Advertisement

ಭೂಸಂಗ್ರಾಮಕ್ಕೆ ನಾಂದಿ: BJP ಸರಕಾರದ ಜಮೀನು ಹಂಚಿಕೆ ಮರುಪರಿಶೀಲನೆ

12:27 AM Jun 10, 2023 | Team Udayavani |

ಬೆಂಗಳೂರು: ಕಳೆದ ಆರು ತಿಂಗಳುಗಳ ಅವಧಿಯಲ್ಲಿ ಸಂಘ ಪರಿವಾರದ ಸಂಸ್ಥೆಗಳ ಸಹಿತ ಯಾರ್ಯಾರಿಗೆ ಸರಕಾರಿ ಭೂಮಿ ಹಂಚಿಕೆ ಮಾಡಲಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲು ರಾಜ್ಯದ ನೂತನ ಕಾಂಗ್ರೆಸ್‌ ಸರಕಾರವು ಮುಂದಾಗಿದೆ.

Advertisement

ಗೋಹತ್ಯೆ ನಿಷೇಧ ಕಾಯ್ದೆ, ಕೃಷಿ ಕಾಯ್ದೆ ಮರು ಪರಿಶೀಲನೆ, ಪಠ್ಯಪುಸ್ತಕ ಪರಿಷ್ಕರಣೆಗೆ ನಿರ್ಧರಿಸಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರ ಈಗ ಭೂಮಿ ಹಂಚಿಕೆ ಕಡತಗಳ ಪರಿಶೀಲನೆಗೆ ಕೈಹಾಕಿದೆ. ಈ ಬೆಳವಣಿಗೆ ಬಿಜೆಪಿ – ಕಾಂಗ್ರೆಸ್‌ ನಡುವೆ ಮತ್ತೂಂದು ಸುತ್ತಿನ ವಾಕ್ಸಮರಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಗಳಿವೆ.
ಬಿಜೆಪಿ ಸರಕಾರ 2022ರ ಡಿಸೆಂಬರ್‌ನಿಂದ ಚುನಾವಣ ನೀತಿ ಸಂಹಿತೆ ಘೋಷಣೆ ಆಗುವ ತನಕ ಹತ್ತಾರು ಸಂಘ ಸಂಸ್ಥೆಗಳಿಗೆ ನೂರಾರು ಎಕರೆ ಸರಕಾರಿ ಭೂಮಿ ಹಂಚಿಕೆ ಮಾಡಿತ್ತು.

ಈ ಬಗ್ಗೆ ಆಗ ವಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್‌ ಆಕ್ಷೇಪಿಸಿತ್ತು. ಈಗ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿರುವುದರಿಂದ ಭೂ ಮಂಜೂರಾತಿ ಕಡತಗಳನ್ನು ಪರಿಶೀಲಿಸಲು ನಿರ್ಧರಿಸಿದೆ.

ಸಚಿವ ಸಂಪುಟದ ಮುಂದೆ ಕಡತ
ಬಿಜೆಪಿ ಸರಕಾರದ ಕೊನೆಯ ಆರು ತಿಂಗಳುಗಳ ಅವಧಿಯಲ್ಲಿ ಸಂಘ ಪರಿವಾರ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ನೀಡಿರುವ ಭೂ ಮಂಜೂರಾತಿ ದಾಖಲೆಗಳನ್ನು ಸಚಿವ ಸಂಪುಟದ ಮುಂದೆ ಮಂಡಿಸುವಂತೆ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಶುಕ್ರವಾರ ತಿಳಿಸಿದರು.
ಕೆಲವು ಸಂಸ್ಥೆಗಳಿಗೆ ತರಾತುರಿಯಲ್ಲಿ ಭೂಮಿ ಹಂಚಿಕೆ ಮಾಡಲಾಗಿದೆ. ಭೂ ಮಂಜೂರಾತಿ ನ್ಯಾಯ ಸಮ್ಮತವಾಗಿದೆಯೇ, ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬುದನ್ನು ಪರಿಶೀಲಿಸಲಾಗುವುದು. ಯಾವುದೇ ಸಂಘಟನೆ ಆಗಿರಲಿ, ಸರಿಯಾದ ಉದ್ದೇಶಕ್ಕೆ ಬಳಸುತ್ತಿದ್ದಾರೆಯೇ ಎಂಬುದು ಮುಖ್ಯ. ಸದುದ್ದೇಶವಾಗಿದ್ದರೆ ಗೌರವಿಸಬೇಕಾಗುತ್ತದೆ, ಶಿಕ್ಷಣ ಸಂಸ್ಥೆಯಾಗಿದ್ದರೆ ಸೇವಾ ಹಿನ್ನೆಲೆ ನೋಡಬೇಕಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದರು.

ಕಾನೂನು ಉಲ್ಲಂಘನೆ
ಈ ಮಧ್ಯೆ ಪ್ರತ್ಯೇಕವಾಗಿ ಮಾತನಾಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌, ತಮ್ಮ ಪಕ್ಷ ಹಾಗೂ ಪಕ್ಷದ ಸಿದ್ಧಾಂತ ಬೆಳವಣಿಗೆಗಾಗಿ ಬಿಜೆಪಿಯವರು ಕಾನೂನು ಉಲ್ಲಂ ಸಿ ಭೂಮಿ ನೀಡಿರುವುದು ಸತ್ಯ. ಸಿಎಂ ಹಾಗೂ ಕಂದಾಯ ಸಚಿವರು ಈ ಬಗ್ಗೆ ಗಮನ ಹರಿಸಲಿದ್ದಾರೆ ಎಂದರು.
ಬಿಜೆಪಿ ಸರಕಾರ ಕೋಟ್ಯಂತರ ರೂ. ಬೆಲೆ ಬಾಳುವ ಸರಕಾರಿ ಭೂಮಿಯನ್ನು ಅತ್ಯಂತ ಕಡಿಮೆ ದರದಲ್ಲಿ ಆರೆಸ್ಸೆಸ್‌ ಹಾಗೂ ಸಂಘ ಪರಿವಾರದ ಸಂಸ್ಥೆಗಳಿಗೆ ಮಂಜೂರು ಮಾಡಿದೆ. ಇದು ಬಹಿರಂಗಗೊಳ್ಳಬೇಕಿದೆ. ಹಿಂದಿನ ಸರಕಾರ ಏನು ಮಾಡಿದೆ ಎಂಬುದು ರಾಜ್ಯದ ಜನರಿಗೆ ಗೊತ್ತಾಗಬೇಕಿದೆ ಎಂದರು.

Advertisement

ಚಾಮರಾಜನಗರ ಆಮ್ಲಜನಕ ದುರಂತ ಮರು ತನಿಖೆ
ಬೆಂಗಳೂರು: ಚಾಮರಾಜನಗರ ಆಮ್ಲಜನಕ ದುರಂತ ಸೇರಿದಂತೆ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಕೊರೊನಾ ಹಾವಳಿಯ ವೇಳೆ ನಡೆದಿರುವ ಕೆಲವು ಪ್ರಕರಣಗಳನ್ನು ಮರು ತನಿಖೆಗೆ ಒಳಪಡಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕದ ಅಭಾವದಿಂದಾಗಿ 30ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದರು. ಆಗ ನಡೆದಿದ್ದ ತನಿಖೆ ಅಪೂರ್ಣವಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಜಂಟಿಯಾಗಿ ಮರು ತನಿಖೆ ನಡೆಸಬೇಕಾಗಿದೆ ಎಂದು ತಿಳಿಸಿದರು.

ಕೊರೊನಾ ಸಂದರ್ಭದಲ್ಲಿ ಕರೆಯಲಾಗಿದ್ದ ಅನೇಕ ಟೆಂಡರ್‌ಗಳ ವಿಚಾರವಾಗಿಯೂ ತನಿಖೆ ನಡೆಸಬೇಕಾ ಗಿದೆ. ಹಿಂದಿನ ಬಿಜೆಪಿ ಸರಕಾರದ ಕೊನೆಯ ಅವಧಿಯಲ್ಲಿ ಆರೋಗ್ಯ ಇಲಾಖೆ ಕರೆದಿದ್ದ ಟೆಂಡರ್‌ಗಳನ್ನು ರದ್ದು ಪಡಿಸಲು ಕೂಡ ತೀರ್ಮಾನಿಸಲಾಗಿದೆ ಎಂದರು.

