Advertisement

ತಮ್ಮಣ್ಣ ಮೇಲೆ ಜಮೀನು ಒತ್ತುವರಿ ಆರೋಪ

07:00 AM Jul 31, 2018 | |

ರಾಮನಗರ: ತಾಲೂಕಿನ ಬಿಡದಿಯ ಕೇತಿಗಾನಹಳ್ಳಿ ಸರ್ವೆ ಸಂಖ್ಯೆ 10ರಲ್ಲಿ ಸಾರ್ವಜನಿಕ ಸ್ಮಶಾನಕ್ಕೆಂದು ಮೀಸಲಾಗಿದ್ದ 4.33 ಎಕರೆ ಭೂಮಿ ಒತ್ತುವರಿಯಾಗಿದ್ದು, ಸಚಿವ ಡಿ.ಸಿ.ತಮ್ಮಣ್ಣ  ಮತ್ತು ಅವರು ಸಂಬಂಧಿಕರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಬ್ಬನಕುಪ್ಪೆ ಸಂಪತ್‌ ಆರೋಪಿಸಿದ್ದಾರೆ.

Advertisement

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿಯ ಕೇತಿಗಾನಹಳ್ಳಿಯ ಸರ್ವೆ ಸಂಖ್ಯೆ 10ರಲ್ಲಿ 1.15 ಎಕರೆ ಸ್ಮಶಾನವಿದೆ. ಬಿಡದಿಯಲ್ಲಿ ಜನಸಂಖ್ಯೆ ದಿನೇ ದಿನೇ ಏರುತ್ತಿದ್ದರಿಂದ ಸರ್ವೆ ಸಂಖ್ಯೆ 10ರ ಉಳಿಕೆ 4.33 ಎಕರೆ ಭೂಮಿಯನ್ನು ಸಹ ಸ್ಮಶಾನಕ್ಕೆ ಮೀಸಲಿಡುವಂತೆ ಬಿಡದಿಯ ಗ್ರಾಮಸ್ಥರು ಒತ್ತಾಯಿಸುತ್ತಿದ್ದರು. ಆದರೆ 2006ರಲ್ಲಿ ರಾಮನಗರ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದ ಸಂದರ್ಭದಲ್ಲಿ ಕಂದಾಯ ಇಲಾಖೆ  ಸರ್ಕಾರಿ ಖರಾಬು ಸರ್ವೆ ಸಂಖ್ಯೆ 8, 9, 7, 10, 16ರಲ್ಲಿ  ಜಮೀನನ್ನು ಹರಾಜಿಗೆ ಇಟ್ಟಿತು.

ಇದನ್ನು ವಿರೋಧಿಸಿ ತಾವು  ಮತ್ತು ಶ್ರೀನಿವಾಸ್‌ ಎಂಬುವರು ಹೈಕೋರ್ಟ್‌ ಮೆಟ್ಟಿಲೇರಿ, ಸರ್ವೆ ಸಂಖ್ಯೆ 10ರಲ್ಲಿರುವ ಭೂಮಿಯನ್ನು ಸ್ಮಶಾನಕ್ಕೆ ಮೀಸಲಿರಿಸಬೇಕು ಎಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ  ಮನವಿಯನ್ನು ಪುರಸ್ಕರಿಸಿದ ಹೈಕೋರ್ಟು ಹರಾಜು ಪ್ರಕ್ರಿಯೆಗೆ ತಡೆ ನೀಡಿತು ಎಂದು ವಿವರಿಸಿದರು.

ಜಿಲ್ಲಾಡಳಿತ ಪಾಲಿಸಲಿಲ್ಲ: 2011ರಲ್ಲಿ ತೀರ್ಪು ಕೊಟ್ಟ ಹೈಕೋರ್ಟ್‌, ಅರ್ಜಿದಾರರು ಸದರಿ ಭೂಮಿಯನ್ನು ಸ್ಮಶಾನಕ್ಕೆ ಮಂಜೂರು ಮಾಡುವಂತೆ ಸಕ್ಷಮ ಅಧಿಕಾರಿಗಳಾದ ಜಿಲ್ಲಾಧಿಕಾರಿಗಳಿಗೆ ಅರ್ಜಿ ಹಾಕಿಕೊಳ್ಳುವಂತೆ ಸೂಚನೆ ಕೊಟ್ಟಿತು.

