Advertisement

ಭೂಮಾಲಕರಿಗೆ ನಿವೇಶನದಲ್ಲಿ ಪಾಲು

12:41 PM Aug 04, 2018 | Harsha Rao |

ಮಂಗಳೂರು: ಜಿಲ್ಲೆಯ ವಸತಿ ಯೋಜನೆಗಳಿಗೆ ನಿವೇಶನ ಒದಗಿಸಲು ಮೊದಲ ಬಾರಿಗೆ ನಿವೇಶನಗಳ ಭೂಬ್ಯಾಂಕ್‌ ಸೃಷ್ಟಿಸಲು ಕರ್ನಾಟಕ ಗೃಹ ಮಂಡಳಿ ತೀರ್ಮಾನಿಸಿದೆ. 

Advertisement

ಮಂಡಳಿಯು, ಮಹಾನಗರ ಪಾಲಿಕೆ ಹಾಗೂ ಇತರ ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಆಯಾ ಭೂ ಮಾಲಕರಿಗೆ ನಗದಿನ ಬದಲು, ತಾನು ಅಭಿವೃದ್ಧಿಪಡಿಸಿದ ಭೂಮಿಯಲ್ಲಿ ಶೇ.40ನ್ನು ನೀಡಿ ಉಳಿದದ್ದನ್ನು ತಾನೇ ನಿರ್ವಹಿಸಲಿದೆ. ಇತರ ಪ್ರದೇಶಗಳಲ್ಲಿ 65:35 ಅನುಪಾತ ದಲ್ಲಿರುತ್ತದೆ. 

ನಗದು ಪರಿಹಾರ ನೀಡುವ ಹಂತದಲ್ಲಿ ಕೆಲವು ವ್ಯತ್ಯಾಸ ಹಾಗೂ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಈ ಮಾದರಿಯನ್ನು ಅನುಸರಿಸಲಾಗುತ್ತಿದೆ. ಆ ಬಳಿಕ ಅಗತ್ಯವಿದ್ದಲ್ಲಿ ಆ ನಿವೇಶನಗಳ ಮಾರಾಟವನ್ನೂ ಮಂಡಳಿಯೇ ಕೈಗೊಳ್ಳಲಿದೆ. ವಿಶೇಷ ಪ್ರಕರಣವಿದ್ದರೆ, ಆರ್ಥಿಕ ಇಲಾಖೆ, ವಸತಿ ಇಲಾಖೆ ಹಾಗೂ ಸಚಿವ ಸಂಪುಟ ಅನುಮತಿ ಪಡೆದು ನಗದು ಪಾವತಿಸಲಿದೆ. 

ಬೆಂಗಳೂರು ವ್ಯಾಪ್ತಿಯಲ್ಲಿ ಈ ಅನುಪಾತ 50:50 ಇದೆ. ಮೈಸೂರು ಸಹಿತ ಕೆಲವು ಜಿಲ್ಲೆಗಳಲ್ಲಿ ಇದೇ ಮಾದರಿಯಡಿ ಮಂಡಳಿಯು ಭೂಮಿ ಸಂಗ್ರಹಿಸಿತ್ತು.

ಖರೀದಿಸಿ ಅಭಿವೃದ್ಧಿ
ಗೃಹ ಮಂಡಳಿ ನಿಗದಿತ ಜಮೀನು ದೊರೆತ ಬಳಿಕ ಬಡಾವಣೆಯನ್ನಾಗಿಸಿ, ಪರವಾನಿಗೆ ಪಡೆಯುತ್ತದೆ. ವಿದ್ಯುತ್‌, ಚರಂಡಿ, ಕುಡಿಯುವ ನೀರು ಮೂಲ ಸೌಕರ್ಯ ಒದಗಿಸುತ್ತದೆ. 

