ಮುಂಬಯಿ, ಆ. 2: ವಡಾಲಾ-ಸಿಎಸ್‌ಎಂಟಿ ಮೆಟ್ರೋ -11 ಕಾರಿಡಾರ್ ಯೋಜನೆಯ ಭಾಗವಾಗಿರುವ ಶಿವ್ಡಿ-ಸಿಎಸ್‌ಎಂಟಿ ಭೂಗತ ಮೆಟ್ರೋದ ವೆಚ್ಚವನ್ನು ಭರಿಸಲು ಮುಂಬಯಿ ಪೋರ್ಟ್ ಟ್ರಸ್ಟ್ (ಎಂಬಿಪಿಟಿ) ಕಡೆಗೂ ಒಪ್ಪಿಕೊಂಡಿದೆ. ಆದರೆ, ಎಂಬಿಪಿಟಿ ಈ ವೆಚ್ಚದ ಬದಲಿಗೆ ಹಣವನ್ನು ನೀಡುವ ಬದಲು ಭೂಮಿಯನ್ನು ನೀಡಲಿದೆ ಎಂದು ತಿಳಿಸಿದೆ.
ಭೂಗತ ಮೆಟ್ರೋ ಯೋಜನೆಯ ವೆಚ್ಚವನ್ನು ಪೋರ್ಟ್ ಟ್ರಸ್ಟ್ ತುಂಬಿಸಿಕೊಡಬೇಕೆಂಬ ಎಂಎಂಆರ್‌ಡಿಎ ಬೇಡಿಕೆಯ ಬಗ್ಗೆ ಮುಂಬಯಿ ಪೋರ್ಟ್ ಟ್ರಸ್ಟ್ ಹಲವಾರು ದಿನಗಳವರೆಗೆ ಗೊಂದಲಕ್ಕೊಳಗಾಗಿತ್ತು. ಏಕೆಂದರೆ ಪೋರ್ಟ್ ಟ್ರಸ್ಟ್‌ಗೆ ತನ್ನ ಸ್ವಂತ ಯೋಜನೆಗಳಿಗೂ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಇಂಥದರಲ್ಲಿ ಎಂಎಂಆರ್‌ಡಿಎಯ ಬೇಡಿಕೆಯನ್ನು ಪೂರೈಸಲು ಮುಂಬಯಿ ಪೋರ್ಟ್ ಟ್ರಸ್ಟ್ ಉತ್ತಮ ಪರಿಹಾರವನ್ನು ಕಂಡುಕೊಂಡಿದೆ. ಭೂಮಿಗತ ಮೆಟ್ರೋದ ವೆಚ್ಚದ ಬದಲಿಗೆ ಎಂಎಂಆರ್‌ಡಿಎಗೆ ಅದೇ ಬೆಲೆಯ ಭೂಮಿಯನ್ನು ನೀಡಲು ಪೋರ್ಟ್ ಟ್ರಸ್ಟ್ ಸಿದ್ಧವಾಗಿದೆ. ಇದರೊಂದಿಗೆ ಮೆಟ್ರೋ -11 ಯೋಜನೆಗೆ ಉಂಟಾಗಲಿರುವ ಹಣದ ಅಡೆತಡೆಯು ಈಗ ಕೊನೆಗೊಂಡಂತಾಗಿದೆ.
ಎಂಬಿಪಿಟಿ ಈ ಕಾರಿಡಾರ್ ಭೂಗತವಾಗಿ ಸಾಗಬೇಕೆಂದು ಬಯಸಿದ್ದರಿಂದಾಗಿ ಹಾಗೂ ಎಂಎಂಆರ್‌ಡಿಎಯು ಅದರ ಹೆಚ್ಚುವರಿ ವೆಚ್ಚವನ್ನು ಎಂಬಿಪಿಟಿಯಿಂದ ಕೇಳಿರುವ ಕಾರಣದಿಂದಾಗಿ ಈ ಯೋಜನೆಯು ಸ್ಥಗಿತಗೊಂಡಿತ್ತು. ಆದರೆ, ಇದೀಗ ಎರಡೂ ಏಜೆನ್ಸಿಗಳು ಒಂದು ತಾತ್ವಿಕ ಒಪ್ಪಂದಕ್ಕೆ ತಲುಪಿವೆ. ಮೆಟ್ರೋ-11 ಕಾರಿಡಾರ್ ಅನ್ನು ಭಾಗಶಃ ಭೂಗತ ಮಾಡಲು ಎಂಎಂಆರ್‌ಡಿಎ ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಅದಕ್ಕೆ ಹೆಚ್ಚುವರಿ ಭೂಮಿಯನ್ನು ಒದಗಿಸುವ ಮೂಲಕ ವೆಚ್ಚ ವ್ಯತ್ಯಾಸವನ್ನು ಸರಿದೂಗಿಸಲಾಗುವುದು. ಇದು (ಭೂಮಿ) ಬಹುತೇಕ ನಿಲ್ದಾಣಗಳಿಗೆ ಹತ್ತಿರದಲ್ಲಿರಲಿದೆ ಎಂದು ಎಂಬಿಪಿಟಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯಕ್ಕೆ ತಾತ್ವಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಕೇಂದ್ರ ಸರಕಾರದಿಂದ ಅನುಮೋದನೆಯ ಅಗತ್ಯವಿದೆ ಎಂದು ಎಂಬಿಪಿಟಿಯ ಅಧ್ಯಕ್ಷ ಸಂಜಯ್ ಭಾಟಿಯಾ ಹೇಳಿದ್ದಾರೆ.
ಮೆಟ್ರೋ -11 ನಗರದಲ್ಲಿನ 3ನೇ ಭಾಗಶಃ ಭೂಮಿಗತ ಕಾರಿಡಾರ್ ಆಗಿರುತ್ತದೆ. ಅದೇ, ಮೆಟ್ರೋ-7 ಎ (ಅಂಧೇರಿ (ಪೂರ್ವ) -ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಮತ್ತು ಮೆಟ್ರೋ -8 (ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವಿಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)ನಗರದ ಇತರ ಎರಡು ಭಾಗತಃ ಮೆಟ್ರೋ ಮಾರ್ಗಗಳಾಗಿವೆ. 2026ರ ವೇಳೆಗೆ ಈ ಯೋಜನೆ ಪೂರ್ಣಗೊಂಡ ಅನಂತರ ಅಂದಾಜು 11 ಲಕ್ಷ 60 ಸಾವಿರ ಪ್ರಯಾಣಿಕರು ಈ ಮಾರ್ಗದಲ್ಲಿ ಪ್ರಯಾಣಿಸುವ ನಿರೀಕ್ಷೆಯಿದೆ. ಮೆಟ್ರೋ-4ರ ಕೆಲಸ ಪ್ರಾರಂಭವಾಗುವುದರೊಂದಿಗೆ ರಾಜ್ಯ ಕ್ಯಾಬಿನೆಟ್ ಮೆಟ್ರೋ -11ಗೆ ಕೂಡ ಇತ್ತೀಚೆಗೆ ಅನುಮೋದನೆ ನೀಡಿದೆ.