Advertisement

ವಿಪ್ರ ಶಿಕ್ಷಣ ಸಂಸ್ಥೆಗೆ ಭೂಮಿ, ಅನುದಾನ

11:50 AM Feb 25, 2018 | Team Udayavani |

ಬೆಂಗಳೂರು: ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಶೈಕ್ಷಣಿಕ ಸಂಸ್ಥೆ ಸ್ಥಾಪನೆಗೆ 10 ಎಕರೆ ಭೂಮಿ, ಆರ್ಥಿಕ ನೆರವು ಕೋರಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ನೆರವಿಗೆ ಪ್ರಯತ್ನಿಸುವುದಾಗಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

Advertisement

ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ನಗರದ ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಬೆಂಗಳೂರು ಮಹಾನಗರ ವಿಪ್ರರ ಬೃಹತ್‌ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಾಸಭಾದಿಂದ ಶಿಕ್ಷಣ ಸಂಸ್ಥೆ ತೆರೆದರೆ ಅಲ್ಲಿ ಬ್ರಾಹ್ಮಣ ಸಮುದಾಯದವರಷ್ಟೇ ಹೊಗುವುದಿಲ್ಲ. ಸಮಾಜದ ಎಲ್ಲ ವರ್ಗದ ಮಕ್ಕಳೂ ಶಿಕ್ಷಣ ಪಡೆಯಲಿದ್ದಾರೆ. ಹಾಗಾಗಿ ಸಹಾಯ ಮಾಡಲು ಖಂಡಿತ ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಬುದ್ಧಿವಂತಿಕೆಗೆ ಇನ್ನೊಂದು ಹೆಸರು ಬ್ರಾಹ್ಮಣರು ಎನ್ನಲಾಗುತ್ತದೆ. ಸಮಾಜ, ದೇಶಕ್ಕೆ ವಿಪ್ರ ಸಮುದಾಯದ ಕೊಡುಗೆ ಮಹತ್ವದ್ದಾಗಿದೆ. ಹಿಂದುಳಿದ ವರ್ಗದ ಮಕ್ಕಳ ಶಿಕ್ಷಣಕ್ಕೂ ವಿಪ್ರರು ನೆರವಾಗಿದ್ದಾರೆ. ಧರ್ಮಗುರುಗಳು, ಪುರೋಹಿತಶಾಹಿಗಳು ಸಮಾಜ ಸನ್ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡುತ್ತಿದ್ದಾರೆ. ಬ್ರಾಹ್ಮಣರ ಅಭಿವೃದ್ಧಿಗೆ ನಿಗಮ ಸ್ಥಾಪನೆಗೆ ಮನವಿ ಮಾಡುವುದರಲ್ಲಿ ತಪ್ಪಿಲ್ಲ. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಮೀಸಲಾತಿ ಸಿಗಬೇಕು ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದರು.

ವಿಪ್ರ ನಿಧಿ ಭರವಸೆ: ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಜೆಡಿಎಸ್‌ ಅಧಿಕಾರಕ್ಕೆ ಬಂದರೆ ವಿಪ್ರ ಸಮುದಾಯದ ಅಭಿವೃದ್ಧಿಗೆ “ವಿಪ್ರ ನಿಧಿ’ ಸ್ಥಾಪಿಸಲಾಗುವುದು. ಮಹಾಸಭಾ 25 ಕೋಟಿ ರೂ. ಅನುದಾನ ಕೋರಿದ್ದು, 100 ಕೋಟಿ ರೂ. ನೀಡಲೂ ತೊಂದರೆಯಿಲ್ಲ. ಸಮಾಜದ ಎಲ್ಲ ವರ್ಗ, ಸಮುದಾಯದವರಿಗೆ ಸ್ಪಂದಿಸುವುದು ಸರ್ಕಾರದ ಕರ್ತವ್ಯ. ಅದರಂತೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. 

