Advertisement
ಕೃಷಿ ಭೂಮಿಯಲ್ಲಿ ಮನೆ ಕಟ್ಟಿಕೊಳ್ಳುವುದೇ ಅಥವಾ ಕೃಷಿಯೇತರ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಬೇಕಾದರೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದು ಭೂ ಪರಿವರ್ತನೆ ಆಗಬೇಕು ಎನ್ನುತ್ತದೆ ಕರ್ನಾಟಕ ಸರಕಾರದ ನಿಯಮ. ಕೃಷಿ ಭೂಮಿ ದುರ್ಬಳಕೆಯಾಗಬಾರದು, ವಾಣಿಜ್ಯಿಕ ಉದ್ದೇಶ್ಯಗಳಿಗೆ ಬಳಕೆ ಮಾಡುವವರು ಬೊಕ್ಕಸಕ್ಕೆ ಒಂದಷ್ಟು ಫೀ ಕಟ್ಟಲಿ ಎನ್ನುವುದರ ಕುರಿತು ಯಾರ ವಿರೋಧವಿಲ್ಲ. ಆದರೆ ಅದಕ್ಕಾಗಿ ಒಂದು ದೊಡ್ಡ ಸಮರವನ್ನೇ ಎದುರಿಸಬೇಕಾದಂತ ಕ್ಲಿಷ್ಟಕರ ವ್ಯವಸ್ಥೆ, ಮಧ್ಯವರ್ತಿಗಳ ಸಹಾಯವಿಲ್ಲದೇ ಆ ಕೆಲಸ ಸಂಭವವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿರುವುದರ ಕುರಿತು ಸಾಮಾನ್ಯ ಜನರಿಗೆ ಆಕ್ರೋಶವಿದೆ ಎನ್ನುವುದು ನಮ್ಮ ಜನಪ್ರತಿನಿಧಿಗಳ ಗಮನಕ್ಕೆ ಬಂದಿಲ್ಲವೇ? ವಾಸ್ತವ್ಯಕ್ಕಾಗಿ ಅಥವಾ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕಾಗಿ ಅಧಿಕೃತವಾಗಿ ಕೃಷಿ ಭೂಮಿಯನ್ನು ಬಳಕೆ ಮಾಡಿಕೊಳ್ಳಬೇಕಾದರೆ ಲ್ಯಾಂಡ್ ಕನ್ವರ್ಷನ್ ಆಗದೇ ನಿಮ್ಮ ಕೆಲಸ ಒಂದಿಂಚೂ ಮುಂದೆ ಸಾಗದು. ಏಕೆಂದರೆ ಕೆಲವು ವರ್ಷಗಳ ಹಿಂದೆ ಬ್ಯಾಂಕಿನ ಸಾಲದ ಹಂಗಿದ್ದವರು ಮಾತ್ರ ಸರ್ವೇಯರ್ ನಕ್ಷೆ, ಋಣಭಾರ ಇಲ್ಲದಿರುವ ಕುರಿತು ಪ್ರಮಾಣ ಪತ್ರ, ಮ್ಯುಟೇಶನ್ ಪ್ರತಿ,ಆಕಾರ್ ಬಂದ್ ಮೊದಲಾದ ದಾಖಲೆಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಟದ ಕನ್ವರ್ಷನ್ ಜಂಜಾಟಕ್ಕೆ ಸಿಕ್ಕಿ ಬೀಳುತ್ತಿದ್ದರು. ಏಕೆಂದರೆ ಕನ್ವರ್ಷನ್ ಆಗದೇ ಬ್ಯಾಂಕ್ ಸಾಲ ಮಂಜೂರು ಮಾಡುತ್ತಿರಲಿಲ್ಲ.
Related Articles
Advertisement
ಲ್ಯಾಂಡ್ ಕನ್ವರ್ಷನ್ ಮಾಡಿಸಲು ಕಚೇರಿಯಿಂದ ಕಚೇರಿಗೆ ಓಡಾಡಿ ಅಗತ್ಯವಿರುವ ದಾಖಲೆ ಕಲೆ ಹಾಕಲು ತನ್ನ ಬಳಿ ಸಮಯವಿಲ್ಲವೆಂದು ಸೇನೆಯ ಸೇವೆಯಲ್ಲಿದ್ದ ಯೋಧ ರೋರ್ವರು ಹತ್ತು ವರ್ಷದ ಹಿಂದೆ ಪಿತ್ರಾರ್ಜಿತ ಸ್ಥಳದಲ್ಲಿ ಸ್ವಂತ ಹಣದಲ್ಲಿ (ಗೃಹ ಸಾಲ ಪಡೆಯದೇ) ತಮ್ಮ ಎರಡು ವರ್ಷಗಳ ನಾಲ್ಕು ತಿಂಗಳ ವಾರ್ಷಿಕ ರಜೆಯನ್ನು ಉಪಯೋಗಿಸಿಕೊಂಡು ಮನೆ ಕಟ್ಟಿಸಿಕೊಂಡರು. ನಿವೃತ್ತಿಯ ನಂತರ ಇದೀಗ ಕನ್ವರ್ಷನ್ ಮಾಡಿಸಿ ದಾಖಲೆ ಸರಿಪಡಿಸಿಕೊಳ್ಳೋಣ ಎಂದರೆ ಅವರಿಗೆ ಕಳೆದ ಒಂದು ವರ್ಷದಿಂದ ಕಚೇರಿಯಿಂದ ಕಚೇರಿಗೆ ಅಲೆಯಬೇಕಾಗಿದೆ. ಮೊದಲು ಪಹಣಿ ಪತ್ರದಲ್ಲಿ ನ್ಯೂನತೆ ಇದೆ, ಅದನ್ನು ಸರಿಪಡಿಸಿಕೊಳ್ಳುವಂತೆ ತಿಳಿಸಲಾಯಿತು. ಪಹಣಿ ಪತ್ರ ಸರಿಪಡಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕಾದವು. ನಂತರ ಭೂ ಪರಿವರ್ತನೆ ಕುರಿತು ಸರ್ವೇಯರ್ ಪಕ್ಷಿನೋಟ ನಕ್ಷೆ ಸಿದ್ದಪಡಿಸಿಕೊಳ್ಳಲು ಕೆಲವು ತಿಂಗಳುಗಳೇ ಕಳೆದವು. ಮಿಕ್ಕುಳಿದ ದಾಖಲೆಗಳನ್ನು ಕಲೆ ಹಾಕಿ ಇನ್ನು ತಾನು ಗೆದ್ದನೆಂದು ಬೀಗುವ ಹೊತ್ತಿನಲ್ಲಿ ಇನ್ನು ಮುಂದೆ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕಾರದ ಪದ್ಧತಿ ಜಾರಿಯಾಗಲಿದೆಯಾದ್ದರಿಂದ ಆ ಕುರಿತು ತಂತ್ರಾಶ ಸಿದ್ಧವಾಗುತ್ತಿರುವುದರಿಂದ ತಾತ್ಕಾಲಿಕವಾಗಿ ಭೂ ಪರಿವರ್ತನೆ ನಿಲ್ಲಿಸಲಾಗಿದೆ ಎನ್ನುವ ಸುದ್ದಿ ಬರ ಸಿಡಿಲಿನಂತೆ ಎರಗಿತು. ಛಲ ಬಿಡದ ತ್ರಿವಿಕ್ರಮನಂತೆ ಅವರು ಪುನಹ ಹೊಸದಾಗಿ ರೂ. 2000 ಕಟ್ಟಿ 11ಉನಕ್ಷೆ ಸಿದ್ಧಪಡಿಸಿಕೊಂಡು ತಾಲೂಕು ಕಚೇರಿಯ ಮುಂದೆ ನಿಂತಿದ್ದಾರೆ! ಮನೆ ಕಟ್ಟಿ ನೋಡಿ ಮದುವೆ ಮಾಡಿ ನೋಡಿ ಎಂದು ಹೇಳಿದ ಗಾದೆ ಮಾತಿನ ಮೊದಲ ಅರ್ಧದ ಮಹತ್ವ ತನಗೆ ಈಗ ಚೆನ್ನಾಗಿ ತಿಳಿಯಿತು ಎನ್ನುತ್ತಾರೆ ಅವರು.
ರಾಜ್ಯದಲ್ಲಿ ಗಂಡ – ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎಂದು ಹೇಳಿದಂತೆ ಸಮ್ಮಿಶ್ರ ಸರಕಾರದಲ್ಲಿ ಆಡಳಿತ ವ್ಯವಸ್ಥೆಯ ಮೇಲೆ ಸರಕಾರದ ಹಿಡಿತವಿಲ್ಲದೇ ಜನ ಸಮಸ್ಯೆಯನ್ನು ಕೇಳುವವರಿಲ್ಲವಾಗಿದೆ. ಸರಕಾರ ರಚನೆಯಾಗಿ ಆರು ತಿಂಗಳು ಕಳೆದರೂ ಆಡಳಿತ ಕುಂಟುತ್ತಾ ಸಾಗಿದೆ. ಅಧಿಕಾರ ಶಾಶ್ವತವಲ್ಲ. ಇಂದು ಅಧಿಕಾರದಲ್ಲಿರುವರು ರಾತ್ರಿ ಬೆಳಗಾಗುವುದರೊಳಗೆ ಮಾಜಿಗಳಾಗಿಬಿಡುತ್ತಾರೆ. ಗ್ರಾಮೀಣ ಅಭಿವೃದ್ಧಿಯ ಕುರಿತಾದ ನಜೀರ ಸಾಬ್ ಅವರ ಕಾಳಜಿಯನ್ನು, ಗೋವಿಂದೇಗೌಡರ ಶಿಕ್ಷಣ ಇಲಾಖೆಯ ಪ್ರಾಮಾಣಿಕ ಕೆಲಸಗಳನ್ನು, ವೀರಪ್ಪ ಮೊಯಿಲಿ ಯವರ ವೃತ್ತಿಪರ ಕೋರ್ಸ್‌ಗಳ ಸೀಟ್ ಹಂಚಿಕೆಯ ಸಿಇಟಿ ಪದ್ಧತಿ ಜಾರಿಗೆ ತಂದಂತಹ ಉತ್ತಮ ಕಾರ್ಯಗಳನ್ನು ಜನತೆ ಇಂದಿಗೂ ಸ್ಮರಿಸುತ್ತಾರೆ. ಕಂದಾಯ ಮಂತ್ರಿಗಳು ಲ್ಯಾಂಡ್ ಕನ್ವರ್ಷನ್ ವಿಷಯದಲ್ಲಿ ಲ್ಯಾಂಡ್ ಮಾರ್ಕ್ ನಿರ್ಣಯ ತಳೆದು ಶಾಶ್ವತ ಮತ್ತು ಪಾರದರ್ಶಿಕ ವ್ಯವಸ್ಥೆ ತಂದು ಉಪಕರಿಸುವರೆಂದು ಆಶಿಸಬಹುದೇ?
— ಬೈಂದೂರು ಚಂದ್ರಶೇಖರ ನಾವಡ