Advertisement

ಭಾರೀ ಮಳೆ ಭೂ ಕುಸಿತ, ಮನೆಗಳಿಗೆ ಹಾನಿ

02:40 AM Jun 15, 2018 | Team Udayavani |

ಬೆಳ್ತಂಗಡಿ: ತಾಲೂಕಿನ ವಿವಿಧೆಡೆ ಭಾರೀ ಮಳೆಯಿಂದಾಗಿ ಭೂ ಕುಸಿತ ಹಾಗೂ ಮನೆಗಳಿಗೆ ಹಾನಿ ಉಂಟಾಗಿದ್ದು, ಶಾಸಕ ಹರೀಶ್‌ ಪೂಂಜ ಅವರು ಸಂಬಂಧಿತ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿ, ಸಮಸ್ಯೆ ಬಗೆಹರಿಸುವ ಭರವಸೆಯಿತ್ತರು. ರೆಂಕೆದ ಗುತ್ತು ಬಳಿ ಮಹಿಳೆಯರು ವಾಸವಿದ್ದ ಮನೆಗೆ ಹಾನಿಯಾಗಿದೆ. ಇಂದಬೆಟ್ಟು ಗ್ರಾಮದ ಫಾತಿಮಾ ಹಾಗೂ ಬಂಗಾಡಿಯ ಮಹಮದ್‌ ಅವರ ಮನೆಗೆ ಹಾನಿಯಾಗಿದೆ. ಲಾೖಲ ಗ್ರಾಮದ ಕಾವಟೆ ನಿವಾಸಿ ನಟರಾಜ್‌ ಗೌಡ ಅವರ ಮನೆ ಮೇಲೆ ಗುಡ್ಡ ಕುಸಿದಿದ್ದು, ಕಿಟಕಿ ಮೂಲಕ ಮಣ್ಣು ಮನೆಯ ಒಳಗೆ ಬಂದಿದೆ. ಇದರಿಂದಾಗಿ ಮನೆ ಪೂರ್ತಿ ಕೆಸರಿನಿಂದ ಆವೃತವಾಗಿದೆ. ಅಂಕಾಜೆಯ ಉಮೇಶ್‌ ಗೌಡ ಅವರ ಮನೆ ಬಳಿ ಗುಡ್ಡ ಕುಸಿದು ಹಾನಿಯಾಗಿದೆ. ಪ್ರಕಾಶ್‌, ಆನಂದ್‌, ಕಲಾವತಿ, ಲಲಿತಾ ಅವರ ಮನೆಗಳೂ ಅಪಾಯದ ಸ್ಥಿತಿಯಲ್ಲಿದ್ದು, ಶಾಸಕ ಹರೀಶ್‌ ಪೂಂಜ ಭೇಟಿ ನೀಡಿದರು.

Advertisement

ಸಂಚಾರ ಸ್ಥಗಿತ
ಲಾೖಲ – ಅಗರಿ ಸಡಕ್‌ ರಸ್ತೆಯಲ್ಲಿ ಕಾವಟೆ ಬಳಿ ಗುಡ್ಡ ಕುಸಿದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಆಗಮಿ ಸಿದ ಶಾಸಕ ಹರೀಶ್‌ ಪೂಂಜ ಕ್ರಮ ಕೈಗೊಳ್ಳಲು ಸೂಚಿಸಿದರು.

