Advertisement

ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ

06:52 AM Jan 19, 2019 | Team Udayavani |

ಹುಣಸೂರು: ಮಂಡ್ಯ ಜಿಲ್ಲೆಯ ಪಶ್ಚಿಮವಾಹಿನಿಯಿಂದ ಕೊಡಗಿನವರೆಗಿನ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಶೀಘ್ರದಲ್ಲೇ ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದ್ದು, ರಸ್ತೆ ನಿರ್ಮಾಣದಿಂದಾಗಿ ಈ ಭಾಗದಲ್ಲಿ ಉದ್ಯಮ ಸ್ಥಾಪಿಸಲು ವಿಪುಲ ಅವಕಾಶದ ಜೊತೆಗೆ ರೈತರಿಗೂ ಸಾಕಷ್ಟು ಅನುಕೂಲವಾಗಲಿದೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.

Advertisement

ತಾಲೂಕಿನ ಗಾವಡಗೆರೆ ಹೋಬಳಿಯ ಹಿರಿಕ್ಯಾತನಹಳ್ಳಿಯಲ್ಲಿ ನರೇಗಾ ಯೋಜನೆಯಡಿ ನಡೆದಿರುವ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಹೆದ್ದಾರಿಯು ತಾಲೂಕಿನ ಹಳೇರಾಮೇನಹಳ್ಳಿ, ಕಟ್ಟೆಮಳಲವಾಡಿ, ಹಾಳಗೆರೆ, ಪಿರಿಯಾಪಟ್ಟಣ ಮಾರ್ಗವಾಗಿ ಕೊಡಗಿಗೆ ಸಂಪರ್ಕ ಕಲ್ಪಿಸಲಾಗಿದೆ.

ಪಿರಿಯಾಪಟ್ಟಣ, ಕೊಪ್ಪ, ಕುಶಾಲನಗರ, ಶುಂಠಿಕೊಪ್ಪಗಳಲ್ಲಿ ಬೈಪಾಸ್‌ ನಿರ್ಮಿಸಲು ಕ್ರಮವಹಿಸಲಾಗಿದ್ದು, ಈ ಭಾಗದ ಅಭಿವೃದ್ಧಿಗೊಳ್ಳುವ ಜೊತೆಗೆ ಬೈಪಾಸ್‌ ಆಸುಪಾಸಿನಲ್ಲೂ ಸ್ಥಳೀಯರಿಗೆ ಹೊಸ ಉದ್ಯಮ ಸೃಷ್ಟಿಸಲು ಅವಕಾಶ ಸಿಗಲಿದೆ ಎಂದರು.   

ಭೂ ಪರಿಹಾರ: ಎಚ್‌.ಡಿ. ದೇವೇಗೌಡರು ಅಧಿಕಾರದಲ್ಲಿದ್ದ ವೇಳೆ ಆರಂಭವಾದ ನೈಸ್‌ ರಸ್ತೆ ಆರಂಭಗೊಂಡು 23 ವರ್ಷವೇ ಕಳೆದಿವೆ. ನಿರೀಕ್ಷೆಯಂತೆ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಆದರೆ, ದಲ್ಲಾಳಿಗಳ  ಜೇಬು ಭರ್ತಿಯಾಯಿತು. ಇದನ್ನು ಮನಗಂಡ ತಾವು  ಬೆಂಗಳೂರು-ಮೈಸೂರು ಹತ್ತು ಪಥದ ರಸ್ತೆಗೆ ಭೂಮಿ ನೀಡಿದ ರೈತರಿಗೆ ನೇರವಾಗಿ ಪ್ರತಿ ಎಕರೆಗೆ 15 ರಿಂದ 25 ಲಕ್ಷ ರೂ.ವರೆಗೆ ಪರಿಹಾರ ನೀಡಲಾಗುತ್ತಿದ್ದು, 2021ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೀನ ದಯಾಳ್‌ ಉಪಾಧ್ಯಾಯ ಯೋಜನೆಯಡಿ ನಿರಂತರ ಜ್ಯೋತಿ ಕಲ್ಪಿಸುವ ಜೊತೆಗೆ ವಸತಿ ರಹಿತರ ಸರ್ವೆ ನಡೆಸಿ, ಕ್ರಿಯಾಯೋಜನೆ ತಯಾರಿಸಲಾಗಿದ್ದು,, ಬೇಡಿಕೆ ಇರುವಷ್ಟು ಮನೆ ಮಂಜೂರು ಮಾಡಲಾಗುವುದು ಎಂದರು.

