Advertisement

ಸದ್ಬಳಕೆಯಾಗದ ನೀರಾವರಿ ಇಲಾಖೆ ಜಮೀನು

05:59 PM Jan 29, 2022 | Team Udayavani |

ಸಿಂಧನೂರು: ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಸರಕಾರಿ ಜಮೀನು ದೊರೆಯುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ನೀರಾವರಿ ಇಲಾಖೆಗೆ ಸೇರಿದ ಬೃಹತ್‌ ಭೂಮಿ ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗದೇ ನಿಷ್ಪ್ರಯೋಜಕವಾಗಿದೆ.

Advertisement

ಸರಕಾರ 1960ನೇ ಸಾಲಿನಲ್ಲಿ ಸ್ವಾಧೀನ ಪಡಿಸಿಕೊಂಡ ಈ ಜಮೀನಿಗೆ ಸಂಬಂಧಿಸಿ ದಾಖಲೆ ನಿರ್ವಹಣೆ ಮಾಡುವಲ್ಲಿ ಅಧಿಕಾರಿಗಳು ವಿಫಲವಾದ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿದೆ. ನಗರದಲ್ಲಿ ಸರಕಾರಿ ಸೌಲಭ್ಯ ಕಲ್ಪಿಸಲು ಜಾಗಗಳ ಕೊರತೆಯಿದೆ ಎಂಬ ಚರ್ಚೆ ಕಾವೇರಿದ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆ ಜಮೀನಿನ ಹಲವು ಮಾಹಿತಿ ಹೊರಬೀಳಲಾರಂಭಿಸಿವೆ.

ಸ್ಥಿತಿಗತಿ ಏನು?

1960ನೇ ಸಾಲಿನಲ್ಲಿ ಇಲ್ಲವೇ 1970ರ ಪೂರ್ವದಲ್ಲಿ ಸರಕಾರ ಪಿಡಬ್ಲ್ಯೂಡಿ ಕ್ಯಾಂಪಿನಲ್ಲಿ ಬರುವ ಕೊಂತನೂರು ಡಿ. ವ್ಯಾಪ್ತಿಯಲ್ಲಿ ನೀರಾವರಿ ಇಲಾಖೆ ಹೆಸರಿನಲ್ಲಿ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇಲ್ಲಿ 29 ಎಕರೆ 34 ಗುಂಟೆ ಜಮೀನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ದಾಖಲೆ ಸಮೇತ ಖಚಿತಪಡಿಸುತ್ತಿದ್ದಾರೆ. ಅದರಲ್ಲಿ ಒಂದು ಪ್ರಕರಣ ಮಾತ್ರ ಕೋರ್ಟ್‌ನಲ್ಲಿದೆ. ಇನ್ನುಳಿದಂತೆ ಎಲ್ಲ ಜಮೀನು ನೀರಾವರಿ ಇಲಾಖೆ ಸುಪರ್ದಿಯಲ್ಲಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

1 ಎಕರೆ 20 ಗುಂಟೆಯನ್ನು ಪೊಲೀಸ್‌ ಇಲಾಖೆಗೆ ಹಸ್ತಾಂತರ ಮಾಡಿದ್ದರೆ, ಸರ್ವೆ ನಂ.29ರಲ್ಲಿ 8 ಎಕರೆ 5 ಗುಂಟೆ ಕರ್ನಾಟಕ ಸರಕಾರದ ಹೆಸರಿನಲ್ಲಿ ಜಮೀನಿದೆ. ಸರ್ವೆ ನಂಬರ್‌ 31 ರಲ್ಲಿ 5 ಎಕರೆ, ಸರ್ವೆ ನಂಬರ್‌ 32ರಲ್ಲಿ 10 ಎಕರೆ 19 ಗುಂಟೆ, ಸರ್ವೆ ನಂಬರ್‌ 33 ರಲ್ಲಿ 1 ಎಕರೆ 9 ಗುಂಟೆ ಜಮೀನಿದೆ. ಇಲ್ಲಿ ನೀರಾವರಿ ಇಲಾಖೆ ಸಿಬ್ಬಂದಿ ವಸತಿಗೃಹ, ಕಚೇರಿ, ಗ್ಯಾರೇಜ್‌ ಬಿಟ್ಟರೆ, ಬೇರೆನೂ ಇಲ್ಲ.