Advertisement

ನಿಯಮಗಳು
ಪ್ರಸ್ತಾವಿತ ಜಮೀನು ರಾ./ ರಾ. ಹೆದ್ದಾರಿ/ ಜಿಲ್ಲಾ ಮುಖ್ಯ ರಸ್ತೆಗಳಿಗೆ ಹೊಂದಿಕೊಂಡಿರಬೇಕು. ನಗರ ಹಾಗೂ ಪಟ್ಟಣ ಪ್ರದೇಶದ ವ್ಯಾಪ್ತಿಯಲ್ಲಿ ಕನಿಷ್ಠ 2ರಿಂದ 5 ಕಿ.ಮೀ. ಅಂತರದಲ್ಲಿರಬೇಕು. 

ಜಮೀನು ಆದಷ್ಟು ಸಮತಟ್ಟಾಗಿದ್ದು ರಾಜಕಾಲುವೆ/ಮುಖ್ಯ ನಾಲಾ ಅಥವಾ ಕೆರೆಗಳಿಂದ ಹೊರತಾಗಿರ ಬೇಕು. ಪಿ.ಟಿ.ಸಿ.ಎಲ್‌. ಕಾಯ್ದೆಯಿಂದ ಹೊರತಾಗಿದ್ದು, ಜಮೀನು ಸಮಗ್ರವಾಗಿ ಒಂದೇ ಬ್ಲಾಕ್‌ನಲ್ಲಿರಬೇಕು. ವಸತಿ ಯೋಜನೆಗೆ ಸೂಕ್ತವಾಗಿರಬೇಕು.

ಈ ಜಮೀನು ನಗರ – ಪಟ್ಟಣಕ್ಕೆ ಅನುಮೋದಿಸಿರುವ ಮಹಾ ಯೋಜನೆಯಲ್ಲಿ ವಸತಿ ವಲಯದಲ್ಲಿರಬೇಕು. ಋಣಭಾರ ರಹಿತವಾಗಿರಬೇಕು. ಭೂಮಾಲಕರು ಪ್ರತೀ ಸ್ಥಳ/ಪಟ್ಟಣ/ನಗರ ಪ್ರದೇಶದಲ್ಲಿ ಕನಿಷ್ಠ 15ರಿಂದ 20 ಎಕ್ರೆ ಜಮೀನು ಹೊಂದಿರಬೇಕಿದೆ.

ಖರೀದಿ ಪ್ರಕ್ರಿಯೆಗೆ ಚಾಲನೆ
ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಜಯ್‌ ಕುಮಾರ್‌ “ಉದಯವಾಣಿ’ ಜತೆ ಮಾತನಾಡಿ, ರಾಜ್ಯಾದ್ಯಂತ ಈ ಯೋಜನೆ ಜಾರಿಯಲ್ಲಿದೆ. ಜಿಲ್ಲೆಯ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಮೂಡಬಿದಿರೆ ಹಾಗೂ ಕಡಬ ತಾಲೂಕು ಹಾಗೂ ಪಟ್ಟಣ ಪ್ರದೇಶದಲ್ಲಿ ವಸತಿಗೆ ಸೂಕ್ತ ಜಮೀನು ಸಂಗ್ರಹಿಸಲು ಮಂಡಳಿ ಮುಂದಾಗಿದೆ ಎಂದಿದ್ದಾರೆ. 

ಜಮೀನು 60:40 ಅನುಷ್ಠಾನ
ಮನಪಾ ಹಾಗೂ ಇತರ ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಜಮೀನಿನ ಮಾಲಕರಿಗೆ ಅಭಿವೃದ್ಧಿಪಡಿಸಿದ ನಿವೇಶನ ನೀಡುವುದರಿಂದ ಅವರಿಗೂ ಅನುಕೂಲವಾಗಲಿದೆ. ನೀರು, ವಿದ್ಯುತ್‌, ಚರಂಡಿ ಸಹಿತ ಎಲ್ಲ ಸೌಲಭ್ಯವನ್ನು ಮಂಡಳಿ ಒದಗಿಸಲಿದೆ.
– ಯು.ಟಿ. ಖಾದರ್‌, ವಸತಿ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next