ಸುರತ್ಕಲ್: ಹಸಿರು ವಲಯಕ್ಕೆ ಭೂಸ್ವಾಧೀನ ಕಾರ್ಯವನ್ನು ಮುಂದಿನ 15 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಆದೇಶಿಸಿದರು.
ಎಂಆರ್ ಪಿಎಲ್ ಮೂರನೇ ಹಂತದ ಕೋಕ್ ಸಲ್ಫರ್ ಘಟಕದಿಂದ ಜೋಕಟ್ಟೆ ಪರಿಸರದಲ್ಲಿ ಉಂಟಾಗಿರುವ ಪರಿಸರ ಮಾಲಿನ್ಯ ಬಗೆಹರಿಸಲು ಸರಕಾರ ನೇಮಿಸಿರುವ ಸಮಿತಿಯ ಸಭೆ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯವಾಗಿ 27 ಎಕರೆ ಭಾದಿತ ಪ್ರದೇಶದಲ್ಲಿ ಕಂಪೆನಿ ನಡೆಸಬೇಕಿರುವ ಹಸಿರು ವಲಯಕ್ಕೆ ಭೂಸ್ವಾಧೀನದಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು. ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರು, ಸರಕಾರದ ಆದೇಶ ಹೊರಟು ನಾಲ್ಕು ವರ್ಷ ಸಂದರೂ ಹಸಿರು ವಲಯಕ್ಕೆ ಭಾದಿತ ಪ್ರದೇಶದ ಭೂಮಿ ಗುರುತಿವಲ್ಲಿ ಅಧಿಕಾರಿಗಳಯ ವಿಫಲರಾಗಿರುವ ಕುರಿತು ಮಾತನಾಡಿದಾಗ, ಸಚಿವರು ತಕ್ಷಣವೇ ತಾರತಮ್ಯವಿಲ್ಲದೆ ಹೆಚ್ಚು ಭಾದಿತ ಪ್ರದೇಶದ ಭೂಮಿ ಗುರುತು ಮಾಡಿ, ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡಬೇಕು, ಯಾವುದೇ ರಾಜಕೀಯ ಪ್ರಭಾವಗಳಿಗೆ ಒಳಗಾಗಬಾರದು ಎಂದು ಸೂಚಿಸಿದರು.
ಕಂಪೆನಿ ಹಾಗೂ ಅಧಿಕಾರಿಗಳ ಮಾತುಗಳನ್ನು ಆಲಿಸಿದ ಉಸ್ತುವಾರಿ ಸಚಿವರು ಹದಿನೈದು ದಿನಗಳ ಕಾಲಮಿತಿ ಒಳಗಡೆ ಹಸಿರು ವಲಯಕ್ಕೆ ಭೂಮಿ ಗುರುತಿಸುವ ಕಾರ್ಯ ಪೂರ್ಣ ಗೊಳಿಸುವಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಕರ್ನಾಟಕ ಕೈಗಾರಿಕಾ ಭೂಸ್ವಾಧಿನ ಬೋರ್ಡ್ ನ ಅಧಿಕಾರಿಗಳಿಗೆ ಆದೇಶಿಸಿದರು.
ನಾಗರಿಕ ಹೋರಾಟ ಸಮಿತಿ, ಜೋಕಟ್ಟೆಯ ಮುಖಂಡ ಮುನೀರ್ ಕಾಟಿಪಳ್ಳ ಮಾತನಾಡಿ, ಸರಕಾರದ ಆರು ಅಂಶಗಳ ಪರಿಹಾರದ ಘೋಷಣೆಯ ಹೊರತಾಗಿಯೂ ಕಂಪೆನಿಯ ಸುತ್ತ ಶಬ್ದ, ವಾಯು ಮಾಲಿನ್ಯದಿಂದ ಜನತೆ ಕಂಗೆಟ್ಟಿದ್ದಾರೆ. ಹೆಚ್ಚು ಭಾದಿತ ಪ್ರದೇಶದ ಜನರನ್ನು ಅಲ್ಲಿಂದ ಸ್ಥಳಾಂತರಿಸಿ, ಹಸಿರು ವಲಯ ನಿರ್ಮಾಣ ತಕ್ಷಣವೆ ಆಗಬೇಕಿದೆ. ಹಸಿರು ವಲಯ ನಿರ್ಮಾಣದಲ್ಲಿ ಕಾಲಹರಣ ಸಲ್ಲದು ಎಂದರು.
ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಸಹಾಯಕ ಆಯುಕ್ತ ಮದನ್, ಸಣ್ಣ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು, ಎಮ್ ಆರ್ ಪಿ ಎಲ್ ಪ್ರಧಾನ ವ್ಯವಸ್ಣಾಪಕ ವೆಂಕಟೇಶ್, ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಉಪಸ್ಥಿತರಿದ್ದರು