ಬೆಂಗಳೂರು: ಭೂಸ್ವಾಧೀನ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರಿಗೆ 11 ಲಕ್ಷ ರೂ. ದಂಡ ವಿಧಿಸಿರುವ ಹೈಕೋರ್ಟ್, ಅದನ್ನು ಎಂಟು ವಾರಗಳಲ್ಲಿ ಪಾವತಿಸುವಂತೆ ಶುಕ್ರವಾರ ಮಹತ್ವದ ಆದೇಶ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ಣ ಪ್ರಜ್ಞಾ ಹೌಸಿಂಗ್ ಬಿಲ್ಡಿಂಗ್ ಕೋಅಪರೇಟಿವ್ ಸೊಸೈಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ವಿಚಾರಣೆ ನಡೆಸಿ ಪೂರ್ಣ ಪ್ರಜ್ಞಾ ಹೌಸಿಂಗ್ ಬಿಲ್ಡಿಂಗ್ ಕೋಅಪರೇಟಿವ್ ಸೊಸೈಟಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಪೀಠ, ಮಾಜಿ ಶಾಸಕ ಎಂ. ಶ್ರೀನಿವಾಸ್ ಅವರಿಗೆ 11 ಲಕ್ಷ ರೂ. ದಂಡ ವಿಧಿಸಿದೆ. ಇದರಲ್ಲಿ ಸೊಸೈಟಿಗೆ 2 ಲಕ್ಷ, 16 ಮಂದಿ ಅರ್ಜಿದಾರರಿಗೆ ತಲಾ 50 ಸಾವಿರ ರೂ. ಹಾಗೂ ಬಿಡಿಎಗೆ ಒಂದು ಲಕ್ಷ ರೂ. ದಂಡ ಪಾವತಿಸುವಂತೆ ನಿರ್ದೇಶನ ನೀಡಿದೆ.
ಇದೇ ವೇಳೆ ಪೂರ್ಣ ಪ್ರಜ್ಞ ಬಡಾವಣೆಗೆ ಸಂಬಂಧಿಸಿದ ಭೂಸ್ವಾಧೀನವನ್ನು ರದ್ದುಗೊಳಿಸಿ ಮಾಜಿ ಶಾಸಕ ಎಂ. ಶ್ರೀನಿವಾಸ್ ಪರ 2016ರ ಜು.15ರಂದು ಹೈಕೋರ್ಟ್‌ನ ಸಹವರ್ತಿ ಪೀಠ (ಕೋ ಆರ್ಡಿನೇಟ್ ಬೆಂಚ್) ನೀಡಿದ್ದ ತೀರ್ಪನ್ನು ನ್ಯಾ. ದೀಕ್ಷಿತ್ ಅವರ ನ್ಯಾಯಪೀಠ ಮರುಪರಿಶೀಲಿಸಿದೆ.
ತೀರ್ಪಿನಲ್ಲಿ ಮಾಜಿ ಶಾಸಕ ಎಂ. ಶ್ರೀನಿವಾಸ್ ವಿರುದ್ಧ ಕಾನೂನು ಚಾಟಿ ಬೀಸಿರುವ ನ್ಯಾಯಪೀಠ, ಈ ಅರ್ಜಿಯ ಪ್ರತಿವಾದಿ ಎಂ. ಶ್ರೀನಿವಾಸ್ ಅವರು ಈ ಹಿಂದೆ ತಾವು ಸಲ್ಲಿಸಿದ್ದ ಅರ್ಜಿಯಲ್ಲಿ ಸೊಸೈಟಿ, ನಿವೇಶನ ಹಂಚಿಕೆದಾರರು, ಬಿಡಿಎ ಹಾಗೂ ಮುಖ್ಯವಾಗಿ ನ್ಯಾಯಾಲಯವನ್ನು ವಂಚಿಸಿ ಪಡೆದುಕೊಂಡಿದ್ದ ತೀರ್ಪನ್ನು ವಾಪಸ್ ಪಡೆಯಲಾಗಿದೆ.
ಈ ವಿಚಾರದಲ್ಲಿ ಶ್ರೀನಿವಾಸ್ ತಮ್ಮ ಪ್ರಭಾವ ಬಳಸಿಕೊಂಡು ಕೋರ್ಟ್‌ನ್ನು ದುರುಪಯೋಗ ಪಡಿಸಿಕೊಂಡಿದ್ದಲ್ಲದೆ, ನ್ಯಾಯಾಂಗವನ್ನೇ ವಂಚಿಸಿದ್ದಾರೆ. ಏಕಪಕ್ಷೀಯವಾಗಿ ತೀರ್ಪು ಪಡೆದುಕೊಂಡಿದ್ದಾರೆ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ. ಹೈಕೋರ್ಟ್‌ನ ಈ ಆದೇಶದಿಂದ ಪೂರ್ಣಪ್ರಜ್ಞ ಬಡಾವಣೆಗೆ ಮಾಡಿದ್ದ ಭೂಸ್ವಾಧೀನ ಊರ್ಜಿತವಾಗಲಿದೆ.