ಕಾರಟಗಿ: ತಾಲೂಕಿನ ರೈತರು ವರುಣದೇವ ಕೃಪೆಗಾಗಿ ಕಾಯುತ್ತಿದ್ದಾರೆ. ಮುಂಗಾರು ಅಂತಿಮ ಹಂತಕ್ಕೆ ಬಂದರೂ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉತ್ತಮ ಮಳೆಯಾಗದಿರುವುದು ರೈತರನ್ನು ಕಂಗಾಲಾಗಿಸಿದೆ. ತುಂಗಭದ್ರಾ ಜಲಾಶಯ ಭರ್ತಿಯಾಗಿ ಎಡದಂಡೆ ನಾಲೆಗೆ ನೀರು ಹರಿಸಿದರೂ ವಿತರಣಾ ನಾಲೆಯ ಉಪ ಕಾಲುವೆಗಳಿಗೆ ಇದುವರೆಗೂ ತಲುಪದ ಕಾರಣ ರೈತರು ಭತ್ತದ ಸಸಿ ನಾಟಿ ಮಾಡದೇ, ಇನ್ನೂ ಕೆಲ ರೈತರು ನಾಟಿ ಮಾಡಿ ನೀರಿಲ್ಲದೆ ಕೈಕಟ್ಟಿ ಕುಳಿತಿದ್ದಾರೆ.
ಸಮೀಪದ ಮರ್ಲಾನಹಳ್ಳಿ ಗ್ರಾಮದ ವ್ಯಾಪ್ತಿಯ 31/3/2 ಕೆನಾಲ್ಗೆ ಸಂಬಂಧಿಸಿದ ಹೊಲ ಗದ್ದೆಗಳಿಗೆ ಉಪ ಕಾಲುವೆಗಳಿಗೆ ನೀರು ಬಿಟ್ಟರೂ ಎಲ್ಲ ರೈತರಿಗೆ ಒಂದೆ ಬಾರಿ ಗದ್ದೆಗಳಿಗೆ ನೀರು ಹರಿಸಲು ಆಗುವುದಿಲ್ಲ. ರೈತರಿಗೆ ಹಂತ ಹಂತವಾಗಿ ಪ್ರಕಾರ ನೀರು ಬಿಡಲಾಗುತ್ತಿದ್ದು, ಇದರಿಂದಾಗಿ ಒಮ್ಮೆ ಗದ್ದೆಗಳಿಗೆ ನೀರು ಹರಿಸಿದರೆ ಮುಂದಿನ ಸರದಿ 40 ದಿನಕ್ಕೆ ಬರುತ್ತದೆ. ಭತ್ತದ ಸಸಿ ನಾಟಿ ಮಾಡಿದ್ದ ಗದ್ದೆ ಒಣಗಿ ಬಿರುಕು ಬಿಟ್ಟಿದೆ. ಹೀಗಾದರೆ ಭತ್ತ ಬೆಳೆಯುವುದಾದರು ಹೇಗೆ? ಮಳೆ ಬರುವ ನೀರಿಕ್ಷೆಯಲ್ಲಿ ಭತ್ತ ನಾಟಿ ಮಾಡಿದ್ದೇವೆ. ಇತ್ತ ಮಳೆಯೂ ಇಲ್ಲ. ಕಾಲುವೆಗೆ ಸಮರ್ಪಕವಾಗಿ ನೀರು ಇಲ್ಲದೇ ತೀವ್ರ ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ರೈತರು ಅಳಲು ತೋಡಿಕೊಂಡರು.