ಬ್ರಾಹ್ಮಣ ಸಮುದಾಯವು ಈ ಹಿಂದೆ ಯಾವ ಸರ್ಕಾರವೂ ನೀಡದ ಕೊಡುಗೆಯನ್ನು ಸಮಾಜಕ್ಕೆ ನೀಡಿದೆ. ನಾಡಿನ ನೀರಾವರಿಗೆ ಸರ್‌ ಎಂ.ವಿಶ್ವೇಶ್ವರಯ್ಯ ಕೊಡುಗೆ ನೀಡಿದ್ದರು. ಇನ್ಫೋಸಿಸ್‌ನ ನಾರಾಯಣಮೂರ್ತಿ, ಸುಧಾಮೂರ್ತಿ ಅವರು ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿ ಆ ಕುಟುಂಬಗಳಿಗೆ ನೆರವಾಗಿದ್ದಾರೆ. ಬ್ರಾಹ್ಮಣರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ನಿಗಮ ಸ್ಥಾಪನೆ ಬೇಡಿಕೆ ನ್ಯಾಯಯುತವಾಗಿದೆ. ಆರು ತಿಂಗಳ ಹಿಂದೆ ರಾಜ್ಯ ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರ ಪ್ರಸ್ತಾಪಿಸಿ ನಂತರ ಕೈಬಿಟ್ಟಿತ್ತು ಎಂದು ಹೇಳಿದರು.

Advertisement

ಕಂಚಿ ಶ್ರೀಗಳ ಕೃಪೆ: “ನನ್ನ ತಾಯಿ ಪುನರ್ಜನ್ಮ ಪಡೆದಿದ್ದಾರೆ. ಅವರ ಮೇಲೆ ಆ್ಯಸಿಡ್‌ ದಾಳಿಯಾದಾಗ ವೈದ್ಯರು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದಾಗ ತಂದೆಯವರು ಕಣ್ಣೀರಿಡುತ್ತಿದ್ದರು. ಆಗ ಕಂಚಿ ಶ್ರೀಗಳು ವಿಶೇಷ ಪೂಜೆ ನಡೆಸಿ ಹಣ್ಣು ನೀಡಿ ರಸ ಕುಡಿಸುವಂತೆ ಸೂಚಿಸಿದರು. ಬಳಿಕ ತಾಯಿ ಪುನರ್ಜನ್ಮ ಪಡೆದರು. ನನಗೆ ಬ್ರಾಹ್ಮಣ ಸಮುದಾಯದವರ ಸಮಸ್ಯೆಗಳ ಅರಿವಿದೆ. ಹೀಗಾಗಿ ಅಧಿಕಾರಕ್ಕೆ ಬಂದರೆ ಸಮುದಾಯದ ಸಮಸ್ಯೆಗಳಿಗೆ ಖಂಡಿತ ಸ್ಪಂದಿಸುತ್ತೇನೆ,’ ಎಂದು ತಿಳಿಸಿದರು.

ಮಂತ್ರಾಲಯ ರಾಘವೇಂದ್ರ ಮಠದ ಸುಬುಧೇಂದ್ರತೀರ್ಥ ಸ್ವಾಮೀಜಿ ಮಾತನಾಡಿ, ಬ್ರಾಹ್ಮಣ ಸಮುದಾಯ ಅನೇಕ ಸಮಸ್ಯೆ ಎದುರಿಸುತ್ತಿದೆ. ಸರ್ಕಾರ ಅನ್ಯ ಸಮುದಾಯದ ಜನರ ಕಲ್ಯಾಣಕ್ಕೆ ನಾನಾ ಯೋಜನೆ ರೂಪಿಸಿರುವಂತೆ ಬ್ರಾಹ್ಮಣ ಸಮುದಾಯದವರಿಗೂ ಸೌಲಭ್ಯ ಕಲ್ಪಿಸಲು ಮುಂದಾಗಬೇಕು. ಸಮುದಾಯ ವಿಘಟಿತವಾಗದೆ ಸಂಘಟಿತರಾಗಬೇಕು. ಹತ್ತಾರು ಸಂಪ್ರದಾಯ, ಆಚರಣೆಯಿದ್ದರೂ ಒಗ್ಗೂಡಿ ದನಿ ಎತ್ತಬೇಕು.