ಸಂಘ ಪರಿವಾರಕ್ಕೆ ಎಲ್ಲೆಲ್ಲಿ ಭೂ ಮಂಜೂರಾತಿ….
n ರಾಷ್ಟ್ರೋತ್ಥಾನ ಪರಿಷತ್‌: ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಹೆಸರಘಟ್ಟ ಹೋಬಳಿಯ ಹುರುಳಿಚಿಕ್ಕನಹಳ್ಳಿ ಗ್ರಾಮದಲ್ಲಿ 9.32 ಎಕರೆ ಗೋಮಾಳ ಮಂಜೂರು. ಕಲಬುರಗಿ, ಹೊಸಪೇಟೆಯಲ್ಲಿ ಭೂಮಿ ಮಂಜೂರು.
ದೇವನಹಳ್ಳಿ ಬಳಿ ಏರೋಸ್ಪೇಸ್‌ ಮತ್ತು ರಕ್ಷಣ ಕೈಗಾರಿಕೆಗಳಿಗೆ ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯಲ್ಲಿ ಚಾಣಕ್ಯ ವಿ.ವಿ.ಗೆ 116 ಎಕರೆ ಭೂಮಿ ಹಂಚಿಕೆ ಆರೋಪ.
n ಕುರುಬರಹಳ್ಳಿಯಲ್ಲಿ ಜನಸೇವಾ ಟ್ರಸ್ಟ್‌ಗೆ 10 ಎಕರೆ ಮೂರು ಗುಂಟೆ
n ಚಾಮರಾಜನಗರ ಕಸಬಾ ಹೋಬಳಿಯ ಯಡಪುರ ಗ್ರಾಮದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ಗೆ ಐದು ಎಕರೆ ಭೂಮಿ.
n ಹಿರೇಮಗಳೂರು ಗ್ರಾಮದಲ್ಲಿ ರಾಷ್ಟ್ರೋತ್ಥಾನಕ್ಕೆ 6 ಎಕರೆ ಜಮೀನು ಗುತ್ತಿಗೆಗೆ.
n ಯಲ್ಲಾ ಪುರ ಗ್ರಾಮದಲ್ಲಿ ಬುಡಕಟ್ಟು ಜನಾಂಗದ ವಿದ್ಯಾರ್ಥಿ ನಿಲಯ ನಿರ್ಮಿಸಲು ವನವಾಸಿ ಕಲ್ಯಾಣ ಸಂಸ್ಥೆಗೆ 1 ಎಕರೆ.
n ಹಾವೇರಿ ಜಿಲ್ಲೆ ದೇವಗಿರಿಯಲ್ಲಿ ರಾಷ್ಟ್ರೋತ್ಥಾನಕ್ಕೆ 10 ಎಕರೆ ಜಮೀನು.

ಸಂಘ ಸಂಸ್ಥೆಗಳಿಗೆ ಸರಕಾರಿ ಭೂಮಿ ಮಂಜೂರು ಮಾಡುವ ಮುನ್ನ ಸಚಿವ ಸಂಪುಟದಲ್ಲಿ ಚರ್ಚಿಸಿಯೇ ತೀರ್ಮಾನಿಸಲಾಗಿದೆ. ಯಾವುದೂ ಕಾನೂನುಬಾಹಿರ ಅಲ್ಲ. ಸಂಘ ನಡೆಸುವ ಶೈಕ್ಷಣಿಕ ಮತ್ತಿತರ ಸಾಮಾಜಿಕ ಚಟುವಟಿಕೆಗಳಿಗಾಗಿ ಭೂಮಿ ಮಂಜೂರು ಮಾಡಲಾಗಿದೆ. ಬಿಜೆಪಿ, ಸಂಘವನ್ನು ಟೀಕಿಸುವ ಭರದಲ್ಲಿ ಇಂತಹ ಕೆಲಸಕ್ಕೆ ಕೈ ಹಾಕುವುದು ಸರಿಯಲ್ಲ.
-ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next