ಹೊಸದಿಲ್ಲಿ: ಭೂದಾಖಲೆಗಳಲ್ಲಿರುವ ಭಾಷಾ ತೊಡಕುಗಳನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಅದರಂತೆ, ಇನ್ನು ಮುಂದೆ ದೇಶಾದ್ಯಂತ ಭೂಮಿಯ ದಾಖಲೆಗಳ ರೆಕಾರ್ಡ್ ಆಫ್ ರೈಟ್ಸ್(ಜಮಾಬಂದಿ) ಒಟ್ಟು 22 ಭಾಷೆಗಳಲ್ಲಿ ಲಭ್ಯವಾಗಲಿದೆ.
ಇಡೀ ಭೂಮಿಯ ವಿವರಗಳನ್ನು ಒಳಗೊಂಡ ಭೂ ದಾಖಲೆಯನ್ನು ಜಮಾಬಂದಿ (ಆರ್‌ಒಆರ್) ಎಂದು ಕರೆಯುತ್ತಾರೆ. ಭೂ ದಾಖಲೆಗಳ ವಿಚಾರ ದಲ್ಲಿ ಭಾಷೆಯ ತೊಡಕೇ ದೊಡ್ಡ ಸವಾಲಾಗಿತ್ತು. ದಿಲ್ಲಿಯ ವ್ಯಕ್ತಿಯೊಬ್ಬರು ಕರ್ನಾಟಕದಲ್ಲಿ ಕೃಷಿ ಭೂಮಿಯೊಂದನ್ನು ಖರೀದಿಸಿದರೆ, ಅದರ ದಾಖಲೆಗಳೆಲ್ಲ ಕನ್ನಡ ಭಾಷೆಯಲ್ಲೇ ಇರುತ್ತವೆ. ಹೀಗಾಗಿ, ಖರೀದಿಸಿದಾತನಿಗೆ ಆ ದಾಖಲೆಗಳು ಅರ್ಥವಾಗುವುದಿಲ್ಲ. ಅದನ್ನು ಅರ್ಥಮಾಡಿ ಕೊಳ್ಳಬೇಕೆಂದರೆ ಆತ ಸ್ಥಳೀಯ ಬ್ರೋಕರ್‌ಗಳು ಮತ್ತು ವಕೀಲರನ್ನು ಅವಲಂಬಿಸ ಬೇಕಾಗುತ್ತದೆ. ಇಂಥ ಸಮಸ್ಯೆಯನ್ನು ಅನೇಕರು ಅನುಭವಿಸುತ್ತಿದ್ದಾರೆ.
3 ಭಾಷೆಗಳಿಗೆ ಕಡ್ಡಾಯ ಭಾಷಾಂತರ: ಈ ಸಮಸ್ಯೆ ನೀಗಿಸಲೆಂದೇ ಸರಕಾರವು, ಜಮಾಬಂದಿಯನ್ನು 22 ಭಾಷೆಗಳಿಗೆ ತರ್ಜುಮೆ ಮಾಡಲು ಮುಂದಾಗಿದೆ. ಈಗಾಗಲೇ 8 ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿ ಮಾಡಲಾಗಿದೆ.
ಸಾಫ್ಟ್ವೇರ್ ಕೂಡ ಸಿದ್ಧವಾಗಿದೆ. ಏಕಕಾಲಕ್ಕೆ ಆರ್‌ಒಆರ್‌ಗಳನ್ನು 22 ಭಾಷೆಗಳಿಗೆ ಭಾಷಾಂತರ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಮೊದಲು ಜಮಾಬಂದಿಗಳನ್ನು ಕಡ್ಡಾಯವಾಗಿ ಇಂಗ್ಲಿಷ್, ಹಿಂದಿ ಮತ್ತು ಆಯಾ ರಾಜ್ಯದ ಭಾಷೆಗಳಿಗೆ ಭಾಷಾಂತರ ಮಾಡುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಲಾಗಿದೆ ಎಂದು ಭೂ ಸಂಪನ್ಮೂಲ ಇಲಾಖೆಯ ಜಂಟಿ ಕಾರ್ಯದರ್ಶಿ ಸೊನ್ಮೊನಿ ಬೋರಾಹ್ ಹೇಳಿದ್ದಾರೆ.
ಈ ಮಹತ್ವಾಕಾಂಕ್ಷೆಯ ಬಹುಭಾಷೀಯ ಆರ್‌ಒಆರ್ ಯೋಜನೆ ಜಾರಿಗೆ ಅಂದಾಜು 11 ಕೋಟಿ ರೂ. ವೆಚ್ಚವಾಗಲಿದ್ದು, ಒಂದು ವರ್ಷದಲ್ಲಿ ಟಾರ್ಗೆಟ್ ಪೂರ್ಣಗೊಳಿ ಸಲಿದ್ದೇವೆ ಎಂದೂ ಅವರು ತಿಳಿಸಿದ್ದಾರೆ. ಸದ್ಯ ಈ ಯೋಜನೆಯನ್ನು ಮಹಾರಾಷ್ಟ್ರ, ಬಿಹಾರ, ಗುಜರಾತ್, ಪುದುಚೇರಿ, ಉತ್ತರ ಪ್ರದೇಶ, ತಮಿಳುನಾಡು, ತ್ರಿಪುರಾ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.