Advertisement

ಭೂತಾಯಿ ಮಗ ರೈತ ಕಷ್ಟದಲ್ಲಿರಬಾರದು; ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ

06:27 PM Dec 24, 2022 | Team Udayavani |

ಬೆಳಗಾವಿ: ಭಾರತದ ಭವಿಷ್ಯ ಪ್ರಮುಖವಾಗಿ ರೈತಾಪಿ ವರ್ಗದ ಮೇಲಿದೆ. ಚಿನ್ನವಿಲ್ಲದಿದ್ದರೆ ಬದುಕಬಹುದು, ಆದರೆ ಅನ್ನವಿಲ್ಲದೆ ಒಂದು ಕ್ಷಣ ಬದುಕೋದು ಕಷ್ಟ. ಜಗದ ಜನರಿಗೆಲ್ಲ ಅನ್ನ ನೀಡುವ ಭೂಮಿ ತಾಯಿಯ ಚೊಚ್ಚಿಲ ಮಗ ಕಷ್ಟದಲ್ಲಿರಬಾರದು ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಬೆಳಗಾವಿ ತಾಲೂಕಿನ ಗದ್ದಿಕರವಿನ ಕೊಪ್ಪ ಕ್ರಾಸ್‌( ಚಿಕ್ಕ ಬಾಗೇವಾಡಿ) ಹೊರವಲಯದಲ್ಲಿ ಕಣಬರಗಿಯ ಗುರು ರೋಡ್‌ ಲೈನ್ಸ್‌ ಸಂಸ್ಥಾಪಕ ಗುರುದೇವ ಪಾಟೀಲ ಅವರು ನಿರ್ಮಿಸುತ್ತಿರುವ ನೂತನ ಶ್ರೀ ಬಿ. ಎಸ್‌. ಯಡಿಯೂರಪ್ಪ ಕಲ್ಯಾಣ ಮಂಟಪದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಒಬ್ಬ ರೈತನ ಮಗನಾಗಿ ಹುಟ್ಟಿ ಕೃಷಿಯೊಂದಿಗೆ ಸಮಾಜ ಸೇವೆ  ಮಾಡುತ್ತಲೇ ರಾಜಕಾರಣಕ್ಕೆ ಬಂದರೆ ರೈತ ಸ್ನೇಹಿ ಕಾರ್ಯಕ್ರಮಗಳನ್ನು ರೂಪಿಸಬಹುದು. ಇದೇ
ಕಾರಣಕ್ಕಾಗಿಯೇ ರೈತರಿಗಾಗಿ ಕೃಷಿ ಬಜೆಟ್‌ ಪ್ರತ್ಯೇಕವಾಗಿ ಮಂಡಿಸಿ ಅವರ ನೋವುಗಳಿಗೆ ಸ್ಪಂದಿಸಿದ್ದೇನೆ ಎಂದರು.

ಭವಿಷ್ಯದಲ್ಲಿ ಕೃಷಿಕರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಸರ್ಕಾರದ ಎಲ್ಲ ಯೋಜನೆಗಳು ತಲುಪಿದರೆ ತಮ್ಮ ಬದುಕು ಸಾರ್ಥಕವಾಗುತ್ತದೆ. ಗ್ರಾಮೀಣ ಭಾಗದ ರೈತರು ಹಾಗೂ ಬಡ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಗುರುದೇವ ಪಾಟೀಲ ಕುಟುಂಬ ನನ್ನ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಬಿ. ಎಸ್‌. ಯಡಿಯೂರಪ್ಪ ಕಲ್ಯಾಣ ಮಂಟಪ ಸ್ವಂತ ಖರ್ಚಿನಲ್ಲಿ ನಿರ್ಮಿಸುತ್ತಿದ್ದು, ಪ್ರತಿವರ್ಷ 21 ಜೋಡಿ ಸಾಮೂಹಿಕ ವಿವಾಹ ಮಾಡಬೇಕೆನ್ನುವ ಅವರ ಕನಸು ನನಸಾಗಲಿ. ಅದರೊಂದಿಗೆ ಗ್ರಾಮೀಣ ಯುವಕರಿಗೆ ಸ್ವ ಉದ್ಯೋಗದ ಕಾರ್ಯಾಗಾರ ಏರ್ಪಡಿಸುವ ಮೂಲಕ ಸ್ವಾವಲಂಬಿ ಭಾರತ ನಿರ್ಮಿಸಬೇಕೆನ್ನುವ ಅವರ
ಕಾರ್ಯ ಯಶಸ್ವಿಯಾಗಲಿ. ಇಂಥ ಕಾರ್ಯ ನನ್ನ ಹೆಸರಿನಲ್ಲಿ ರೂಪಗೊಳ್ಳುತ್ತಿರುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಭಾವುಕರಾದರು.

ಗುರು ರೋಡ್‌ಲೈನ್ಸ್‌ ಸಂಸ್ಥಾಪಕ ಗುರುದೇವ ಪಾಟೀಲ ಮಾತನಾಡಿ, ತಾವು ನಡೆದು ಬಂದ ಕಷ್ಟದ ದಾರಿ ವಿವರಿಸಿ ಯಡಿಯೂರಪ್ಪ ಅವರ ಮೇಲಿನ
ಅಭಿಮಾನದಿಂದ ಇಪ್ಪತ್ತೆರಡು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಭೇಟಿಯಾಗಲು ಹೋದಾಗ ಜನ ಅವಕಾಶ ಕೊಡಲಿಲ್ಲ. ಅದನ್ನೇ ಸವಾಲಾಗಿ ಸ್ವೀಕರಿಸಿ ಯಡಿಯೂರಪ್ಪ ಅವರನ್ನೇ ಆಹ್ವಾನಿಸಿ ಅವರ ಹೆಸರಿನಲ್ಲಿ ಸಮಾಜ ಕಾರ್ಯ ಮಾಡಬೇಕೆಂದು ನಿರ್ಧರಿಸಿದ್ದೆ. ಅದು ಇಂದು ನನಸಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಮಹಾಂತೇಶ ದೊಡಗೌಡರ, ತಮ್ಮ ಇಡೀ ಕ್ಷೇತ್ರ ರೈತಾಪಿ ಕುಟುಂಬಗಳಿಂದ ಕೂಡಿದ್ದು ಅವರ ಆಶೀರ್ವಾದವೇ ನನ್ನ ಶಕ್ತಿಯಾಗಿದೆ.ಅಂಥ ಜನರ ಋಣ ತೀರಿಸಲು ನಿರಂತರ ಶ್ರಮಿಸುವುದಾಗಿ ಹೇಳಿದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಕಾರಂಜಿ ಮಠದ ಗುರುಸಿದ್ಧ ಸ್ವಾಮಿಗಳು ಯಡಿಯೂರಪ್ಪನವರು ರೈತ ಚಳವಳಿಯಿಂದ ಬೆಳೆದು ಮುಖ್ಯಮಂತ್ರಿಯಾದವರು. ಸದಾ ಸಮಾಜಮುಖೀ ಚಿಂತನೆ ಹೊಂದಿರುವ ಅವರು ದೀನ, ದಲಿತರ, ಬಡ ಕಾರ್ಮಿಕರ ನೋವುಗಳಿಗೆ ಮಿಡಿದ, ಸರ್ವಧರ್ಮದವರನ್ನು ಒಟ್ಟಿಗೆ ಕರೆದೊಯ್ಯಬಲ್ಲ ನಾಯಕರಾಗಿದ್ದಾರೆ ಎಂದರು.

Advertisement

ಮುರಗೋಡ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮಿಗಳು, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಬೈಲಹೊಂಗಲ ಮೂರುಸಾವಿರ ಮಠದ ನೀಲಕಂಠ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಕಾಂಚನ ಗುರುದೇವ ಪಾಟೀಲ, ಕಸ್ತೂರಿ ನಿಂಗನಗೌಡ ಪಾಟೀಲ, ಶಂಕರಗೌಡ ಪಾಟೀಲ, ಜಗದೀಶ ಮೆಟಗುಡ, ಕಾಡಾ ಅಧ್ಯಕ್ಷ ವಿಶ್ವನಾಥ ಪಾಟೀಲ, ವಿರೂಪಾಕ್ಷಪ್ಪ ಯಮಕನಮರಡಿ, ಶಿವಲಿಂಗಯ್ಯ ಗಣಾಚಾರಿ, ಅರುಣ ಜೋರಾಪುರೆ ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುಕ್ತಾರ ಪಠಾಣ ಸ್ವಾಗತಿಸಿದರು. ರಾಘವೇಂದ್ರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ಅಡಿವೆಪ್ಪ ಇಟಗಿ ಕಾರ್ಯಕ್ರಮ ನಿರ್ವಹಿಸಿದರು. ಸುರೇಶ ಯಾದವ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next