Advertisement
ಇದೀಗ ರೈತರ ಸಾಲಮನ್ನಾದಿಂದ ಸರ್ಕಾರದ ಬೊಕ್ಕಸದ ಮೇಲಾಗುವ ಹೊರೆಯೂ ಭೂಸ್ವಾಧೀನ ಪ್ಯಾಕೇಜ್ ಮೇಲೆ ಕರಿನೆರಳು ಬೀಳುವಂತೆ ಮಾಡಿದ್ದು, ಇದರಿಂದ ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ ಸೇರಿದಂತೆ ಮೂರನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಿ ನ್ಯಾಯಾಧಿಕರಣದ ಅಂತಿಮ ತೀರ್ಪಿನಲ್ಲಿ ಸಿಕ್ಕಿರುವ 130.90 ಟಿಎಂಸಿ ನೀರು ಬಳಸಿಕೊಳ್ಳುವುದು ಸದ್ಯಕ್ಕಂತೂ ಕಷ್ಟ ಎನ್ನುವಂತಾಗಿದೆ.
2013ರ ಭೂಸ್ವಾಧೀನ ಕಾಯ್ದೆ ಪ್ರಕಾರ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಮಾರ್ಗಸೂಚಿ ದರದ ನಾಲ್ಕು ಪಟ್ಟು ಹಣವನ್ನು ಪರಿಹಾರವಾಗಿ ನೀಡಬೇಕು. ಆದರೆ, ಸ್ವಾಧೀನಪಡಿಸಿಕೊಳ್ಳಲು ಗುರುತಿಸಿರುವ ಭೂಮಿಯ ಪೈಕಿ ಒಂದೊಂದು ಕಡೆ ಒಂದೊಂದು ಮಾರ್ಗಸೂಚಿ ದರ ಇದೆ. ಹೀಗಾಗಿ ಮಾರ್ಗಸೂಚಿ ದರಕ್ಕೆ ನಾಲ್ಕು ಪಟ್ಟು ಹೆಚ್ಚು ಹಣ ಪರಿಹಾರ ನೀಡಿದರೂ ರೈತರ ಮಧ್ಯೆ ತಾರತಮ್ಯ ಮಾಡಿದ ಆರೋಪಕ್ಕೆ ಒಳಗಾಗಬೇಕಾಗುತ್ತದೆ.
Related Articles
Advertisement
ಈ ಕಾರಣಗಳಿಂದಾಗಿ ಭೂಸ್ವಾಧೀನ ಪರಿಹಾರಕ್ಕಾಗಿ ರೂಪಿಸುತ್ತಿರುವ ಪ್ಯಾಕೇಜ್ ಸರ್ಕಾರದ ಪಾಲಿಗೆ ಅತ್ಯಂತ ಜಟಿಲ ಎನ್ನುವಂತಾಗಿದೆ. ಹಾಗಾಗಿಯೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿರುವ ಉನ್ನತ ಮಟ್ಟದ ಸಮಿತಿಗೆ ಪ್ಯಾಕೇಜ್ ಸಿದ್ಧಪಡಿಸಲು ಸಾಧ್ಯವಾಗುತ್ತಿಲ್ಲ.
ಹಣದ ಕೊರತೆಯೂ ಕಾಡುತ್ತಿದೆ:ಇನ್ನೊಂದೆಡೆ ಹಣದ ಕೊರತೆಯೂ ಸರ್ಕಾರವನ್ನು ಕಾಡುತ್ತಿದೆ ಎಂದು ಹೇಳಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿಗಳ ವೆಚ್ಚ ಪರಿಷ್ಕರಣೆ ಮಾಡಲಾಗಿದ್ದು, ಈ ಹಿಂದೆ ಇದ್ದ 17,207 ಕೋಟಿ ರೂ. ಬದಲಾಗಿ ಯೋಜನಾ ಗಾತ್ರ ಸುಮಾರು 51 ಸಾವಿರ ಕೋಟಿ ರೂ. ತಲುಪಿದೆ. ಯೋಜನೆಗೆ ಹುಡ್ಕೊà, ಜೈಕಾದಿಂದ ಸಾಲ ಪಡೆಯಲು ಸರ್ಕಾರ ಚಿಂತನೆ ನಡೆಸುತ್ತಿದೆಯಾದರೂ ಯಾವುದೂ ಅಂತಿಮವಾಗಿಲ್ಲ. ಅದರ ಮೊದಲು ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಬೇಕಿದ್ದು, ಇದಕ್ಕೆ ಸುಮಾರು 50 ಸಾವಿರ ಕೋಟಿ ರೂ. ಬೇಕಾಗುತ್ತದೆ. ಒಂದೇ ಬಾರಿ ಇಷ್ಟು ಪ್ರಮಾಣದ ಹಣದ ಅಗತ್ಯವಿಲ್ಲವಾದರೂ ಪ್ರಕ್ರಿಯೆಗಳು ಪೂರ್ಣಗೊಂಡಂತೆ ಹಂತ ಹಂತವಾಗಿ ಹಣದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ 5 ರಿಂದ 6 ಸಾವಿರ ಕೋಟಿ ರೂ.