ಬೆಂಗಳೂರು: ಜಿಂದಾಲ್ ಕಂಪನಿಗೆ ಭೂಮಿ ಮಾರಾಟ ನಿರ್ಧಾರ ಮರು ಪರಿಶೀಲನೆ ಮಾಡಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಭೂವಿಜ್ಞಾನಿಗಳಿಂದ ಅಲ್ಲಿ ಲಭ್ಯವಿರುವ ಅದಿರಿನ ಬಗ್ಗೆ ಪರಿಶೀಲನೆ ಮಾಡಿ ದಾಖಲೆ ಸಿದ್ಧಪಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ದೆಹಲಿಗೆ ತೆರಳುವ ಮುನ್ನಾ ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ರಾಜ್ಯ ಸರ್ಕಾರದ ವಿರುದ್ಧ ಮೂರು ದಿನ ನಡೆಸಲು ಉದ್ದೇಶಿಸಿದ್ದ ಅಹೋರಾತ್ರಿ ಧರಣಿಯನ್ನು ಎರಡು ದಿನಕ್ಕೆ ಸೀಮಿತಗೊಳಿಸಿದ್ದೇವೆ.
ಜೂ. 16ರಂದು ಸಂಸದರು ದೆಹಲಿಗೆ ತೆರಳಬೇಕಿರುವುದರಿಂದ ದೇ 14, 15ರಂದು ಮಾತ್ರ ಧರಣಿ ನಡೆಸಲಾಗುವುದು. ಬಿಜೆಪಿ ಹೋರಾಟ ಮುಂದುವರಿಯಲಾಗುವುದು. ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರದಲ್ಲಿ ಸರ್ಕಾರದ ಯಾವ ನಿಲುವು ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಲಾಗುವುದು ಎಂದು ತಿಳಿಸಿದರು.
ಸಾಲ ಮನ್ನಾ ಭರವಸೆ ನೀಡಿ ಹಣ ವಾಪಸ್ ಪಡೆದಿರುವುದು ಗೊಂದಲ ಮೂಡಿಸಿದೆ. ಮುಖ್ಯಮಂತ್ರಿಗಳು ಬೇಕಾಬಿಟ್ಟಿಯಾಗಿ ಮಾತನಾಡುವುದು ಮುಂದುವರಿದಿದೆ. 24 ಗಂಟೆಯೊಳಗೆ ಸಾಲ ಮನ್ನಾ ಮಾಡುವ ಭರವಸೆ ವರ್ಷ ಕಳೆದರೂ ಈಡೇರಿಲ್ಲ ಎಂದು ಹೇಳಿದರು.
ಸದಸ್ಯತ್ವ ಅಭಿಯಾನ: ರಾಷ್ಟ್ರಾದ್ಯಂತ ಬಿಜೆಪಿ ಸದಸ್ಯತ್ವ ಅಭಿಯಾನ ಆರಂಭಿಸುವ ಸಂಬಂಧ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗುರುವಾರ ಹಾಗೂ ಶುಕ್ರವಾರ ದೆಹಲಿಯಲ್ಲಿ ನಡೆಯಲಿದ್ದು, ಸಭೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬುಧವಾರ ಸಂಜೆ ದೆಹಲಿಗೆ ತೆರಳಿದರು.
ಗುರುವಾರ ಎಲ್ಲ ರಾಜ್ಯಗಳ ಅಧ್ಯಕ್ಷರು ಸೇರಿದಂತೆ ಇತರೆ ಪ್ರಮುಖರ ಜತೆಗೆ ಸಭೆ ನಡೆಸಲಿರುವ ಅಮಿತ್ ಶಾ ಅವರು ಶುಕ್ರವಾರ ಸಂಘಟನಾ ಪ್ರಮುಖರೊಂದಿಗೆ ಚರ್ಚೆ ನಡೆಸಲಿದ್ದಾರೆ. ಸದಸ್ಯತ್ವ ಅಭಿಯಾನ ಅವಧಿ, ಗುರಿ, ಸದಸ್ಯತ್ವ ಪಡೆಯುವ ಸುಧಾರಿತ ವಿಧಾನಗಳ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡು ನಂತರ ಜಾರಿಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ದೇಶದಲ್ಲಿ ಸಂಘಟನಾತ್ಮಕ ವಿಚಾರ ಕುರಿತು ಚರ್ಚೆಗೆ ಗುರುವಾರ ದೆಹಲಿಯಲ್ಲಿ ಸಭೆ ನಡೆಯಲಿದ್ದು, ನಾನೂ ಪಾಲ್ಗೊಳ್ಳಲಿದ್ದೇನೆ. ಈ ಸಂದರ್ಭದಲ್ಲಿ ಸಹಜವಾಗಿಯೇ ಲೋಕಸಭಾ ಚುನಾವಣೆ ಕುರಿತಂತೆ ವರದಿಯನ್ನೂ ಕೇಳುತ್ತಾರೆ ಎಂದು ಯಡಿಯೂರಪ್ಪ ಹೇಳಿದರು.