ಸಾಗರ: ತಾಲೂಕಿನ ಬ್ರಾಹ್ಮಣ ಬೇದೂರು ಗ್ರಾಮದಲ್ಲಿ ಈ ಹಿಂದೆ ನಡೆಸಿರುವ ಕಲ್ಲು ಗಣಿಗಾರಿಕೆಯಿಂದ ನಿರ್ಮಾಣವಾಗಿರುವ ಆಳವಾದ ಗುಂಡಿಗಳಲ್ಲಿ ಮಳೆ ನೀರು ತುಂಬಿದ್ದು, ಭೂಮಿ ಸಡಿಲಗೊಂಡಿರುವ ಪರಿಣಾಮ ಹಸಿರು ಬೆಟ್ಟ ಕುಸಿಯಲಾರಂಭಿಸಿದೆ ಎಂದು ವೃಕ್ಷ ಲಕ್ಷ ಆಂದೋಲನದ ಸಮೀಕ್ಷಾ ತಂಡ ಸ್ಥಳಕ್ಕೆ ಭೇಟಿ ನೀಡಿ ಆತಂಕ ವ್ಯಕ್ತಪಡಿಸಿದೆ.
ವೃಕ್ಷ ಲಕ್ಷ ಆಂದೋಲನದ ತಂಡದ ಜೊತೆ ಬೇದೂರಿಗೆ ಭೇಟಿ ನೀಡಿ ಗಣಿಗಾರಿಕೆ ಹಾಗೂ ಭೂ ಕುಸಿತದ ಪರಿಸ್ಥಿತಿ ವೀಕ್ಷಿಸಿ ಮಾತನಾಡಿದ ಜೀವ ವೈವಿಧ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಬೆಟ್ಟ ಕೆಳಗೆ ಜಾರಲು ಶುರುವಾಗಿದೆ. ಬೆಟ್ಟದ ಮೇಲಿನ ಗಣಿಗಾರಿಕೆ ನಿಂತರೂ ಬಾಯ್ದೆರೆದು ನಿಂತ ಗಣಿ ಬಾವಿಗಳು ಬೃಹತ್ ಕೆರೆಯಾಗಿ ಮಾರ್ಪಟ್ಟಿದೆ. ನೀರಿನ ಒತ್ತಡ ಹೆಚ್ಚಾಗಿ ಗುಡ್ಡ ಕುಸಿತ ಆರಂಭವಾಗಿದೆ. ರೈತರು ಮನೆ, ಕೊಟ್ಟಿಗೆ ಮೇಲೆ ಬೆಟ್ಟ ಜಾರುವ ಆತಂಕದಲ್ಲಿ ಕಂಗಾಲಾಗಿದ್ದಾರೆ. ಸ್ಥಳೀಯ ಆಡಳಿತದ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಸಮೇತ ಸ್ಥಳಕ್ಕೆ ಭೇಟಿ ನೀಡಬೇಕು. ಸೂಕ್ತ ಪರಿಹಾರೋಪಾಯವನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಇಲ್ಲಿ ಅಕ್ರಮ ಗಣಿಗಾರಿಕೆ ಜನಾಂದೋಲನದ ಪರಿಣಾಮವಾಗಿ ನಿಂತಿದೆ. ಆದರೆ ಗಣಿಗಾರಿಕೆ ದುಷ್ಪ್ರರಿಣಾಮದಿಂದಾಗಿ ಮತ್ತೆ ಭೂ ಕುಸಿತದ ಆತಂಕದಲ್ಲಿ ಹಳ್ಳಿ ಜನ ಸಿಲುಕಿದ್ದಾರೆ. ಈಗ ಜೀವ ಹಾನಿ ಆಗದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯವಶ್ಯಕ. ಭಾರೀ ಮಳೆಯಿಂದ ಕಡಿದಾದ ಈ ಬೆಟ್ಟ ಕುಸಿತ ಇನ್ನಷ್ಟು ಹೆಚ್ಚಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ : ಮೀನು ಮಾರಾಟ ಮಾಡುತ್ತಿದ್ದ ಮಮತಾ ಆಪ್ತ ಮಂಡಲ್ ಇಂದು ಸಾವಿರ ಕೋಟಿ ಆಸ್ತಿ ಒಡೆಯ!
ಕಳೆದ ವರ್ಷ 4 ಮನೆಗಳು ಭೂ ಕುಸಿತದಿಂದ ನಾಶವಾಗಿವೆ. ಬೆಟ್ಟದ ಮೇಲೆ 4 ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಿದ್ದ ಗಣಿಗಾರಿಕೆಗೆ ಹೋರಾಟದಿಂದ ತಡೆಬಿದ್ದಿದೆ. ಇದೀಗ ಗುಡ್ಡದ ಬುಡದಲ್ಲಿರುವ ನಮ್ಮ ಬದುಕು ಅತಂತ್ರ ಸ್ಥಿತಿಯಲ್ಲಿದೆ ಎಂದು ಗ್ರಾಮದ ಮುಖಂಡ ಉದಯಕುಮಾರ ಸಮೀಕ್ಷಾ ತಂಡದ ಎದುರು ಸಂಕಟ ತೋಡಿಕೊಂಡರು.
ಜೀವ ವೈವಿಧ್ಯ ಮಂಡಳಿ ಸದಸ್ಯ ಕೆ. ವೆಂಕಟೇಶ, ಪರಿಸರ ತಜ್ಞರಾದ ಶ್ರೀಪಾದ, ನಾರಾಯಣ ಗಡೀಕೈ, ಸುಬ್ಬರಾವ್ ಮುಂತಾದವರು ಸಮೀಕ್ಷಾ ತಂಡದಲ್ಲಿದ್ದರು.