ಒಂದು ಭಾಗವು ಗುಡ್ಡ ಪ್ರದೇಶವಾಗಿರುವುದರಿಂದ ಭೂಸ್ವಾಧೀನದ ವೇಳೆ ಸುಮಾರು 50 ಅಡಿ ಎತ್ತರದ ಗುಡ್ಡಗಳು ನಿರ್ಮಾಣವಾಗಿದೆ.

ಗುಡ್ಡದ ಮೇಲ್ಭಾಗದಲ್ಲಿ ಬೃಹತ್ ಗಾತ್ರದ ಮರಗಳು ಕೂಡ ಇದ್ದು, ಒಂದು ವೇಳೆ ಮಳೆಯ ಕಾರಣದಿಂದ ಮರಗಳು ಸಹಿತ ಗುಡ್ಡ ಕುಸಿದರೆ ಹೆದ್ದಾರಿ ಸಂಚಾರ ಸ್ಥಗಿತಗೊಳ್ಳಬಹುದು. ಹೆದ್ದಾರಿಯಲ್ಲಿ ಧರ್ಮಸ್ಥಳ ಭಾಗಕ್ಕೆ ತೆರಳುವ ಬಸ್ಸುಗಳು ಸೇರಿದಂತೆ ಸಾವಿರಾರು ವಾಹನಗಳು ರಾತ್ರಿ-ಹಗಲು ಸಂಚರಿಸುತ್ತಿದ್ದು, ಒಂದು ವೇಳೆ ವಾಹನಗಳು ಸಾಗುವ ವೇಳೆ ಈ ಗುಡ್ಡ ಕುಸಿತವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ಹೆಚ್ಚುವರಿ ಭೂಸ್ವಾಧೀನಕ್ಕೆ ಪ್ರಸ್ತಾವನೆ

Advertisement

ಪ್ರಾರಂಭದಲ್ಲಿ ಹೆದ್ದಾರಿಗೆ 159 ಕೋ.ರೂ.ಅನುದಾನ ಮಂಜೂರಾಗಿದ್ದು, ಅದರಲ್ಲಿ ಸುಮಾರು 100 ಕೋ.ರೂ.ಕಾಮಗಾರಿ ನಡೆಸುವುದಕ್ಕೆ ಹಾಗೂ ಉಳಿದ ಮೊತ್ತ ಭೂಸ್ವಾಧೀನ, ಮರಗಳ ತೆರವು, ವಿದ್ಯುತ್ ಕಂಬಗಳ ತೆರವಿಗೆ ಮೀಸಲಿಡಲಾಗಿತ್ತು. ಪ್ರಸ್ತುತ ಒಂದು ಹಂತದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ.

ಆದರೆ ಅಪಾಯಕಾರಿ ಗುಡ್ಡ ನಿರ್ಮಾಣವಾಗಿರುವ ಪ್ರದೇಶಗಳು ಖಾಸಗಿ ಜಮೀನುಗಳಾಗಿದ್ದು, ಅದನ್ನು ತೆರವುಗೊಳಿಸಿ ಗುಡ್ಡವನ್ನು ತಗ್ಗು ಮಾಡಬೇಕಾದರೆ ಮತ್ತೆ ಭೂಸ್ವಾಧೀನ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಅದಕ್ಕೆ ಹೆಚ್ಚಿನ ಅನುದಾನ ಬೇಕಿದ್ದು, ಪ್ರಸ್ತುತ ಹೆದ್ದಾರಿ ಇಲಾಖೆಯು ಹೆಚ್ಚುವರಿ ಅನುದಾನಕ್ಕೆ ಮನವಿ ಮಾಡಿದೆ. ಅದಕ್ಕೆ ಅನುದಾನ ಮಂಜೂರುಗೊಂಡ ಬಳಿಕವೇ ಗುಡ್ಡಗಳ ತೆರವು ಕಾರ್ಯ ನಡೆಯಬೇಕಿದೆ. ಹೀಗಾಗಿ ಅಪಾಯ ಸಂಭವಿಸುವ ಮೊದಲು ಸಂಬಂಧ ಪಟ್ಟವರು ಎಚ್ಚೆತ್ತುಕೊಳ್ಳಬೇಕಿದೆ.

