Advertisement

ಜಮೀನು ಹಕ್ಕು: ಅಧಿಕಾರಿಗಳ ನಡುವೆ ತೀವ್ರ ವಾಗ್ವಾದ

02:43 AM Apr 06, 2021 | Team Udayavani |

ಪುತ್ತೂರು: ಸಾರ್ವಜನಿಕ ಉದ್ದೇಶ ಗಳಿಗೋಸ್ಕರ ಜಮೀನು ಸ್ವಾಧೀನಪಡಿಸುವ ಸಂದರ್ಭ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂಬ ವಿಚಾರಕ್ಕೆ ತಾ.ಪಂ.ಮಾಸಿಕ ಕೆಡಿಪಿ ಸಭೆಯಲ್ಲಿ ಅರಣ್ಯ, ಕಂದಾಯ, ತಾ.ಪಂ.ಅಧಿಕಾರಿಗಳ ನಡುವೆ ಪರಸ್ಪರ ವಾಗ್ವಾದವೇ ನಡೆಯಿತು.

Advertisement

ತಾ.ಪಂ.ಮಾಸಿಕ ಕೆಡಿಪಿ ಸಭೆಯು ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಅವರ ಅಧ್ಯಕ್ಷತೆಯಲ್ಲಿ ಎ.5ರಂದು ತಾ.ಪಂ.ಸಭಾಂಗಣದಲ್ಲಿ ನಡೆಯಿತು.

ಒಳಮೊಗ್ರು ಗ್ರಾ.ಪಂ.ವ್ಯಾಪ್ತಿಯಲ್ಲಿ ಶ್ಮಶಾನ ನಿರ್ಮಿಸಲು ಮೂರು ವರ್ಷಗಳ ಹಿಂದೆ 20 ಲಕ್ಷ ರೂ.ಅನುದಾನ ಮಂಜೂರಾಗಿದೆ. ಆದರೆ ಎರಡು ಬಾರಿ ಜಾಗ ನಿಗದಿಪಡಿಸಿದಾಗಲು ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ ಎಂದು ತಾ.ಪಂ.ಇಒ ನವೀನ್‌ ಭಂಡಾರಿ ಪ್ರಸ್ತಾವಿಸಿದರು. ಉತ್ತರಿಸಿದ ವಲಯ ಅರಣ್ಯಧಿಕಾರಿ ಸುಬ್ಬಯ್ಯ, ಶ್ಮಶಾನಕ್ಕೆ ಗುರುತಿಸಿರುವ ಜಾಗ ಯಾವುದು ಎನ್ನುವ ವಿಚಾರವೇ ನಮಗೆ ತಿಳಿದಿಲ್ಲ. ಸ್ಥಳ ಕಾದಿರಿಸುವ ಬಗ್ಗೆ ಕಂದಾಯ ಇಲಾಖೆ ನಮ್ಮ ಗಮನಕ್ಕೆ ತರುತ್ತಿಲ್ಲ. ನೋಟಿಸ್‌ ನೀಡುವುದಿಲ್ಲ. ಅರಣ್ಯ ಇಲಾಖೆ-ಸ್ಥಳೀಯರ ನಡುವೆ ಜಗಳ ತಂದೊಡ್ಡುತ್ತಿದೆ ಎಂದು ಕಂದಾಯ ಇಲಾಖೆ ಕ್ರಮದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.

ಈ ವಿಚಾರವಾಗಿ ತಹಶೀಲ್ದಾರ್‌ ರಮೇಶ್‌ ಬಾಬು ಹಾಗೂ ಆರ್‌ಎಫ್‌ ನಡುವೆ ತೀವ್ರ ಚರ್ಚೆ ನಡೆಯಿತು. ಪಹಣಿ ಪತ್ರದಲ್ಲಿ ಸರಕಾರಿ ಜಮೀನು ಎಂದಿದ್ದರೂ ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸುವ ಬಗ್ಗೆ ತಹಶೀಲ್ದಾರ್‌ ಪ್ರಶ್ನಿಸಿದರು. ಅರಣ್ಯ ಇಲಾಖೆ ಅಡ್ಡಿಯಿಂದ ಜನಪ್ರತಿನಿಧಿಗಳು ನಮ್ಮನ್ನು ಪ್ರಶ್ನಿಸುವಂತಾಗಿದೆ ಎಂದರು. ಅರಣ್ಯ ಇಲಾಖೆಗೆ ಯಾವುದೇ ಮಾಹಿತಿ ನೀಡದೆ ಕಂದಾಯ ಇಲಾಖೆ ಮಂಜೂರಾತಿ ನೀಡುತ್ತಿರುವುದೇ ಸಮಸ್ಯೆಗೆ ಕಾರಣ ಎಂದು ಆರ್‌ಎಫ್‌ ಪ್ರತ್ಯುತ್ತರಿಸಿದರು. ಬಳಿಕ ಮಧ್ಯ ಪ್ರವೇಶಿಸಿದ ತಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಹಾಗೂ ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಅಧಿಕಾರಿಗಳೇ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುವುದು ಬೇಡ. ಸಾರ್ವಜನಿಕ ಉದ್ದೇಶಕೋಸ್ಕರ ಜಾಗ ಮೀಸಲಿಡುವ ಸಂದರ್ಭದಲ್ಲಿ ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸುವಂತೆ ಅವರು ತಿಳಿಸಿದರು. ಸಾರ್ವಜನಿಕ ಉದ್ದೇಶಕ್ಕೆ ಜಾಗ ಮೀಸಲಿಡುವುದಕ್ಕೆ ನಾವು ಅಡ್ಡಿ ಪಡಿಸುವುದಿಲ್ಲ. ರಿಸರ್ವ್‌ ಫಾರೆಸ್ಟ್‌ ಜಾಗವನ್ನು ನೀಡಲು ನಮಗೆ ಅಧಿಕಾರ ಇಲ್ಲ ಎಂದು ಅರಣ್ಯಾಧಿಕಾರಿ ಉತ್ತರಿಸಿದರು. ಒಳಮೊಗ್ರು ಶ್ಮಶಾನ ಜಾಗಕ್ಕೆ ಸಂಬಂಧಿಸಿ ಅರಣ್ಯ, ತಾ.ಪಂ., ಕಂದಾಯ ಇಲಾಖೆ ಉಪಸ್ಥಿತಿಯಲ್ಲಿ ಸ್ಥಳ ಪರಿಶೀಲಿಸುವ ಬಗ್ಗೆ ನಿರ್ಧರಿಸಿದ ಬಳಿಕ ಚರ್ಚೆಗೆ ತೆರೆಬಿತ್ತು.

