Advertisement

ಭೂ ಒಡೆತನ ಸಮಸ್ಯೆಗೆ ಪರಿಹಾರ

02:20 AM Sep 16, 2020 | Hari Prasad |

ಬೆಂಗಳೂರು: ಪ್ರವಾಹಕ್ಕೆ ತುತ್ತಾಗುವ ಪ್ರದೇಶಗಳನ್ನು ಗುರುತಿಸಿ ಸಮಸ್ಯೆ ಹೊಂದಿರುವ ಕುಟುಂಬಗಳಿಗೆ ಶಾಶ್ವತ ವಸತಿ ಕಾಲನಿ ನಿರ್ಮಿಸಿ ಕೊಡಲು ಸರಕಾರ ಮುಂದಾಗಿದೆ.

Advertisement

ಡೀಮ್ಡ್ ಫಾರೆಸ್ಟ್‌ ಎಂದು ಪರಿಗಣಿಸಿರುವ ಜಮೀನಿನ ಪೈಕಿ 6 ಲಕ್ಷ ಹೆಕ್ಟೇರ್‌ ಕಂದಾಯ ಇಲಾಖೆಗೆ
ಹಸ್ತಾಂತರಗೊಂಡಲ್ಲಿ ಅದರಲ್ಲಿ 1.50 ಲಕ್ಷ ಹೆಕ್ಟೇರ್‌ ಜಮೀನು ವಸತಿ ಯೋಜನೆಗೆ ಮೀಸಲಿಡುವ ಬಗ್ಗೆ ಚಿಂತನೆ ನಡೆದಿದೆ.

2 ವರ್ಷಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಹದಿಂದ 25 ಸಾವಿರ ಕುಟುಂಬಗಳು ಮನೆ ಕಳೆದುಕೊಂಡಿವೆ.

ಈಗಿರುವ ಜಾಗದಲ್ಲೇ ಮತ್ತೆ ಮನೆ ನಿರ್ಮಿಸಿದರೂ ಪ್ರವಾಹದಿಂದ ಸಮಸ್ಯೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬದಲಿ ಜಾಗದಲ್ಲಿ ವಸತಿ ಕಾಲನಿ ಅಥವಾ ವಸತಿ ಸಂಕೀರ್ಣ ನಿರ್ಮಿಸಿ ಶಾಶ್ವತ ಪರಿಹಾರ ಕಲ್ಪಿಸುವುದು ಸರಕಾರದ ಉದ್ದೇಶ.

ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಯ ಸುಪರ್ದಿಗೆ ಬರುವ ಜಮೀನಿನಲ್ಲಿ 1.50 ಲಕ್ಷ ಹೆಕ್ಟೇರ್‌ ವಸತಿ ಉದ್ದೇಶಕ್ಕೆ ಮೀಸಲಿಡಲು ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಮಧ್ಯೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94 ಎ (4)ಕ್ಕೆ ತಿದ್ದುಪಡಿ ತಂದು ನಮೂನೆ-57ರಡಿ ಅರ್ಜಿ ಪಡೆದು ಸಾಗುವಳಿದಾರರಿಗೆ ಭೂಮಿ ಒಡೆತನ ನೀಡಲು ತೀರ್ಮಾನಿಸಲಾಗಿತ್ತು.

Advertisement

ಗ್ರಾಮೀಣ ಭಾಗದಲ್ಲಿ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಬಡವರಿಗೆ ಅದನ್ನು ಸಕ್ರಮಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94 ಸಿ ಮತ್ತು 94 ಸಿಸಿ ಅಡಿ ಅವಕಾಶ ಕಲ್ಪಿಸಿದ್ದು, ಅದರಡಿಯೂ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ.

ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಬಡವರಿಗೆ ಅದನ್ನು ಸಕ್ರಮಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94 ಸಿ ಮತ್ತು 94 ಸಿಸಿ ಅಡಿ ಅವಕಾಶ ಕಲ್ಪಿಸಿದ್ದು, ಅದರಡಿಯೂ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ.

ಈ ಎರಡೂ ಅರ್ಜಿದಾರರ ಅನುಭವದಲ್ಲಿರುವ ಜಮೀನಿನ ಪೈಕಿ ಬಹುತೇಕ ಜಮೀನನ್ನು ಡೀಮ್ಡ್ ಫಾರೆಸ್ಟ್‌ ಎಂದು ಪರಿಗಣಿಸಲಾಗಿದೆ. ಆರು ಲಕ್ಷ ಹೆಕ್ಟೇರ್‌ ಜಮೀನು ಕಂದಾಯ ಇಲಾಖೆಗೆ ಹಸ್ತಾಂತರವಾಗುವುದರಿಂದ ಆ ಅರ್ಜಿಗಳು ಇತ್ಯರ್ಥಗೊಳ್ಳಲಿವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಡೀಮ್ಡ್ ಫಾರೆಸ್ಟ್‌?
ಕಂದಾಯ ಇಲಾಖೆಗೆ ಸೇರಿದ 9.50 ಲಕ್ಷ ಹೆಕ್ಟೇರ್‌ ಜಮೀನು ಬಳಕೆಯಾಗದೆ ಅರಣ್ಯ ಇಲಾಖೆ ಸುಪರ್ದಿಗೆ ಹೋಗಿತ್ತು. ಅನಂತರ ಡೀಮ್ಡ್ ಫಾರೆಸ್ಟ್‌ ಎಂದು ಪರಿಗಣಿಸಲ್ಪಟ್ಟಿತ್ತು. ದಶಕಗಳಿಂದ ಕೆಲವರು ಅಲ್ಲಿ ಮನೆ ಕಟ್ಟಿದ್ದು, ಡೀಮ್ಡ್ ಫಾರೆಸ್ಟ್‌ ಎಂದು ಪರಿಗಣಿಸಿರುವುದರಿಂದ ಭೂ ಒಡೆತನ ನೀಡಲು ಸಾಧ್ಯವಾಗುತ್ತಿಲ್ಲ.

ವಸತಿ ಸೌಲಭ್ಯಕ್ಕೆ ಆದ್ಯತೆ
ಡೀಮ್ಡ್ ಫಾರೆಸ್ಟ್‌ ಎಂದು ಪರಿಗಣಿಸಿರುವ 9.50 ಲಕ್ಷ ಹೆಕ್ಟೇರ್‌ ಪೈಕಿ 6 ಲಕ್ಷ ಹೆಕ್ಟೇರ್‌ ಕಂದಾಯ ಇಲಾಖೆಗೆ ಮರು ಹಸ್ತಾಂತರವಾದರೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿರಂತರ ಸಮಸ್ಯೆಗೆ ತುತ್ತಾಗುವ ಕುಟುಂಬಗಳಿಗೆ ಶಾಶ್ವತವಾಗಿ ವಸತಿ ಸೌಲಭ್ಯ ಒದಗಿಸುವುದಕ್ಕೆ ಆದ್ಯತೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ. 94 ಸಿ, 94 ಸಿಸಿ, ನಮೂನೆ 57ರಡಿ ಅರ್ಜಿ ಸಲ್ಲಿಸಿರುವ ಬಡವರು, ರೈತರಿಗೂ ಭೂ ಒಡೆತನ ಸಿಗಲಿದೆ. ಕರಾವಳಿ, ಮಲೆನಾಡು ಭಾಗದ ಸಮಸ್ಯೆಯೂ ನಿವಾರಣೆಯಾಗಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next