ಸಾಕಷ್ಟು ಕಡೆಗಳಲ್ಲಿ ಕುಸಿದಿದೆ.!
ನಾವೂರು ಗ್ರಾಮದ ಬಡಗುಂಡಿ ಪ್ರದೇಶಗಳಲ್ಲಿ ಈಗಾಗಲೇ ಸಾಕಷ್ಟು ಕಡೆ ಗುಡ್ಡ ಕುಸಿದು ರಸ್ತೆಗೆ ಬಂದು ನಿಂತಿದೆ. ಇನ್ನು ಕೆಲವೆಡೆ ಗುಡ್ಡ ಪೂರ್ಣ ಪ್ರಮಾಣದಲ್ಲಿ ಬಿರುಕು ಬಿಟ್ಟಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ರಸ್ತೆಗೆ ಕುಸಿದಿರುವ ಭಾಗಗಳಲ್ಲಿ ವಾಹನಗಳು ಆಭಾಗಕ್ಕೆ ತೆರಳದಂತೆ ಬ್ಯಾರಿಕೇಡ್‌ಗಳನ್ನೂ ಇಡಲಾಗಿದೆ.

ಬುಡದಲ್ಲೇ ವಿದ್ಯುತ್ ಕಂಬಗಳು
ಹೆದ್ದಾರಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ತೆರಳುಗೊಳಿಸಲಾದ ವಿದ್ಯುತ್ ಕಂಬಗಳನ್ನು ಗುಡ್ಡ ಅಗೆದ ಬಳಿಕ ಸರತಿಯಲ್ಲಿ ಹಾಕಲಾಗಿದ್ದು, ಪ್ರಸ್ತುತ ಕಂಬಗಳು ಗುಡ್ಡದ ಬುಡದಲ್ಲೇ ಇವೆ. ಗುಡ್ಡ ಮಣ್ಣು ಕುಸಿದರೆ ಈ ವಿದ್ಯುತ್ ಕಂಬಗಳು, ತಂತಿಗಳ ಮೇಲೆಯೇ ಬೀಳಲಿದ್ದು, ಪರಿಣಾಮ ಲಕ್ಷಾಂತರ ರೂ.ನಷ್ಟ ಸಂಭವಿಸಲಿದೆ. ಗುಡ್ಡದಿಂದ ಕನಿಷ್ಟ ಒಂದು ಮರ ತಂತಿಯ ಮೇಲೆ ಬಿದ್ದರೂ, ಹತ್ತಾರು ಕಂಬಗಳು ಧರೆಗುರುಳುವ ಸಾಧ್ಯತೆ ಹೆಚ್ಚಿದೆ.

ಅಪಾಯಕಾರಿ ಗುಡ್ಡಗಳ ಶೀಘ್ರ ತೆರವು
ಪುಂಜಾಲಕಟ್ಟೆ ಹೆದ್ದಾರಿಯಲ್ಲಿ ಅಪಾಯಕಾರಿ ಗುಡ್ಡಗಳಿರುವುದು ನಮ್ಮ ಗಮನಕ್ಕೆ ಬಂದಿದ್ದು, ಶೀಘ್ರದಲ್ಲಿ ಅದನ್ನು ತೆರವುಗೊಳಿಸುವ ಕಾರ್ಯ ಮಾಡಲಾಗುವುದು. ಪ್ರಸ್ತುತ ನಡೆದಿರುವ ಭೂಸ್ವಾಧೀನ ಪ್ರಕ್ರಿಯೆಯು ಕಡಿಮೆಯಾಗಿದ್ದು, ಹೆಚ್ಚಿನ ಸ್ವಾಧೀನಕ್ಕಾಗಿ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಅಪಾಯಕಾರಿ ಗುಡ್ಡಗಳನ್ನು ತಗ್ಗಿಸುವ ಕೆಲಸ ಮಾಡಲಾಗುತ್ತದೆ ಎನ್ನತ್ತಾರೆ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ, ಮಂಗಳೂರಿನ ಎಇಇ ಆಗಿರುವ ರಮೇಶ್.

Advertisement

Udayavani is now on Telegram. Click here to join our channel and stay updated with the latest news.

Next