ಅನ್ನು ಇದ್ಕಕಾಗಿ ಮೀಸಲಿಡಲು ತೀರ್ಮಾನಿಸಲಾಗಿತ್ತು. ಅದರಂತೆ 2017-18ನೇ ಸಾಲಿನಲ್ಲಿ ಹಣ ವೆಚ್ಚ ಮಾಡಲು ಯೋಚಿಸಲಾಗಿತ್ತಾದರೂ ಸಾಲ ಮನ್ನಾದಿಂದ ಬೊಕ್ಕಸದ ಮೇಲಾಗಿರುವ ಹೊರೆಯಿಂದಾಗಿ ಭೂಸ್ವಾಧೀನಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಲು ಅಡ್ಡಿಯಾಗುತ್ತಿದೆ ಎನ್ನಲಾಗಿದೆ. ಸಾಲ ಮನ್ನಾದಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 8165 ಕೋಟಿ ರೂ. ಹೊರೆಯಾಗಿದ್ದು, ಭೂಸ್ವಾಧೀನ ಪ್ಯಾಕೇಜ್‌ಗೆ ಪ್ರಸಕ್ತ ಸಾಲಿನಲ್ಲಿ ಅನುದಾನ ಒದಗಿಸಲು ಕಷ್ಟಸಾಧ್ಯ ಎಂಬ ಅಭಿಪ್ರಾಯ ಆರ್ಥಿಕ ಇಲಾಖೆಯಿಂದ ವ್ಯಕ್ತವಾಗಿದೆ ಎನ್ನಲಾಗಿದೆ. ಈಗಾಗಲೇ ಕೃಷ್ಣ ಮೇಲ್ದಂಡೆ ಯೋಜನೆಯ 3ನೇ ಹಂತದಲ್ಲಿ 9 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಶೇ. 80ರಷ್ಟು ಕಾಮಗಾರಿ ಪೂರ್ಣಗೊಂಡಿವೆ. ಆದರೆ, ಪ್ರಮುಖ ಕಾಮಗಾರಿಯಾಗಿರುವ ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ ಸಾಧ್ಯವಾಗದೇ ಇದ್ದರೆ ಈ ಯೋಜನೆಗಳು ಪೂರ್ಣಗೊಂಡರೂ ನೀರು ಲಭ್ಯವಾಗುವುದಿಲ್ಲ. ಭೂಸ್ವಾಧೀನವಾದರೆ ಎಲ್ಲವೂ ಸುಗಮ
ಕೃಷ್ಣಾ ನ್ಯಾಯಾಧಿಕರಣದ ಅಂತಿಮ ತೀರ್ಪಿನ ಕುರಿತು ಕೇಂದ್ರ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದ ಕೂಡಲೇ ಕಾಮಗಾರಿ ಆರಂಭಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ, ಭೂಸ್ವಾಧೀನ ಪರಿಹಾರ ಪ್ಯಾಕೇಜ್ ಸಿದ್ಧವಾಗದ ಕಾರಣ ಆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ಭೂಮಿ ಸ್ವಾಧೀನವಾದರೆ ನಂತರ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಯಾವುದೇ ಅಡ್ಡಿ ಇಲ್ಲ. ಆದರೆ, ಭೂಸ್ವಾಧೀನ ಪ್ಯಾಕೇಜ್ ಹೇಗೆ ಮತ್ತು ಯಾವಾಗ ಸಿದ್ಧವಾಗುತ್ತದೆ ಎಂಬುದೇ ಸದ್ಯಕ್ಕೆ ಉಳಿದಿರುವ ಪ್ರಶ್ನೆ ಎನ್ನುತ್ತಾರೆ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು. ಅಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿ ಪೈಕಿ ಅತ್ಯಂತ ಮಹತ್ವದ ಕೆಲಸ. ಅದಕ್ಕೆ ಭೂಸ್ವಾಧೀನವಾಗದೆ ಉಳಿದ ಕೆಲಸಗಳು ನಡೆದರೂ ಹೆಚ್ಚು ಪ್ರಯೋಜನವಾಗದು. ಆದ್ದರಿಂದ ಸರ್ಕಾರ ಭೂಸ್ವಾಧೀನ ಪ್ಯಾಕೇಜ್ ಆದಷ್ಟು ಶೀಘ್ರ ಅಂತಿಮಗೊಳಿಸಿದರೆ ಉಳಿದ ಕೆಲಸಗಳಿಗೆ ಇಲಾಖೆ ಸಿದ್ಧವಾಗಿದೆ ಎಂದೂ ಅವರು ಹೇಳುತ್ತಾರೆ. – ಪ್ರದೀಪ್ ಕುಮಾರ್ ಎಂ.