ಗುದ್ದಲಿ ಪೂಜೆಯಾದರೂ ಕಾಮಗಾರಿ ಪ್ರಾರಂಭವಿಲ್ಲ
ತಾಲೂಕಿನ ಮೂರು ಕಡೆಗಳಲ್ಲಿ ರೈತ ಸಂಪರ್ಕ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ನಡೆದು ಆರು ತಿಂಗಳು ಸಮೀಪಿಸಿದೆ. ಆದರೆ ಕಾಮಗಾರಿ ಪ್ರಾರಂಭವಾಗಿಲ್ಲ.

Advertisement

ಈ ವಿಳಂಬ ಏಕೆ ಎಂದು ಅಧ್ಯಕ್ಷರು ಅಧಿಕಾರಿಗಳನ್ನು ಪ್ರಶ್ನಿಸಿದರಲ್ಲದೇ ತತ್‌ಕ್ಷಣ ಪ್ರಾರಂಭಿಸುವಂತೆ ಸೂಚಿಸಿದರು.
ಬಡಗನ್ನೂರು ಗ್ರಾಮದಲ್ಲಿ ಕೊಳವೆಬಾವಿಗೆ ಸಂಪರ್ಕ ಕಲ್ಪಿಸದ ಬಗ್ಗೆ, ಶಾಲಾ ಪಹಣಿಪತ್ರ ದಾಖಲಾಗದಿರುವ ಬಗ್ಗೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಅಂಗನವಾಡಿ ತೆರೆಯಬೇಡಿ
ಕೋವಿಡ್‌ ಕಾರಣದಿಂದ 1 ರಿಂದ 9ನೇ ತರಗತಿ ತನಕ ಶಾಲಾ ತರಗತಿ ಮುಚ್ಚಲು ಸರಕಾರ ಸೂಚಿಸಿದ್ದು ಅಂಗನವಾಡಿ ಮುಚ್ಚಿದೆಯೇ ಎಂದು ತಾ.ಪಂ.ಅಧ್ಯಕ್ಷರು ಪ್ರಶ್ನಿಸಿದರು. ಸಿಡಿಪಿಒ ಶ್ರೀಲತಾ ಉತ್ತರಿಸಿ, ಸರಕಾರದಿಂದ ಆದೇಶ ಬಂದಿಲ್ಲ. ಹಾಗಾಗಿ ಮುಚ್ಚಿಲ್ಲ ಎಂದರು. ಆದೇಶಕ್ಕೆ ಕಾಯಬೇಡಿ. ಡಿ.ಡಿ. ಅವರ ಗಮನಕ್ಕೆ ತಂದು ತತ್‌ಕ್ಷಣ ಮುಚ್ಚಬೇಕು. ಕೋವಿಡ್‌ ಪ್ರಕರಣ ಏರಿಕೆ ಕಂಡಿದ್ದು ಹೆಚ್ಚು ಕಮ್ಮಿಯಾದರೆ ನೀವೇ ಹೊಣೆ ಹೊರುವ ಪರಿಸ್ಥಿತಿ ಬರಬಹುದು ಎಂದು ಅಧ್ಯಕ್ಷರು ಹೇಳಿದರು. ಖಾಸಗಿ ಶಾಲೆಗಳು ಸರಕಾರದ ಸೂಚನೆ ಪಾಲಿಸಿದೆಯೇ ಎಂಬ ಬಗ್ಗೆ ಶಿಕ್ಷಣ ಇಲಾಖೆ ಪರಿಶೀಲಿಸುವಂತೆ ಅಧ್ಯಕ್ಷರು ನಿರ್ದೇಶಿಸಿದರು.

ಜಾಗೃತಿ ಮೂಡಿಸಿ
ತಾಲೂಕಿನಲ್ಲಿ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವ ಪ್ರಮಾಣ ತೀರಾ ಕಡಿಮೆ ಇರುವ ಬಗ್ಗೆ ಅಧ್ಯಕ್ಷರು ಪ್ರಸ್ತಾವಿಸಿ, ಈ ಬಗ್ಗೆ ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸಿ ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಿಸಬೇಕು. ಈಗಾಗಲೇ ಕೋವಿಡ್‌ ಎರಡನೆ ಅಲೆ ಹೆಚ್ಚಾಗುತ್ತಿದ್ದು ಸ್ವ-ರಕ್ಷಣೆ ಬಗ್ಗೆ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳಬೇಕು. ಸರಕಾರದ ನಿಯಮಗಳನ್ನು ಪಾಲಿಸಬೇಕು ಎಂದು ತಾಲೂಕು ಪಂಚಾಯತ್‌ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next