ಬೆಂಗಳೂರು: ವಿಪಕ್ಷಗಳ ವಿರೋಧದ ನಡುವೆ ವಿಧಾನಸಭೆಯಲ್ಲಿ ಇಂದು ಭೂಸುಧಾರಣಾ ತಿದ್ದುಪಡಿ ವಿಧೇಯಕ ಅಂಗೀಕಾರವಾಗಿದೆ. ಕೃಷಿ ಭೂಮಿಯನ್ನು ಯಾರೂ ಬೇಕಾದರೂ ಖರೀದಿಸಬಹುದು. ಹೀಗಾಗಿ ಇದು ರೈತರ ವಿರೋಧಿಯಾಗಿದೆ ಎಂದು ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು.
ರಾಜ್ಯ ಸರ್ಕಾರದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯ ಬಗ್ಗೆ ಇಂದು ವಿಧಾನಸಭೆ ಕಲಾಪದಲ್ಲಿ ಚರ್ಚೆ ನಡೆಯಿತು.
ಇದನ್ನೂ ಓದಿ: ಪಿಎಂ ಮೋದಿ ಬಹುರಾಷ್ಟ್ರೀಯ ಕಂಪನಿಗಳ ಮಧ್ಯವರ್ತಿ: ಮಾಜಿ ಶಾಸಕ ಶ್ರೀರಾಮರೆಡ್ಡಿ ವಾಗ್ದಾಳಿ
ಕಲಾಪದಲ್ಲಿ ಚರ್ಚೆಯ ನಂತರ ಸಚಿವ ಆರ್. ಅಶೋಕ್ ಅವರು, 2014ರಲ್ಲೇ ತಿದ್ದುಪಡಿ ನಿರ್ಧಾರವಾಗಿತ್ತು. ಪ್ರತಿ ನಾಗರಿಕರಿಗೂ ತನ್ನ ಉದ್ಯೋಗ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ ಹೊಸದಾಗಿ ಯುವಕರು ಕೃಷಿ ಬರಬೇಕು ಎಂಬ ಉದ್ದೇಶದಿಂದ 79ಎ ಮತ್ತು 79ಬಿ ತಿದ್ದುಪಡಿ ತರಲಾಗಿದೆ. ಯುನಿಟ್ ಪ್ರಮಾಣವನ್ನು ಹಳೆಯದನ್ನೇ ಮುಂದುವರಿಸಿ ಕಡಿಮೆ ಮಾಡಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ. ನೀರಾವರಿ ಭೂಮಿಯನ್ನು ಕೃಷಿ ಬಳಸಬೇಕು. ಪರಿಶಿಷ್ಟಜಾತಿ ಮತ್ತು ಪಂಗಡ ಭೂಮಿ ಮುಟ್ಟಲು ಅವಕಾಶವಿಲ್ಲ ಎಂದು ಹೇಳಿ ತಿದ್ದುಪಡಿಯೊಂದಿಗೆ ವಿಧೇಯಕಕ್ಕೆ ಒಪ್ಪಿಗೆ ನೀಡಬೇಕು ಎಂದು ಕೋರಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ, ರೈತರಿಗೆ ಮರಣಶಾಸನವಾಗಿರುವ ಈ ಕಾಯ್ದೆಯನ್ನು ವಾಪಾಸ್ ಪಡೆಯಬೇಕು. ಈ ತಿದ್ದುಪಡಿ ತರುವುದರ ಹಿಂದೆ ಕಾರ್ಪೋರೇಟ್ ಕಂಪನಿಗಳ ಪ್ರಭಾವ ಇದೆ. ಇದರಲ್ಲಿ ಸಾವಿರಾರು ಕೋಟಿ ವ್ಯವಹಾರವಾಗಿದೆ. ಕಾರ್ಪೋರೇಟ್ ಕಂಪನಿಗಳ ಜೊತೆ ಸರ್ಕಾರ ಶಾಮೀಲಾಗಿ ರೈತ ಸಮುದಾಯವನ್ನು ನಾಶ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.