Advertisement

ಸಂರಕ್ಷಣೆಯ ವೈಫಲ್ಯ

ಸಿಂಧನೂರು ನಗರದಿಂದ ತೀರಾ ಕಡಿಮೆ ಅಂತರದಲ್ಲಿರುವ ಪಿಡಬ್ಲ್ಯೂಡಿ ಕ್ಯಾಂಪಿನ ನೀರಾವರಿ ಇಲಾಖೆಯ ಜಮೀನು ಸಂರಕ್ಷಣೆಯಲ್ಲಿ ಅಧಿಕಾರಿಗಳು ನಿಷ್ಕಾಳಜಿ ತೋರಿದ್ದಾರೆ. ಆಂಜನೇಯ ದೇಗುಲ ಪಕ್ಕದಲ್ಲಿ ಸುಮಾರು 2 ಎಕರೆಯಷ್ಟು ಸರಕಾರಿ ಭೂಮಿಯಲ್ಲಿ ಜಾಲಿ ಬೆಳೆಯಲಾಗಿದೆ. ಉಳಿದಂತೆ ಎಲ್ಲೆಂದರಲ್ಲಿ ಜಾಲಿ-ಬೇಲಿ ಬೆಳೆದು ಅರಣ್ಯರೂಪ ಕಂಡುಬರುತ್ತಿದೆ. ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡುವಲ್ಲೂ ಕೂಡ ಇಲಾಖೆ ಅಕಾರಿಗಳು ವಿಫಲರಾಗಿದ್ದಾರೆ.

29 ಎಕರೆ 34 ಗಂಟೆಗೆ ಕಾಂಪೌಂಡ್‌ ನಿರ್ಮಾಣ ಮಾಡಲಾಗಿದ್ದು, ಬಳಕೆಯಾಗದೇ ಉಳಿದ ಜಮೀನಿನ ಮಾಹಿತಿ ನೀಡಲು ಹಿಂದೇಟು ಹಾಕುತ್ತಾರೆ. ಸ್ವಾರಸ್ಯ ಎಂದರೆ, ಭೂಸ್ವಾಧೀನಕ್ಕೆ ಒಳಪಟ್ಟ ಕಡತಗಳನ್ನು ಕೂಡ ಸರಿಯಾಗಿ ನಿರ್ವಹಣೆ ಮಾಡಿಲ್ಲವೆಂಬ ಆರೋಪ ಕೇಳಿಬಂದಿದೆ.

ಉಪಬಾಡಿಗೆಯ ಅನುಮಾನ

ಪೊಲೀಸ್‌ ಇಲಾಖೆಗೆ ಜಮೀನು ಹಸ್ತಾಂತರ ಮಾಡಿದ ಮೇಲೆ 1 ಎಕರೆ 20 ಗುಂಟೆ ಆರಂಭದಲ್ಲಿ ಬಳಕೆಯಾಗಿತ್ತು. ನಂತರದಲ್ಲಿ ಪಿಡಬ್ಲ್ಯೂಡಿ ಕ್ಯಾಂಪಿನ ಮುಖ್ಯರಸ್ತೆಗೆ ಹೊಂದಿಕೊಂಡು ಗ್ರಾಮೀಣ ಪೊಲೀಸ್‌ ಠಾಣೆ ನಿರ್ಮಿಸಲಾಗಿದೆ. 1 ಎಕರೆ 20 ಗುಂಟೆ ಜಮೀನಿಗೆ ಸಂಬಂಧಿಸಿ ವ್ಯಾಜ್ಯವಿದ್ದು, ಉಳಿದ ಜಮೀನಿನ ದಾಖಲೆ ಸಮಸ್ಯೆಯಿಲ್ಲ ಎನ್ನುತ್ತಿರುವ ಅಧಿಕಾರಿಗಳು ಉಪಬಾಡಿಗೆಯ ಬಲೆಗೆ ಬಿದ್ದಿದ್ದಾರೆ ಎಂಬ ಸಂಶಯ ವ್ಯಾಪಕವಾಗಿದೆ.

ನೀರಾವರಿ ಇಲಾಖೆ ಜಮೀನು ಎಷ್ಟಿದೆ, ಏನಿದೆ ಎಂಬುದು ನನಗೆ ಗೊತ್ತಿರುವುದಿಲ್ಲ. ಅದನ್ನು ಬೇಕಾದರೆ, ಸೆಕ್ಷನ್‌ ಸಿಬ್ಬಂದಿಗೆ ಕೇಳಬಹುದು. ಅಲ್ಲೇ ಸ್ವಲ್ಪ ಖಾಲಿಯಿದೆ. ಉಳಿದಿದ್ದು, ಗೊತ್ತಿಲ್ಲ. ಕೇಳಿ ಹೇಳುತ್ತೇನೆ. -ಪ್ರಕಾಶ್‌ರಾವ್‌, ಕಾರ್ಯನಿರ್ವಾಹಕ ಎಂಜಿನಿಯರ್‌, ಇಇ, ಸಿಂಧನೂರು

ನೀರಾವರಿ ಇಲಾಖೆಯಲ್ಲಿ ಜಮೀನಿದೆ ಎಂಬುದು ಗೊತ್ತು. ಎಷ್ಟು, ಏನು? ಎಂಬುದನ್ನು ಕೇಳಬೇಕಿದೆ. ಸರಕಾರಿ ಸೌಲಭ್ಯ ಕಲ್ಪಿಸಲು ಅಲ್ಲಿನ ಭೂಮಿ ಬಳಕೆ ಮಾಡಬಹುದು. -ಕೆ.ವಿರೂಪಾಕ್ಷಪ್ಪ, ಮಾಜಿ ಸಂಸದರು, ಕೊಪ್ಪಳ ಲೋಕಸಭಾ ಕ್ಷೇತ್ರ

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next