Advertisement

ಬಿಷಪ್‌ ವಿರುದ್ಧದ ಭೂ ಒತ್ತುವರಿ ಆರೋಪ ಸುಳ್ಳು

11:01 AM Feb 01, 2018 | |

ಮಂಗಳೂರು: ಮಂಗಳೂರು ಧರ್ಮ ಪ್ರಾಂತ ಮತ್ತು ಅದರ ಅಧೀನ ಸಂಸ್ಥೆಗಳು ಹೊಂದಿರುವ ಆಸ್ತಿ ಕ್ರಮಬದ್ಧವಾಗಿವೆ. ಯಾವುದೇ ಸರಕಾರಿ ಭೂಮಿಯನ್ನು ಧರ್ಮಪ್ರಾಂತ ಒತ್ತುವರಿ ಮಾಡಿಲ್ಲ ಅಥವಾ ಕಾನೂನು ಬಾಹಿರ ಕೃತ್ಯ ಎಸಗಿಲ್ಲ ಎಂದು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕ ಅಧಿಕಾರಿ ವಂ| ವಿಲಿಯಂ ಮಿನೇಜಸ್‌ ಅವರ ಪ್ರಕಟನೆ ತಿಳಿಸಿದೆ.

Advertisement

ದ.ಕ. ಜಿ.ಪಂ. ಸಭಾಂಗಣದಲ್ಲಿ ಉಪ ಲೋಕಾಯುಕ್ತ ಸುಭಾಷ್‌ ಬಿ. ಅಡಿ ಅಧ್ಯಕ್ಷತೆಯಲ್ಲಿ ರವಿವಾರ ನಡೆದ ಸಾರ್ವಜನಿಕ ದೂರುಗಳ ವಿಚಾರಣೆ  ಸಂದರ್ಭ ಪ್ರಸ್ತಾವಗೊಂಡ ವಿಷಯಕ್ಕೆ ಸಂಬಂಧಿಸಿ ಮಂಗಳೂರು ಧರ್ಮಪ್ರಾಂತದ ಆಡಳಿತವು ಈ ಸ್ಪಷ್ಟೀಕರಣ ನೀಡಿದೆ.
ಸೈಂಟ್‌ ಜೋಸೆಫ್‌ ಆಶ್ರಮ ವಲೇರಿಯನ್‌ ಟೆಕ್ಸೇರಾ ಮತ್ತು ವಿಕ್ಟರ್‌ ಪಾಯ್ಸ ವಿರುದ್ಧ ಒಕ್ಕಲೆಬ್ಬಿಸುವುದಕ್ಕೆ ಸಂಬಂಧಿಸಿದ ಕೇಸು ದಾಖಲಿಸಿದ್ದು, ಅದರ ವಿಚಾರಣೆ ನ್ಯಾಯಾಲಯದಲ್ಲಿದೆ. ಈ ಹಿನ್ನೆಲೆಯಲ್ಲಿ ಧರ್ಮಪ್ರಾಂತಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಒತ್ತುವರಿ ಆರೋಪ ಹೊರಿಸಿ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ದೂರು ಅರ್ಜಿ ವಿಚಾರಣೆ ಸಂದರ್ಭ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಹಾಗೂ ಈ ಪ್ರಕರಣ ಲೋಕಾಯುಕ್ತ ವ್ಯಾಪ್ತಿಗೆ ಬರುವುದಿಲ್ಲ ಎಂದು ಉಪ ಲೋಕಾಯುಕ್ತರು ತಿಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. ದೂರುದಾರರು ತಾವು ವಾಸವಾಗಿರುವ ಭೂಮಿ
ಸರಕಾರಿ ಜಮೀನು ಎಂಬುದಾಗಿ ವಾದಿಸುತ್ತಿದ್ದು, ಅದು ಸರಕಾರಿ ಜಮೀನೇ ಅಥವಾ ಈ ಭೂಮಿಯಲ್ಲಿ ದೂರುದಾರರಿಗೆ ಹಕ್ಕು ಇದೆಯೇ ಅಥವಾ ಬಿಷಪ್‌ ಅವರ ಖಾಸಗಿ ಹಕ್ಕುಗಳಿಗೆ ತೊಂದರೆಯಾಗದಂತೆ ದೂರುದಾರರ ಹಿತಾಸಕ್ತಿ ರಕ್ಷಿಸಲು ಜಿಲ್ಲಾಡಳಿತಕ್ಕೆ ಪರ್ಯಾಯ ಅವಕಾಶಗಳೇನಾದರೂ ಇವೆಯೇ ಎನ್ನುವ ಬಗ್ಗೆ ಕಡತಗಳನ್ನು ಪರಿಶೀಲಿಸಿ 20 ದಿನಗಳೊಳಗೆ ವರದಿ ಸಲ್ಲಿಸುವಂತೆ ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತರು ಮತ್ತು ಮಂಗಳೂರು ತಾಲೂಕು ತಹಶೀಲ್ದಾರರಿಗೆ ಲೋಕಾಯುಕ್ತರು ಆದೇಶ ನೀಡಿದ್ದಾರೆ ಎಂದು ಪ್ರಕಟನೆ ವಿವರಿಸಿದೆ. ವಾಸ್ತವವಾಗಿ ಇದು ದೂರುದಾರರ ವಿರುದ್ಧವೇ ನಡೆಯುವ ತನಿಖೆಯಾಗಿದೆ ಹಾಗೂ ಅವರು ತಮ್ಮ ಹಕ್ಕುಗಳನ್ನು ಸಾಬೀತುಪಡಿಸಬೇಕಾಗಿದೆ ಎಂದು ಪ್ರಕಟನೆ ತಿಳಿಸಿದೆ.  

ಬಿಷಪ್‌ ವಿರುದ್ಧ ತನಿಖೆ ನಡೆಸುವಂತೆ ಉಪ ಲೋಕಾಯುಕ್ತರು ಯಾವುದೇ ಆದೇಶವನ್ನು ನೀಡಿಲ್ಲ. ಬಿಷಪ್‌ ಅವರು ಧರ್ಮ ಪ್ರಾಂತದ ಭೂಮಿ ಮತ್ತು ಆಸ್ತಿ ಪಾಸ್ತಿಗಳ ಬಗ್ಗೆ ಸೂಕ್ತ ದಾಖಲೆ ಪತ್ರಗಳನ್ನು ಹೊಂದಿದ್ದಾರೆ. ಮಂಗಳೂರು ಧರ್ಮ ಪ್ರಾಂತವು ಮಾನವೀಯ ನೆಲೆಯಲ್ಲಿ ವಾಸ್ತವ್ಯಕ್ಕಾಗಿ ಅತ್ಯಲ್ಪ ಬಾಡಿಗೆ ದರದಲ್ಲಿ ಒದಗಿಸಿದ ಜಾಗದಲ್ಲಿ ದೂರುದಾರರು ಹಲವಾರು ವರ್ಷಗಳಿಂದ ವಾಸವಾಗಿದ್ದಾರೆ. ಹಾಗಾಗಿ ಬಿಷಪ್‌ ವಿರುದ್ಧದ ಆರೋಪಗಳು ಸಂಪೂರ್ಣವಾಗಿ ಸುಳ್ಳು ಎಂದು ಪ್ರಕಟನೆಯಲ್ಲಿ ವಿವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next