Advertisement

ಎಲ್ಲಿಗೆ ಎಷ್ಟು ಅನುದಾನ: ನರೇಗಾ ಯೋಜನೆಯಡಿ ತಾಲೂಕಿನ ಬಿಳಿಗೆರೆ ಗ್ರಾಪಂಯ ಮಾರಗೌಡನಹಳ್ಳಿಯಲ್ಲಿ 44.3 ಲಕ್ಷ ರೂ.ವೆಚ್ಚದ ರಸ್ತೆ-ಚರಂಡಿ, ಬಿಳಿಗೆರೆ 61.7 ಲಕ್ಷ ರೂ. ರಸ್ತೆ-ಚರಂಡಿ ಮತ್ತು 14ನೇ ಹಣಕಾಸು ಯೋಜನೆಯಡಿ 20 ಲಕ್ಷ ರೂ.ವೆಚ್ಚದ ರಾಜೀವಗಾಂಧಿ ಸೇವಾಕೇಂದ್ರ ಮತ್ತು ಅಂಗನವಾಡಿ ಕೇಂದ್ರಕ್ಕೆ 5 ಲಕ್ಷ ರೂ.,

ಹಿರಿಕ್ಯಾತನಹಳ್ಳಿ ರಸ್ತೆ-ಚರಂಡಿ ಕಾಮಗಾರಿಗೆ 69 ಲಕ್ಷ ರೂ., ತಟ್ಟೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉದ್ಯಾನವನ ಹಾಗೂ ಗ್ರಾಮಪರಿಮಿತಿಯಲ್ಲಿ ರಸ್ತೆ-ಚರಂಡಿ ನಿರ್ಮಾಣಕ್ಕೆ 39 ಲಕ್ಷ ರೂ. ವಿನಿಯೋಗಿಸಲಾಗಿದೆ ಎಂದು ತಾಲೂಕು ಪಂಚಾಯ್ತಿ ಇಒ ಕೃಷ್ಣಕುಮಾರ್‌ ಮಾಹಿತಿ ನೀಡಿದರು.

ಈ ವೇಳೆ ಜಿಪಂ ಸದಸ್ಯೆ ಸಾವಿತ್ರಿ, ಗ್ರಾಪಂ ಅಧ್ಯಕ್ಷೆ ಶಿಲ್ಪಾ, ಮಾಜಿ ಅಧ್ಯಕ್ಷ ಶ್ರೀಧರ್‌, ಪಿಡಿಒ ಶ್ರೀನಿವಾಸ್‌, ಸದಸ್ಯರಾದ ಸ್ವಾಮಿಗೌಡ, ಮಹೇಶ್‌, ದಿನೇಶ, ರೂಹಿಬಾನು, ಭಾಗ್ಯಮ್ಮ, ತಮ್ಮೇಗೌಡ, ಯ.ಜಗದೀಶ್‌, ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಎಸ್‌.ಯೋಗಾನಂದಕುಮಾರ್‌, ಮಾಜಿ ಅಧ್ಯಕ್ಷ ಹನಗೋಡು ಮಂಜುನಾಥ್‌, ಕೃಷ್ಣಕುಮಾರ್‌, ಮುಖಂಡರಾದ ಕೆ.ಟಿ.ಗೋಪಾಲ್‌, ಸತೀಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next