ಚನ್ನಪಟ್ಟಣ: ಸರ್ಕಾರ ಭೂ ಸ್ವಾಧೀನ ಸ್ಥಳಾಂತರ ಕಾಯ್ದೆ ತಿದ್ದುಪಡಿ ಮಸೂದೆ ಜಾರಿ ಮಾಡದಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಮಸೂದೆಯ ಪ್ರತಿಯನ್ನು ಹಾಕುವ ಮೂಲಕ ಪ್ರತಿಭಟಿಸಿದ ರೈತ ಸಂಘದ ಕಾರ್ಯಕರ್ತರು, ಹೊಸ ಮಸೂದೆಯನ್ನು ರೂಪಿಸುವ ಮೂಲಕ ರೈತರ ಜಮೀನು ಕಸಿದುಕೊಳ್ಳಲು ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಅವರು ಇಂತಹ ರೈತ ವಿರೋಧಿ ಮಸೂದೆಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಭೂ ಸ್ವಾಧೀನಕ್ಕೆ ಆಕ್ರೋಶ: ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಎಂ.ರಾಮು ಮಾತನಾಡಿ, 2013ರಲ್ಲಿ ಕೇಂದ್ರ ಸರ್ಕಾರ ಭೂ ಸ್ವಾಧೀನ ಸ್ಥಳಾಂತರ ಪುರ್ನ ವಸತಿಯಲ್ಲಿ ಪಾರದರ್ಶಕ ಹಾಗೂ ನ್ಯಾಯಯುತ ಪರಿಹಾರ ಹಕ್ಕು ಅಧಿನಿಯಮವನ್ನು ರೂಪಿಸಿದೆ. ಭೂ ಸ್ವಾಧೀನಕ್ಕೆ ಒಳಪಟ್ಟ ರೈತರ ಹಕ್ಕುಗಳ ರಕ್ಷಣೆಗೆ ಇದರಿಂದಾಗಿ ಭೂಮಿ ಕಳೆದುಕೊಳ್ಳುವ ರೈತರಿಗೆ ಉತ್ತಮ ಪರಿಹಾರ ಮತ್ತು ಪುರ್ನ ವಸತಿ ಕಲ್ಪಿಸಲು ಸಾಧ್ಯವಾಗಿತ್ತು. ಆದರೆ, ಈ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದು ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಯ್ದೆ ಜಾರಿ ಸರಿಯಲ್ಲ: ಈ ಹಿಂದೆ ಕೇಂದ್ರ ಸರ್ಕಾರ ಇಂತಹ ಮರಣ ಶಾಸನವನ್ನು ರೈತರ ಮೇಲೆ ಏರಲು ಮುಂದಾದಾಗ ರೈತ ಸಂಘ ಹೋರಾಟ ನಡೆಸಿದ ಪರಿಣಾಮ ಇದನ್ನು ಕೈಬಿಟ್ಟು ರಾಜ್ಯ ಸರ್ಕಾರಗಳ ವಿವೇಚನೆಗೆ ನೀಡಿತ್ತು. ಈಗ ಅವರು ಹೊಸ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದ್ದಾರೆ. ರೈತರ ಬದುಕನ್ನು ಮಣ್ಣುಪಾಲು ಮಾಡುವ ಈ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಕಾಯ್ದೆ ಸರ್ಕಾರಕ್ಕೆ ಪ್ರಬಲ ಅಸ್ತ್ರ: ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಮಲ್ಲಯ್ಯ ಮಾತನಾಡಿ, ಉದ್ದೇಶಿತ ಮಸೂದೆ ಜಾರಿಗೆ ಬಂದರೆ ರೈತರು ತಮ್ಮ ಭೂಮಿಯ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಹೊಸ ಭೂ ಸ್ವಾಧೀನ ಕಾಯ್ದೆ ಜಾರಿಗೆ ತಂದರೆ ರೈತರನ್ನು ಒಕ್ಕಲೆಬ್ಬಿಸಲು ಸರ್ಕಾರಕ್ಕೆ ಪ್ರಬಲ ಅಸ್ತ್ರ ಸಿಕ್ಕಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಈಗ ಜಾರಿಯಲ್ಲಿರುವ ಕಾಯ್ದೆಯಲ್ಲಿ ರೈತರ ಜಮೀನಿಗೆ ಮಾರ್ಗಸೂಚಿ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚು ಪರಿಹಾರ ನೀಡಬೇಕು. ಹೆಚ್ಚಿನ ರೈತರು ಇದಕ್ಕೆ ಸಮ್ಮತಿ ಸೂಚಿಸದೇ ಇದ್ದಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕು ಎಂಬ ನಿಯಮಗಳಿವೆ. ಹೊಸ ನಿಯಮ ಬಂದರೆ ಸರ್ಕಾರ ಮಾರ್ಗಸೂಚಿ ಬೆಲೆಗೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದಲ್ಲದೆ ಬೇಕಾದ ರೀತಿಯಲ್ಲಿ ಭೂ ಸ್ವಾಧೀನ ಮಾಡಿಕೊಳ್ಳಬಹುದಾಗಿದೆ ಎಂದು ಆರೋಪಿಸಿದರು.
ಈ ವೇಳೆ ಜಿಲ್ಲಾ ರೈತ ಸಂಘದ ಗೌರವ ಅಧ್ಯಕ್ಷ ತಿಮ್ಮೇಗೌಡ, ತಾಲೂಕು ಅಧ್ಯಕ್ಷ ಎಚ್.ಸಿ.ಕೃಷ್ಣಪ್ಪ, ಗೌರವ ಅಧ್ಯಕ್ಷ ಕುಮಾರಸ್ವಾಮಿ, ಕಾರ್ಯಾಧ್ಯಕ್ಷ ಎಚ್.ನಾಗೇಶ್, ಉಪಾಧ್ಯಕ್ಷರಾದ ವೆಂಕಟಪ್ಪ, ಸಿದ್ದಪ್ಪಾಜಿ, ಎಚ್.ಪಿ.ಪ್ರಕಾಶ್, ತಮ್ಮಣ್ಣ ಹಾಜರಿದ್ದರು.