ಹೀಗೆ ಅರ್ಜಿ ಸಲ್ಲಿಸಿದ 2 ತಿಂಗಳೊಳಗಾಗಿ ಜಿಲ್ಲಾಧಿಕಾರಿಗಳು ತಕ್ಕ ನಿರ್ಧಾರದ ಆದೇಶ ಹೊರಡಿಸುವಂತೆ ಸೂಚನೆ ನೀಡಿತ್ತು. ಆದರೆ ನ್ಯಾಯಾಲಯದ ಸೂಚನೆಯನ್ನು ಜಿಲ್ಲಾಡಳಿತ ಪಾಲಿಸಲೇ ಇಲ್ಲ. ಹೀಗಾಗಿ ತಾವು ಮತ್ತೆ ತಮ್ಮ ವಕೀಲರ ಮೂಲಕ ಜಿಲ್ಲಾಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿ ನ್ಯಾಯಾಲಯ ನಿಂದನೆ ಅರ್ಜಿ ಹಾಕುವುದಾಗಿ ಎಚ್ಚರಿಸಿದ ನಂತರ ಪಹಣಿಯಲ್ಲಿ 4.33 ಎಕರೆ ಭೂಮಿಯನ್ನು ಸಾರ್ವಜನಿಕ ಸ್ಮಶಾನ ಎಂದು ನಮೂದಿಸಲಾಯಿತು ಎಂದು ಅಬ್ಬನಕುಪ್ಪೆ ಸಂಪತ್‌ ವಿವರಿಸಿದರು.

Advertisement

ಒತ್ತುವರಿ: ಸರ್ವೆ ಸಂಖ್ಯೆ 10ಕ್ಕೆ ಹೊಂದಿಕೊಂಡಂತೆ ಇರುವ ಸರ್ವೆ ಸಂಖ್ಯೆ 16ರಲ್ಲಿ ಸಚಿವ ಡಿ.ಸಿ.ತಮ್ಮಣ್ಣ ಮತ್ತು ಸಂಬಂಧಿಕರ ಭೂಮಿ ಇದೆ. ಹರಾಜಿಗಿದ್ದ ಬಹುತೇಕ ಸರ್ವೆ ಸಂಖ್ಯೆಗಳು ಸೇರಿದಂತೆ ಸ್ಮಶಾನಕ್ಕೆಂದು ಮೀಸಲಿರಿಸಿದ್ದ 4.07 ಎಕರೆ ಭೂಮಿಯನ್ನು ಸೇರಿಸಿಕೊಂಡು ಕಾಂಪೌಂಡ್‌ ಹಾಕಿಕೊಂಡಿದ್ದಾರೆ ಎಂದು ಅಬ್ಬನಕುಪ್ಪೆ ಸಂಪತ್‌ ಆರೋಪಿಸಿದರು.

ಈ ಸರ್ವೆ ಸಂಖ್ಯೆಗಳ ಮೂಲ ನಕ್ಷೆಯಲ್ಲಿದ್ದ ಕೆರೆ, ಕುಂಟೆ, ಕಾಲುದಾರಿ, ರಸ್ತೆಗಳೆಲ್ಲವನ್ನು ಸೇರಿಸಿಕೊಂಡು ಸಚಿವ ಡಿ.ಸಿ.ತಮ್ಮಣ್ಣ  ಮತ್ತು ಸಂಬಂಧಿಕರು ಒತ್ತುವರಿ ಮಾಡಿಕೊಂಡಿದ್ದಾರೆ. ಚಪ್ಪಟ್ಟೆ ಆಕಾರದಲ್ಲಿದ್ದ ಸರ್ವೆ ಸಂಖ್ಯೆ 10ರ ಭೂಮಿ ಇದೀಗ ಕಾಣಿಸುತ್ತಿಲ್ಲ ಎಂದು ಸಂಪತ್‌ ಸಂಪತ್‌ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next