31/3/2. ಕೆನಾಲ್ ವ್ಯಾಪ್ತಿಗೆ ನೀರಾವರಿ ಇಲಾಖೆಯ ಲೆಕ್ಕದ ಪ್ರಕಾರ 2200 ಎಕರೆ ಭೂಮಿಯಿದೆ. ಆದರೆ ಈ ಕಾಲುವೆ ವ್ಯಾಪ್ತಿಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಎಕರೆಯಲ್ಲಿ ಭತ್ತ ನಾಟಿ ಮಾಡಲಾಗಿದೆ. ಹೀಗಾದರೆ ಯಾರಿಗೆ ಸರದಿ ಪ್ರಕಾರ ಪ್ರಕಾರ ಸರಿಯಾಗಿ ನೀರು ಸಿಗುತ್ತದೆ, ನೀರಾವರಿ ಇಲಾಖೆ ಅಧಿಕಾರಿಗಳು ರೈತರ ಕಷ್ಟವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇದರಿಂದ ರೈತರು ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ. ಕಾಲುವೆ ಮೇಲ್ಭಾಗದಲ್ಲಿ ಬಲಾಡ್ಯ ರೈತರು ತಮ್ಮಿಷ್ಟದಂತೆ ಕಾಲುವೆ ನೀರು ಬಳಸಿಕೊಂಡರು ನೀರಾವರಿ ಇಲಾಖೆ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಇದರಿಂದಾಗಿ ಕೆಳಭಾಗದ ರೈತರು ತೊಂದರೆ ಅನುಭವಿಸುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ರೈತರು.
ಮಳೆಗಾಗಿ ತಾಲೂಕು ವ್ಯಾಪ್ತಿಯ ಗ್ರಾಮಗಳ ರೈತರು ಕಂಡ ಕಂಡ ದೇವರಿಗೆ ಪ್ರಾರ್ಥನೆ, ಕಪ್ಪೆ ಮದುವೆ, ಕತ್ತೆ ಮದುವೆ, ಸಪ್ತಭಜನೆ ಮಾಡಿದರೂ ವರುಣ ದೇವ ಕೃಪೆ ತೋರುತ್ತಿಲ್ಲ. ಇನ್ನು ಭತ್ತದ ಬೆಳೆ ಕೈಸೇರುವುದು ಇನ್ನೆಲ್ಲಿ ಎಂದು ರೈತ ಸುಬ್ಟಾರಡ್ಡಿ ನಿರಾಸೆಯಿಂದ ಹೇಳುತ್ತಾರೆ.
ತುಂಗಭದ್ರಾ ಎಡದಂಡೆ ನಾಲೆಯ ವ್ಯಾಪ್ತಿ ರೈತರು ಪ್ರತಿಭಾರಿ ಭತ್ತ ಬೆಳೆಯಲು ಹರಸಾಹಸ ಪಡಲೇಬೇಕಾದ ಅನಿವಾರ್ಯತೆ ಉದ್ಭವಿಸಿದೆ. ಕೆಲವೊಮ್ಮೆ ನೀರು ಬಾರದೆ ಮಳೆಯೂ ಬಾರದೇ ಸಂಕಷ್ಟಕ್ಕೆ ಸಿಲುಕುತ್ತಾರೆ. ಕೆಲವೊಮ್ಮೆ ಅಕಾಲಿಕ ಮಳೆ ಬಂದು ಬೆಳೆದ ಭತ್ತದ ಬೆಳೆ ನಾಶವಾಗುತ್ತದೆ. ಇನ್ನು ಕೆಲವೊಮ್ಮೆ ಭತ್ತದ ಬೆಳೆ ಕಟಾವಿಗೆ ಬಂದ ಸಮಯದಲ್ಲಿ ಕ್ರಿಮಿಕೀಟಗಳ ಹಾವಳಿಗೆ ಬೆಳೆ ನಾಶವಾಗುತ್ತದೆ. ಹೀಗೆ ಹಲವಾರು ಸಮಸ್ಯೆಗಳಿಂದ ರೈತರು ನಲುಗಿ ಹೋಗಿದ್ದಾರೆ. ನೀರಾವರಿ ಇಲಾಖೆ 31/3/2 ಕಾಲುವೆ ವ್ಯಾಪ್ತಿಯ ಭೂಮಿಗಳಿಗೆ ಹೆಚ್ಚಿನ ನೀರು ಪೂರೈಕೆಗೆ ಮುಂದಾಬೇಕೆಂಬುದು ರೈತರ ಒತ್ತಾಯವಾಗಿದೆ.