ಹುಬ್ಬಳ್ಳಿ: ರಾಜ್ಯದ ಹಲವು ಕೆರೆ-ಕಟ್ಟೆಗಳನ್ನು ಭೂ ಮಾಫಿಯಾಕ್ಕೆ ನೀಡುವ ಹುನ್ನಾರ ನಡೆದಿದ್ದು ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಸಿಎಂ ಸಿದ್ದರಾಮಯ್ಯ ಅವರು ತಿಮ್ಮಪ್ಪ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆ ಮುಖ್ಯಸ್ಥ ಎಸ್. ಆರ್. ಹಿರೇಮಠ ಒತ್ತಾಯಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಂದಾಯ ದಾಖಲೆಗಳಲ್ಲಿ ಬರುವ ಹಲವು ಕೆರೆ-ಕಟ್ಟೆ, ಹಳ್ಳಗಳು ತಮ್ಮ ಗುಣಲಕ್ಷಣಗಳನ್ನು ಕಳೆದುಕೊಂಡಿವೆ. ಮೂಲ ಸ್ಥಿತಿಗೆ ತರಲಾಗದ ಸ್ಥಿತಿಯಲ್ಲಿವೆ. ಆ ಪ್ರದೇಶಗಳನ್ನು ಸಾರ್ವಜನಿಕ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ದಿಸೆಯಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆ 1964ರ 68ನೇ ಕಲಂ ಅಡಿಯಲ್ಲಿ ಪ್ರಕ್ರಿಯೆ ನಡೆಸಿ ಸಾರ್ವಜನಿಕ ಹಕ್ಕಿನಿಂದ ವಿಹಿತಗೊಳಿಸಲು ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಕೂಡಲೇ ರಾಜೀನಾಮೆ ನಿಡಬೇಕೆಂದು ಆಗ್ರಹಿಸಿದರು.
ಕೆರೆ-ಹಳ್ಳಗಳನ್ನು ರಕ್ಷಿಸುವ ದಿಸೆಯಲ್ಲಿ ಡಿನೋಟಿಫಿಕೇಶನ್ ನಿರ್ಧಾರಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲರು ವಿರೋಧಿಸಿರುವುದು ಸ್ವಾಗತಾರ್ಹ. ನೂರಾರು ವರ್ಷಗಳಿಂದ ಉಳಿಸಿಕೊಂಡು ಬಂದ ಕೆರೆ- ಕಟ್ಟೆ ಸೇರಿದಂತೆ ಜಲಸಂಪನ್ಮೂಲಗಳನ್ನು ಪರಭಾರೆ ಮಾಡುವುದು ಕಾನೂನಿನ ವಿರುದ್ಧವಾಗಿದೆ ಎಂದರು.
ಕಾಗೋಡು ಹೋರಾಟದ ಹಿನ್ನೆಲೆಯಿಂದ ಬಂದ ಸಚಿವ ತಿಮ್ಮಪ್ಪ ಅವರು ಕಲಂ ತಿದ್ದುಪಡಿಗೆ ಅವಕಾಶ ನೀಡಬಾರದು. ಭೂ ಮಾಫಿಯಾ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಪ್ರಜ್ಞಾವಂತರು ಹೋರಾಟಕ್ಕೆ ಅಣಿಯಾಗಬೇಕು ಎಂದರು.
ರೈತ ವಿರೋಧಿ ಕೇಂದ್ರ ಸರ್ಕಾರ: ಲೋಕಸಭಾ ಚುನಾವಣೆಗೆ ಮುನ್ನ ನೀಡಿದ ಭರವಸೆಗಳಿಂದ ಬಿಜೆಪಿ ವಿಮುಖವಾಗಿದೆ. ರೈತರ ಒಳಿತಿಗೆ ಹಾಗೂ ಗಾಮಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಪಕ್ಷ ಹೇಳಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರಿಗಾಗಿ ಯಾವುದೇ ಜನಪರ ಕಾರ್ಯಕ್ರಮ ರೂಪಿಸಿಲ್ಲ ಎಂದರು.
ಸಮ್ಮೇಳನ: ದಾವಣಗೆರೆಯಲ್ಲಿ ಸೆ.26 ಹಾಗೂ 27ರಂದು ಜನಸಂಗ್ರಾಮ ಪರಿಷತ್ 3ನೇ ಸಮ್ಮೇಳನ ನಡೆಯಲಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ ಸೇರಿದಂತೆ ಸಾಹಿತಿಗಳು, ನ್ಯಾಯವಾದಿಗಳು ಪಾಲ್ಗೊಂಡು ವಿಚಾರ ಮಂಡಿಸಲಿದ್ದಾರೆ. ಕೃಷಿ ಸಂಕಟ ಹಾಗೂ ಶಾಶ್ವತ ಪರಿಹಾರ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದರು.