ಕೋಲಾರ: ಏಷ್ಯಾದ ಎರಡನೇ ಅತಿ ದೊಡ್ಡ ಮಾರುಕಟ್ಟೆ ಹಾಗೂ ಅತಿ ಹೆಚ್ಚು ತರಕಾರಿ ಮತ್ತು ಟೊಮೆಟೋ ಬರುವ ಮಾರುಕಟ್ಟೆಗೆ ಜಾಗದ ಕೊರತೆಯಿರುವುದರಿಂದ 50 ಎಕರೆ ಜಮೀನನ್ನು ಮಂಜೂರು ಮಾಡಿ ಮಾರುಕಟ್ಟೆಗೆ ಸೂಕ್ತವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ರೈತರಿಗೆ ಅನುಕೂಲ ಮಾಡಿ ಮಾರುಕಟ್ಟೆಯನ್ನು ಅಭಿವೃದ್ಧಿ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ಕೃಷಿ ಉತ್ಪನ್ನ ಮಾರುಕಟ್ಟೆಯ ಮುಂದೆ ಪ್ರತಿಭಟನೆ ನಡೆಸಿ ಸಹಾಯಕ ಕಾರ್ಯದರ್ಶಿ ರವಿಕುಮಾರ್ ಅವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಪ್ರತಿಭಟನೆ: ರೈತರಿಂದ ರಾಷ್ಟ್ರೀಯ ಹೆದ್ದಾರಿಯೂ 3-4 ಬಾರಿ ಬಂದ್ ಸಹ ನಡೆದಿದೆ. ಕಳೆದ ವರ್ಷ ಅವಕ ಹೆಚ್ಚಾಗಿದ್ದರಿಂದ ಸ್ಥಳದ ಸಮಸ್ಯೆ ಮತ್ತು ವಾಹನಗಳಿಗೆ ರಸ್ತೆಯಲ್ಲೇ ನಿಲ್ಲಿಸಿ ಟೊಮೆಟೋ ಲೋಡ್ ಮಾಡುವುದರಿಂದ ಮಧ್ಯಾಹ್ನ ಮಾರುಕಟ್ಟೆಗೆ ಬರುವ ತರಕಾರಿ ಜಾಗದ ಸಮಸ್ಯೆಯಿಂದ ಸರಿಯಾದ ಬೆಲೆ ಸಿಗದೆ ರೈತರು ತಮ್ಮ ತರಕಾರಿಯನ್ನು ರಾಷ್ಟ್ರೀಯ ಹೆದ್ದಾರಿಗೆ ಸುರಿದು ಪ್ರತಿಭಟನೆ ಮಾಡಿದ್ದರೂ, ಜಿಲ್ಲಾಡಳಿತ ಸೂಕ್ತ ಜಾಗದ ವ್ಯವಸ್ಥೆ ಮಾಡದೇ ಕಾಲಹರಣ ಮಾಡುತ್ತಿದ್ದಾರೆ. ಡೀಸಿ ಯಾಗಿದ್ದ ತ್ರಿಲೋಕ್‌ಚಂದ್ರ ಮಾರುಕಟ್ಟೆಗೆ ಭೇಟಿ ನೀಡಿ ರೈತರು, ಅಧಿಕಾರಿಗಳ ಸಭೆ ನಡೆಸಿ 6 ತಿಂಗಳಲ್ಲಿ ಟೊಮೆಟೋ ಮಾರುಕಟ್ಟೆಗೆ ಪರ್ಯಾಯ ಜಾಗ ಮಾಡುವುದಾಗಿ ಹೇಳಿ, ಈ ಜವಾಬ್ದಾರಿಯನ್ನು ತಹಶೀಲ್ದಾರ್ ವಿಜಯಣ್ಣ ಅವರಿಗೆ ವಹಿಸಿ ವರ್ಷಕಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಪಕ್ಕದ ರಾಜ್ಯಪಾಲಾಗುವ ಸಾಧ್ಯತೆ: ನೆಪಮಾತ್ರಕ್ಕೆ ವಕ್ಕಲೇರಿ ಬಳಿ 40 ಎಕರೆ ಜಮೀನನ್ನು ಗುರುತಿಸಿದ್ದೇವೆಂದು ಹೇಳಿದ್ದಾರೆ, ಹೊರತು ಇದುವರೆಗೂ ಮಾರುಕಟ್ಟೆಯ ಬಗ್ಗೆ ಚಕಾರವೆತ್ತಿಲ್ಲ. ಜಿಲ್ಲಾಡಳಿತ ಸೂಕ್ತ ಜಾಗವನ್ನು ಗುರುತಿಸಿ ತರಕಾರಿ ಮತ್ತು ಟೊಮೆಟೋ ಜಾಗವನ್ನು ಬೇರೆ ಬೇರೆ ಮಾಡದೇ ಹೋದರೆ ಮಾರುಕಟ್ಟೆ ಪಕ್ಕದ ಆಂದ್ರ ರಾಜ್ಯಕ್ಕೆ ವರ್ಗಾವಣೆಯಾಗುವ ಬೀತಿಯೂ ಎದ್ದು ಕಾಣುತ್ತಿದೆ ಮಾರುಕಟ್ಟೆ ಸ್ಥಳವಕಾಶ ನೀಡದೇ ಇದ್ದರೇ ಇದರ ಲಾಭ ಪಡೆಯಲು ಪಕ್ಕದ ರಾಜ್ಯದವರು ಜಿಲ್ಲೆಯ ತರಕಾರಿ ಬೆಳೆಗಾರರಿಗೆ ಗುಣಮಟ್ಟದ ಮಾರುಕಟ್ಟೆ ಕಲ್ಪಿಸಲು ಚಿಂತಿಸುತ್ತಿದ್ದಾರೆ ಇದು ನಡೆದರೆ ಸರ್ಕಾರಕ್ಕೆ ಬರುವ ಕೋಟ್ಯಾಂತರ ರೂ. ಆದಾಯ ಕೈ ತಪ್ಪುವ ಸಾಧ್ಯತೆಯಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಹೆದ್ದಾರಿ ಬಂದ್ ಎಚ್ಚರಿಕೆ: ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯ ರೈತರಿಗೆ ಸಾಗಾಣಿಕೆ ಮತ್ತು ಮಾರುಕಟ್ಟೆ ದುಬಾರಿಯಾಗಿದೆ. ಟೊಮೆಟೋ ಅವಕ ಹೆಚ್ಚಾಗುವ ಸಾದ್ಯತೆಯಿದ್ದು, ಕೂಡಲೇ ಮಾರುಕಟ್ಟೆಗೆ ಭೇಟಿ ನೀಡಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಭೆ ಕರೆದು ಟೊಮೆಟೋ ಮಾರುಕಟ್ಟೆಗೆ 50 ಎಕರೆ ಜಮೀನನ್ನು ಮಂಜೂರು ಮಾಡಿಕೊಟ್ಟು ಮುಂದೆ ಆಗುವ ಮಾರುಕಟ್ಟೆಯಲ್ಲಿನ ಅನಾಹುತಗಳನ್ನು ತಪ್ಪಿಸಬೇಕಿದೆ. ಜತೆಗೆ, ಮಾರುಕಟ್ಟೆಯಲ್ಲಿ ಸಿಸಿ ಕ್ಯಾಮೆರಾ, ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಮಾರುಕಟ್ಟೆಯ ಶುಲ್ಕವನ್ನು ಪಾವತಿಸದ ಮಂಡಿ ಮಾಲೀಕರ ಪರವಾನಗಿಯನ್ನು ರದ್ದು ಮಾಡಬೇಕು ಹಾಗೂ ಎಲ್ಲಾ ಪರವಾನಗಿದಾರರು ಕಡ್ಡಾಯವಾಗಿ ತಮ್ಮ ಪರವಾನಗಿಯ ಸಂಖ್ಯೆಯನ್ನು ಅಂಗಡಿಯ ಮುಂದೆ 10×10 ಅಳತೆಯಲ್ಲಿ ಬರೆಯಿಸಬೇಕು. ಹಾಗೂ ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡಲು ಠೇವಣಿ ಅಧಾರಿತವಾಗಿ ಸಮಸ್ಯೆ ನಿವಾರಣೆ ಮಾಡಬೇಕು. ಮಾರುಕಟ್ಟೆಗೆ 15 ದಿನದೊಳಗೆ ಜಮೀನು ಗುರುತಿಸದೇ ಹೋದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದರು.
Advertisement
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಜಿಲ್ಲೆಯ ಮಾರುಕಟ್ಟೆಯಲ್ಲಿ ಅತ್ಯಧಿಕವಾಗಿ ತರಕಾರಿಗಳು ಬರುವುದರಿಂದ ಜಾಗದ ಕೊರತೆಯಿಂದ ಟೊಮೆಟೋ ಬೆಳೆಗಾರರಿಗೆ ಹಾಗೂ ಖರೀದಿದಾರರಿಗೆ ತುಂಬಾ ತೊಂದರೆಯಾಗುತ್ತಿದೆ. ಅತಿ ಹೆಚ್ಚು ವಾಣಿಜ್ಯ ಬೆಳೆಗಳನ್ನು ಬೆಳೆಯುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟೊಮೋಟೋ ಪ್ರಮುಖ ಬೆಳೆಯಾಗಿರುವುದರಿಂದ ಅತಿ ಹೆಚ್ಚಾಗಿ ಅಂದರೆ ಶೇ.95 ರಷ್ಟು ಟೊಮೆಟೋ ಬೆಳೆ ಬೆಳೆದು ದೇಶ ಮತ್ತು ಹೊರದೇಶಕ್ಕೆ ರಪ್ತು ಮಾಡುವ ಮಾರುಕಟ್ಟೆಯಾಗಿದೆ. ಮಾರ್ಚ್‌ನಿಂದ ಸಪ್ಟೆಂಬರ್‌ವರೆಗೂ ಪ್ರತಿನಿತ್ಯ ನೂರಾರು ವಾಹನಗಳ ಸಂಚಾರವಿರುತ್ತದೆ. ಅದರ ಜೊತೆಗೆ ಇನ್ನಿತರ ಹತ್ತಾರು ತರಕಾರಿ ವಾಹನಗಳು ಲೋಡ್‌ಗಟ್ಟಲೇ ಮಾರುಕಟ್ಟೆಗೆ ಆವಕವಾಗುವುದರಿಂದ ತರಕಾರಿ ಮತ್ತು ಟೊಮೆಟೋ ಮಂಡಿ ಮಾಲೀಕರಿಗೆ ಹಾಗೂ ರೈತರಿಗೆ ವ್ಯಾಪರಸ್ಥರಿಗೆ ಪ್ರತಿನಿತ್ಯ ಜಗಳವಾಡುವಂತಾಗಿದೆ ಎಂದು ಆರೋಪಿಸಿದರು.
Related Articles
Advertisement
ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ, ಮಹಿಳಾ ಘಟಕ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ವಕ್ಕಲೇರಿ ಹನುಮಯ್ಯ, ಮಂಗಸಂದ್ರ ನಾಗೇಶ್, ಆಶ್ವತಪ್ಪ, ನಾರಾಯಣಸ್ವಾಮಿ, ಪುರುಷೋತ್ತಮ್, ಎಂ.ಹೊಸಹಳ್ಳಿ ಚಂದ್ರಪ್ಪ, ಕೆಂಬೋಡಿ ಕೃಷ್ಣೇಗೌಡ, ಪುತ್ತೇರಿ ರಾಜು, ಬೇತಮಂಗಲ ಮಂಜು, ನವೀನ್, ವೆಂಕಟೇಶಪ್ಪ ಇತರರು ಹಾಜರಿದ್ದರು.
ಮಾರುಕಟ್ಟೆ ಜಾಗದ ಕೊರತೆಯ ಬಗ್ಗೆ ಜಿಲ್ಲಾಕಾರಿಗಳಿಗೆ ವರದಿಯನ್ನು ನೀಡಿದ್ದೇವೆ. ಅದರ ಜೊತೆಗೆ ಚೆಲುವನಹಳ್ಳಿ ಮತ್ತು ವಕ್ಕಲೇರಿಯ ಬಳಿ ಜಾಗವನ್ನು ಗುರುತಿಸಿದ್ದಾರೆ. ಇದು ಅರಣ್ಯ ಇಲಾಖೆಗೆ ಸೇರುವ ಜಾಗವಾಗಿರುವುದರಿಂದ ಕಾನೂನಿನ ಪ್ರಕಾರ ವಶಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಜೊತೆಗೆ ಈಗಾಗಲೇ 2 ಎಕರೆ ಇಪ್ಕೋ ಟೋಕಿಯಾ ಜಾಗವನ್ನು ತರಕಾರಿಗೆ ನೀಡಿದ್ದೇವೆ ಹಾಗೂ ಮಾರುಕಟ್ಟೆ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಸ್ವ ಚ್ಛತೆಯನ್ನು ನಿರ್ಲಕ್ಷ್ಯ ಮಾಡುತ್ತಿರುವ ಟೆಂಡರ್‌ದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ಕಾರ್ಯದರ್ಶಿ ರವಿಕುಮಾರ್ ಭರವಸೆ ನೀಡಿದರು.