ಹುಬ್ಬಳ್ಳಿ: ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರಾಜ್ಯಕ್ಕೆ ಅದರಲ್ಲೂ ರೈತರಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ಇದು ಕೃಷಿಕರನ್ನು ಬಿಟ್ಟು ಉಳ್ಳವರ ಸೊತ್ತಾಗುತ್ತದೆ. ಕೇಂದ್ರ-ರಾಜ್ಯ ಸರ್ಕಾರಗಳು ಉದ್ದಿಮೆದಾರರ ಕೈಗೊಂಬೆಯಾಗಿ ವರ್ತಿಸುತ್ತಿವೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆರೋಪಿಸಿದರು.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಈ ಮೊದಲು ಕೃಷಿಕನಲ್ಲದ ಯಾವುದೇ ವ್ಯಕ್ತಿ ಕೃಷಿ ಜಮೀನು ಖರೀದಿಸಲು ಅವಕಾಶವಿರಲಿಲ್ಲ. ಇದನ್ನು ಸರಳೀಕರಿಸಿ ಉಚ್ಚನ್ಯಾಯಾಲಯದ ನೆಪವೊಡ್ಡಿ ತಿದ್ದುಪಡಿ ತರಲಾಗಿದೆ. ಈ ರೀತಿಯ ಕಾನೂನಿನಿಂದ ಶ್ರೀಮಂತರು ವಾಮಮಾರ್ಗದಿಂದ ಗಳಿಸಿದ ಹಣವನ್ನು ರೈತರಿಗೆ ಆಮಿಷವೊಡ್ಡಿ ಬೇಕಾದಷ್ಟು ಭೂಮಿ ಖರೀದಿಸುತ್ತಾರೆ.
ಕಪ್ಪುಹಣ ಇದ್ದವರು ಕೃಷಿ ಭೂಮಿ ಪಡೆದು ನಿವೇಶನ ಮಾಡುವುದು ಇಲ್ಲವೇ ಕೃಷಿಯೇತರ ಉಪಯೋಗಕ್ಕೆ ಬಳಕೆ ಆಗಲಿದೆ. ಇದರಿಂದ ಮುಂದೆ ದವಸ ಧಾನ್ಯಗಳಿಗೆ ಅನ್ಯರಾಜ್ಯಗಳ ಮೇಲೆ ಅವಲಂಬಿಸಬೇಕಾಗುತ್ತದೆ. ಯಾರು ಬೇಕಾದರೂ ಜಮೀನು ಖರೀದಿಸಿದರೆ ಅವರಿಗೆ ಕೃಷಿ ಮಾಡಲು ಸಾಧ್ಯವೆಂಬುದನ್ನು ನೀವು ತಿಳಿದುಕೊಂಡಿದ್ದೀರಾ? ಈ ತಿದ್ದುಪಡಿ ಕಾಯ್ದೆಯಿಂದ ಒಂದು ಕುಟುಂಬದಲ್ಲಿ ಐವರು ಇದ್ದರೆ 108 ಎಕರೆ ಜಮೀನು ಖರೀದಿಸಬಹುದಾಗಿದೆ.
ಅಂದರೆ ಎಲ್ಲ ವ್ಯಾಪಾರಸ್ಥರು ಭೂಮಿ ಖರೀದಿಸಿ ಹೆಚ್ಚಿಗೆ ವ್ಯಾಪಾರ ಮಾಡಿ ಹಣ ಗಳಿಸುವ ದಂಧೆಯಾಗುತ್ತದೆ. ಈ ಕಾನೂನು ತರುವುದಕ್ಕಿಂತ ಮೊದಲು ಎಲ್ಲಾ ರೈತ ಸಂಘದ ಮುಖ್ಯಸ್ಥರು, ರೈತರನ್ನು ಕರೆದು ಚರ್ಚಿಸಬಹುದಾಗಿತ್ತು. ಈ ಮೊದಲು ಉದ್ಯಮಿಗಳಿಗೆ, ಕಾರ್ಖಾನೆ ಮುಂತಾದ ವುಗಳಿಗೆ ಕೃಷಿ ಜಮೀನು ಬೇಕಾದಲ್ಲಿ ಕೆಐಎಡಿಬಿಗೆ ಅನುಮತಿ ಕೊಡಲು ಕಾನೂನಿನಲ್ಲಿ ಅವಕಾಶವಿತ್ತು. ಈ ಪರಿಸ್ಥಿತಿ ಮುಂದುವರಿದಲ್ಲಿ ಯಾರು ಬೇಕಾದರೂ ಎಷ್ಟು ಬೇಕಾದಷ್ಟು ಭೂಮಿ ಖರೀದಿಸಿ ಅದನ್ನು ಕೃಷಿಯೇತರ ಚಟುವಟಿಕೆಗೆ ಉಪ ಯೋಗಿಸದೆ ದುಬಾರಿ ಬೆಲೆಗೆ ಮಾರಾಟ ಮಾಡ ಲೂಬಹುದು.
ಅನ್ನ ಕೊಡುವ ರೈತನ ಬಾಯಲ್ಲಿ ಮಣ್ಣು ಹಾಕಿ ಇಂತಹ ಕೆಟ್ಟ ಕಾನೂನು ತರುವುದು ಸೂಕ್ತವಲ್ಲ. ಇದು ಅಪಾಯಕಾರಿ ಕಾಯ್ದೆ ತಿದ್ದುಪಡಿ ಆಗಿದೆ. ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ರೈತರ ಹೆಸರಿನಲ್ಲಿ ಪ್ರಮಾಣ ವಚನ ಮಾಡಿದ್ದೀರಿ. ಆದರೀಗ ರೈತರ ಬಾಯಲ್ಲಿ ಮಣ್ಣು ಹಾಕಲು ಹೊರಟಿದ್ದೀರಿ. ಇನ್ಮುಂದೆ ಇದ್ದ ಬಿದ್ದ ಜಮೀನು ಮಾರಿ, ದುಡ್ಡಿಗೆ ಆಕರ್ಷಿತರಾಗಿ ಇನ್ನಷ್ಟು ಆತ್ಮಹತ್ಯೆ ಮಾಡಿಕೊಳ್ಳುವಂಥ ವಾತಾವರಣ ನಿರ್ಮಾಣವಾಗುವುದು ಸ್ಪಷ್ಟವಾಗುತ್ತದೆ. ಇಂತಹ ಕರಾಳ ಶಾಸನ ತರುವುದು ಅವಿವೇಕದ ಪರಮಾವಧಿ ಎಂದು ಹೊರಟ್ಟಿ ತಿಳಿಸಿದ್ದಾರೆ.