ಹೊಳೆ: ನಿವಾಸಿಗಳಿಗೆ ಜಾಗ
ಲಾೖಲ ಗಾಂಧಿನಗರ ಬಳಿ ಹೊಳೆ ಬದಿ ವಾಸಿಸುತ್ತಿದ್ದ ವಸಂತಿ, ಜಗನ್ನಾಥ, ಶ್ರೀಧರ, ಜಗನ್ನಾಥ್‌, ಶಾರದಾ, ಚಂದ್ರಶೇಖರ ಅವರ ಜಾಗ ಹೆಚ್ಚು ಮಳೆ ಬಂದಾಗ ಮುಳುಗಡೆಯಾಗುತ್ತಿದ್ದು, ಸಮೀಪದಲ್ಲಿದ್ದ ಡಿಸಿ ಮನ್ನಾ ಭೂಮಿ ಗುರುತಿಸಿ 6 ಕುಟುಂಬಗಳಿಗೂ ತಲಾ 2.5 ಸೆಂಟ್ಸ್‌ ಜಾಗ ನೀಡಲು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಸ್ಥಳದಲ್ಲಿ ಕಂದಾಯಾಧಿಕಾರಿ ರವಿ, ಪಿಡಿಒ ಪ್ರಕಾಶ್‌ ಶೆಟ್ಟಿ, ಕಾನಿಷ್ಕಾ, ಗ್ರಾ.ಪಂ ಉಪಾಧ್ಯಕ್ಷ ಗಿರೀಶ್‌ ಡೋಂಗ್ರೆ, ತಾ.ಪಂ. ಸದಸ್ಯ ಸುಧಾಕರ, ಕೃಷ್ಣಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಪೂಂಜ ಅಭಯ
ಶಾಸಕ ಹರೀಶ್‌ ಪೂಂಜ ಅವರು ಫೇಸ್‌ ಬುಕ್‌ ಮೂಲಕ ಸಾರ್ವಜನಿಕರಿಗೆ ಅಭಯ ನೀಡಿದ್ದಾರೆ. ತಾಲೂಕಿನಲ್ಲಿ ಸಮಸ್ಯೆಗಳಾದಲ್ಲಿ ನೇರವಾಗಿ ಸಂಪರ್ಕಿಸಲು ದೂರವಾಣಿ ಸಂಖ್ಯೆಯನ್ನು ನೀಡಿದ್ದಾರೆ. ಜಾಗರೂಕರಾಗಿರಿ, ನಿಧಾನವಾಗಿ ವಾಹನ ಚಲಾಯಿಸಿ ಎನ್ನುವ ಮೂಲಕ ಕಾಳಜಿ ಮೆರೆದಿದ್ದಾರೆ. ತಮ್ಮ ಊರುಗಳಲ್ಲಿ ಜನರಿಗೆ ಸಹಾಯ ಬೇಕಾಗಬಹುದು, ಅಗತ್ಯ ವಸ್ತುಗಳು, ಔಷಧ ಮೊದಲಾದ ವ್ಯವಸ್ಥೆ ಬೇಕಾದವರಿಗೆ ಸಹಾಯ ಮಾಡುವಂತೆ ಸ್ವಯಂ ಸೇವಕರು, ಬಿಜೆಪಿ ಕಾರ್ಯಕರ್ತರು, ಯುವ ಮೋರ್ಚಾ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

10 ಕೋ. ರೂ. ಬಿಡುಗಡೆ ಮಾಡಿ
ತಾಲೂಕಿನಲ್ಲಿ ಮಳೆಯಿಂದ ಹಾನಿಯಾಗಿದ್ದು, ಸೂಕ್ತ ಕ್ರಮಕೈಗೊಳ್ಳಲು ಹಾಗೂ ಪರ್ಯಾಯ ವ್ಯವಸ್ಥೆಗೆ ಸೂಚಿಸಲಾಗಿದೆ. ತಾಲೂಕಿನಲ್ಲಿ ಗರಿಷ್ಠ ಹಾನಿಯಾಗಿದ್ದು, ರಾಜ್ಯ ಸರಕಾರದ ಕಂದಾಯ ಸಚಿವರು ಕೂಡಲೇ ತಾಲೂಕಿಗೆ ವಿಶೇಷ ನಿಧಿಯಾಗಿ 10 ಕೋಟಿ ರೂ. ಬಿಡುಗಡೆ ಮಾಡಬೇಕಿದೆ. ಸುರಕ್ಷತಾ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದು, ಸಮಸ್ಯೆ ಕುರಿತು ತತ್‌ ಕ್ಷಣ ವರದಿ ನೀಡುವಂತೆ ಸೂಚಿಸಲಾಗಿದೆ.
– ಹರೀಶ್‌ ಪೂಂಜ, ಶಾಸಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next