ವಿಧಾನಸಭೆ: ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆಯಡಿ ಭೂ ಮಂಜೂರಾತಿ ಸಂಬಂಧ ನಿರಂತರ ಸಭೆ ನಡೆಸಿ ವಿಲೇವಾರಿ ಮಾಡಬೇಕು. ತಿರಸ್ಕೃತಗೊಳಿಸಿದ ಅರ್ಜಿಗಳನ್ನೂ ಮರುಪರಿಶೀಲನೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಅರಗ ಜ್ಞಾನೇಂದ್ರ ಅವರ ಪ್ರಸ್ತಾಪಕ್ಕೆ ಉತ್ತರಿಸಿ, ಅರಣ್ಯ ಹಕ್ಕು ಕಾಯ್ದೆಯಡಿ ಭೂ ಮಂಜೂರಾತಿಗಾಗಿ ಇದುವರೆಗೂ ಪರಿಶಿಷ್ಟ ಪಂಗಡದಿಂದ 48298 ಅರ್ಜಿ, ಇತರೆ ಪಾರಂಪರಿಕ ಅರಣ್ಯ ವಾಸಿಗಳಿಂದ 239562 ಅರ್ಜಿ, ಸಮುದಾಯ ಹಕ್ಕುಗಳ ಕಡೆಯಿಂದ 5962 ಅರ್ಜಿ ಸೇರಿ ಒಟ್ಟು 2,93,786 ಅರ್ಜಿ ಸ್ವೀಕಾರವಾಗಿದೆ. 14023 ಹಕ್ಕು ಪತ್ರ ಮೂಲಕ 1,9192.67 ಎಕರೆ ಭೂಮಿ ಮಂಜೂರು ಮಾಡಲಾಗಿದೆ ಎಂದರು.
ಬಿಜೆಪಿಯ ಅಪ್ಪಚ್ಚು ರಂಜನ್, ಎಂ.ಪಿ.ಕುಮಾರಸ್ವಾಮಿ, ಹರತಾಳು ಹಾಲಪ್ಪ ಮಾತನಾಡಿ, ಭೂ ಮಂಜೂರಾತಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಆಗುತ್ತಿಲ್ಲ. ಅಧಿಕಾರಿಗಳು ನಾನಾ ನೆಪವೊಡ್ಡಿ ವಿಳಂಬ ಮಾಡುತ್ತಿದ್ದಾರೆ. ನಿಯಮಿತವಾಗಿ ಸಭೆ ನಡೆಯುವುದಿಲ್ಲ, ಅರಣ್ಯದಲ್ಲಿ ಬದುಕುತ್ತಿರುವವರ ಜೀವನ ನರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ವಿನಾಕಾರಣ ಸಮಸ್ಯೆ ಮಾಡುತ್ತಿದ್ದಾರೆಂದು ದೂರಿದರು.
ಸಾಮಾನ್ಯ ವರ್ಗದವರು, ಅರಣ್ಯ ವಾಸಿಗಳು ಮೂರು ತಲೆಮಾರು ಇರುವ ಬಗ್ಗೆ ದಾಖಲೆ ನೀಡಬೇಕು ಎಂದಿದೆ, ಅಂದರೆ 75 ವರ್ಷದ್ದು ನೀಡಬೇಕು. ಅದರ ಬದಲು ಒಂದು ತಲೆಮಾರು ಅಂದರೆ 25 ವರ್ಷ ಸಾಕು ಎಂದು ನಿಯಮ ತನ್ನಿ ಎಂದರು. ಗೋವಿಂದ ಕಾರಜೋಳ ಉತ್ತರಿಸಿ, ಒಂದು ತಲೆಮಾರು ಪರಿಗಣಿಸಲು ಕೋರಿ ಈಗಾಗಲೇ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಮತ್ತೂಮ್ಮೆ ಶಿಫಾರಸು ಮಾಡಲು ಪರಿಶೀಲಿಸಲಾಗುವುದು ಎಂದು ಹೇಳಿದರು.
20 ಸಾವಿರ ಕಿ.ಮೀ. ರಸ್ತೆ ಮೇಲ್ದರ್ಜೆಗೆ
ವಿಧಾನಸಭೆ: ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಗ್ರಾಮೀಣ ಹಾಗೂ ನಗರ ಭಾಗದ 20 ಸಾವಿರ ಕಿ.ಮೀ. ರಸ್ತೆ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಲೋಕೋಪಯೋಗಿ ಸಚಿವರೂ ಆದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಈಶ್ವರ್ ಖಂಡ್ರೆ ಪ್ರಶ್ನೆಗೆ ಉತ್ತರಿಸಿ, 224 ಕ್ಷೇತ್ರಗಳಲ್ಲೂ ರಸ್ತೆ ಮೇಲ್ದರ್ಜೆಗೇರಿಸುವ ಕೆಲಸ ಮಾಡಲಾಗುವುದು. 2020-21ನೇ ಸಾಲಿನಲ್ಲಿ ಇದಕ್ಕಾಗಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.