ವಾಡಿ: ದಶಕಗಳಿಂದ ಮುಂದುವರೆಯುತ್ತಿರುವ ಪಹಣಿ ದೋಷ ಪ್ರಕರಣ ಖಂಡಿಸಿ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ರೈತರಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.
ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್) ನೇತೃತ್ವದಲ್ಲಿ ಜಮಾಯಿಸಿದ ಸಾವಿರಾರು ಜನ ಅನ್ನದಾತರು, ಗ್ರಾಮ ಹೊರ ವಲಯದ ಕಲ್ಬುರ್ಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಬೆಳಿಗ್ಗೆ ಹಳಕರ್ಟಿ ಗ್ರಾಮದಿಂದ ನೂರಾರು ಎತ್ತಿನ ಬಂಡಿಗಳನ್ನು ತಂದು ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ವಿರುದ್ಧ ಬಾರ್ಕೋಲು ಬೀಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಎಐಕೆಕೆಎಂಎಸ್ ರಾಜ್ಯಾಧ್ಯಕ್ಷ ಕಾಮ್ರೇಡ್ ಎಚ್.ವಿ.ದಿವಾಕರ, 650 ಸರ್ವೆ ನಂಬರ್ ಪಹಣಿಗಳು ಸಂಪೂರ್ಣ ದೋಷದಿಂದ ಕೂಡಿವೆ ಅವುಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಕಳೆದ ಆರು ವರ್ಷಗಳಿಂದ ಹಂತ ಹಂತವಾಗಿ ಹೋರಾಟ ನಡೆಸುತ್ತಿದ್ದರೂ ಅಧಿಕಾರಿಗಳು ರೈತರ ನೆರವಿಗೆ ಮುಂದಾಗಿಲ್ಲ. ತಹಶೀಲ್ದಾರರ ದಿವ್ಯ ನಿರ್ಲಕ್ಷ್ಯ ರೈತರ ಗೋಳಾಟಕ್ಕೆ ಕಾರಣವಾಗಿದೆ. ಗ್ರಾಮ ವಾಸ್ತವ್ಯ ನಡೆಸಿದ ಜಿಲ್ಲಾಧಿಕಾರಿಗಳಿಂದಲೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ ಎಂದರೆ ಜಿಲ್ಲಾಡಳಿತ ಎಷ್ಟು ಜಡ್ಡುಗಟ್ಟಿದೆ ಎಂಬುದು ಅರ್ಥವಾಗುತ್ತದೆ. ಜಿಲ್ಲೆಯ ಸಂಸದರು ಮತ್ತು ಕ್ಷೇತ್ರದ ಶಾಸಕರು ಏನು ಕೆಲಸ ಮಾಡುತ್ತಿದ್ದಾರೋ ಗೊತ್ತಿಲ್ಲ. ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಹಣಿ ದೋಷ ಸಮಸ್ಯೆಯಿಂದ ಹಳಕರ್ಟಿ ರೈತರು ತೀವ್ರ ಕಂಗಾಲಾಗಿದ್ದಾರೆ. ಸಮಸ್ಯೆ ಹೇಳಿಕೊಂಡು ತಾಲೂಕು ಆಡಳಿತ ಕಚೇರಿಗೆ ಅಲೆದರೂ ಯಾರು ಕೇಳೋರಿಲ್ಲ. ಗಂಭೀರ ಸಮಸ್ಯೆಯಿಂದ ರೈತರು ಬೇಸತ್ತಿದ್ದಾರೆ. ಅನ್ನ ನೀಡುವ ರೈತರು ಕಣ್ಣೀರು ಹಾಕುತ್ತಿದ್ದರೂ ಅಧಿಕಾರಿಗಳು ಮೌನಕ್ಕೆ ಜಾರಿರುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ಪಹಣಿ ದೋಷ ಸರಿಪಡಿಸಲು ತಾಲೂಕು ಆಡಳಿತ ಗ್ರಾಮದಲ್ಲೇ ಠಿಕಾಣಿ ಹೂಡಬೇಕು. ನಿರ್ಲಕ್ಷ್ಯ ಮುಂದುವರೆದರೆ ಕಲಬುರ್ಗಿ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ದಿವಾಕರ್ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: 840ಕ್ಕೂ ಹೆಚ್ಚು ಮಕ್ಕಳಿಗೆ ಏಳೇ ಜನ ಶಿಕ್ಷಕರು!
ಹೆದ್ದಾರಿ ತಡೆ ಚಳುವಳಿಗೆ ಪೊಲೀಸರು ಸಹಕಾರ ನೀಡದಿರಲು ಮುಂದಾದಾಗ ರೈತ ಮುಖಂಡರು ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಎಸ್ ಯುಸಿಐ ಮುಖಂಡ ವೀರಭದ್ರಪ್ಪ ಆರ್.ಕೆ, ಎಐಕೆಕೆಎಂಎಸ್ ತಾಲೂಕು ಕಾರ್ಯದರ್ಶಿ ಶಿವುಕುಮಾರ ಆಂದೋಲಾ, ಗ್ರಾಮ ಘಟಕದ ಅಧ್ಯಕ್ಷ ಚೌಡಪ್ಪ ಗಂಜಿ, ಗುಂಡಣ್ಣ ಕುಂಬಾರ, ಈರಣ್ಣ ಇಸಬಾ, ಹಿರಿಯ ಮುಖಂಡರಾದ ಮಲ್ಲಣ್ಣ ಸಾಹು ಸಂಘಶೆಟ್ಟಿ ಸೇರಿದಂತೆ ಸಾವಿರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.