ಅದು ರಾಜ್ಯಗಳ ವಿಧಾನಸಭೆ ಮಾತ್ರವಲ್ಲ, ಪಾರ್ಲಿಮೆಂಟ್‌ಗೂ ಕೇಳಬೇಕು ಎಂದು ಕರೆ ನೀಡಿದರು. ಕೆಲ ಅನ್ಯ ಸಮಾಜದವರು ಬ್ರಾಹ್ಮಣ ಸಮುದಾಯದ ಬಗ್ಗೆ ಕೆಳಮಟ್ಟದ ಭಾಷೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಕಂಡುಬಂದಿದೆ. ಬ್ರಾಹ್ಮಣ ಸಮುದಾಯ ಇತರೆ ಸಮುದಾಯವನ್ನು ತುಳಿಯುವುದಿಲ್ಲ, ತೆಗಳುವುದಿಲ್ಲ. ಸಮಾಜದಲ್ಲಿನ ಎಲ್ಲ ಸಮುದಾಯದವರು ಪರಸ್ಪರ ಪ್ರೀತಿ, ಸೌಜನ್ಯ, ಸಹಕಾರದಿಂದ ಬಾಳಬೇಕು ಹೇಳಿದರು.

ಕಣ್ವಮಠ ಮೂಲ ಮಹಾಸಂಸ್ಥಾನದ (ವೀರಘಟ್ಟ) 1008 ಶ್ರೀ ವಿದ್ಯಾವಾರಿಧಿತೀರ್ಥ ಸ್ವಾಮೀಜಿ ಮಾತನಾಡಿ, ಮತ, ಮಠ ಭೇದ ಹೊರತಾಗಿ ಎಲ್ಲರೂ ಸಂಘಟಿತರಾಗಬೇಕು. ಸ್ವಧರ್ಮ ನಿಷ್ಠೆ ಜತೆಗೆ ಒಳಪಂಗಡ ಸಹಿಷ್ಣುತೆ ಇರಬೇಕು. ನಿಜವಾದ ಜಾತ್ಯಾತೀತರೆಂದರೆ ಬ್ರಾಹ್ಮಣರು. ಎಲ್ಲ ಜಾತಿಯ ಬಡವರಿಗೂ ಮೀಸಲಾತಿ ಕಲ್ಪಿಸಲು ಒತ್ತಾಯಿಸಿದರೆ ಅವರು ನಿಜವಾದ ಜಾತ್ಯಾತೀತರು ಎಂದು ಹೇಳಿದರು.

ಶಾಸಕರಾದ ಆರ್‌.ವಿ.ದೇವರಾಜ್‌, ಎಲ್‌.ಎ.ರವಿಸುಬ್ರಹ್ಮಣ್ಯ, ಕೆ.ಗೋಪಾಲಯ್ಯ, ಮಾಜಿ ಉಪಮೇಯರ್‌ ಹೇಮಲತಾ ಗೋಪಾಲಯ್ಯ, ಹಿರಿಯ ನಟ ಶ್ರೀನಾಥ್‌, ಪಾಲಿಕೆ ಸದಸ್ಯ ರಮೇಶ್‌, ಜೆಡಿಎಸ್‌ ಮುಖಂಡ ಬಾಗೇಗೌಡ, ಎನ್‌ಐಟಿ ನಿರ್ದೇಶಕರಾದ ಡಾ.ಗೀತಾ ಬಾಲಿ, ಮಹಾಸಭಾ ಅಧ್ಯಕ್ಷ ಕೆ.ಎನ್‌.ವೆಂಕಟನಾರಾಯಣ, ಪ್ರಚಾರ ಸಮಿತಿಯ ಎಚ್‌.ಸಿ.ಕೃಷ್ಣ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next