Advertisement

ಉಡುಪಿ: ಜಾನುವಾರುಗಳ ಜೀವ ಹಿಂಡುತ್ತಿದೆ ಲುಂಪಿ ಸೋಂಕು

11:53 PM Dec 21, 2022 | Team Udayavani |

ಉಡುಪಿ : ದೇಶದ ಹೈನುಗಾರಿಕೆ, ಕೃಷಿಕರ ಸಮೂಹವನ್ನೇ ಬೆಚ್ಚಿ ಬೀಳಿಸಿರುವ ಜಾನುವಾರುಗಳಿಗೆ ಕಂಟಕವಾಗಿ ಪರಿಣಮಿಸಿರುವ ಚರ್ಮಗಂಟು ರೋಗ (ಲುಂಪಿ) ಸೋಂಕು ಜಿಲ್ಲೆಗೂ ಕಾಲಿಟ್ಟಿದೆ. ಜಿಲ್ಲೆಯ 108 ಗ್ರಾಮದಲ್ಲಿ 1,551 ಜಾನು ವಾರುಗಳ ಜೀವ ಹಿಂಡುತ್ತಿರುವ ಲುಂಪಿ ಸೋಂಕು ಈಗಾಗಲೇ ಕಾರ್ಕಳ ತಾ| ವ್ಯಾಪ್ತಿ ಯಲ್ಲಿ 2, ಹೆಬ್ರಿಯಲ್ಲಿ ಹೆಬ್ರಿಯಲ್ಲಿ ಒಂದು ದನ ಬಲಿಯಾಗಿವೆ.

Advertisement

ಜಿಲ್ಲೆಯಲ್ಲಿ 2.57 ಲಕ್ಷ ಜಾನುವಾರುಗಳಿದ್ದು, ಕುಂದಾಪುರ, ಹೆಬ್ರಿ, ಬ್ರಹ್ಮಾವರ, ಕಾರ್ಕಳ ಭಾಗದಲ್ಲಿ ಹೈನುಗಾರಿಕೆ ಹೆಚ್ಚಿದೆ. ಆರಂಭದಲ್ಲಿ ಬೇರೆ ಜಿಲ್ಲೆಗಳಲ್ಲಿ ಸೋಂಕು ವ್ಯಾಪಕವಾಗಿ ಹಬ್ಬಿದ್ದು, ಈಗ ಉಡುಪಿಯಲ್ಲೂ ಕಾಣಿಸಿಕೊಂಡಿರುವುದು ಹೈನುಗಾರಿಕೆ, ಕೃಷಿಕ ವರ್ಗದವರಲ್ಲಿ ತೀರ ಆತಂಕ ಹುಟ್ಟಿಸಿದೆ. 1017 ಜಾನುವಾರುಗಳು ಚಿಕಿತ್ಸೆಯಲ್ಲಿದ್ದು, 632 ಜಾನುವಾರು ಗುಣಮುಖ ಹೊಂದಿವೆ.

ಕಳೆದ ವರ್ಷ ಜಿಲ್ಲೆಯಲ್ಲಿ ಅಲ್ಪಪ್ರಮಾಣ ದಲ್ಲಿ ಸೋಂಕು ಕಾಣಿಸಿಕೊಂಡಿತ್ತಾದರೂ ಸಕಾಲಿಕ ಚಿಕಿತ್ಸೆಯಿಂದ ಜಾನುವಾರುಗಳು ಶೀಘ್ರ ಗುಣಮುಖವಾಗಿದ್ದವು. ಜಿಲ್ಲೆಯಲ್ಲಿ ಸೋಂಕು ಹರಡದಂತೆ ಎಲ್ಲ ರೀತಿಯ ಸುರಕ್ಷತಾ ಕ್ರಮ ತೆಗೆದುಕೊಳ್ಳಲಾಗಿದ್ದು, ಸೋಂಕಿನಿಂದ ಜಾನುವಾರುಗಳನ್ನು ರಕ್ಷಿಸಲು ಲಸಿಕೆ ನೀಡುವ ಕೆಲಸ ನಿರಂತರ ನಡೆಯುತ್ತಿದೆ ಎಂದು ಪಶು ಸಂಗೋಪನೆ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಂದಿ ಕೊರತೆ ನಡುವೆ ವ್ಯಾಕ್ಸಿನೇಶನ್‌ ಸವಾಲು
ಜಿಲ್ಲೆಗೆ ಅಗತ್ಯ ಇರುವಷ್ಟು 2.57 ಲಕ್ಷ ವ್ಯಾಕ್ಸಿನೇಶನ್‌ ಪೂರೈಕೆ ಯಾಗಿದೆ. ಲಸಿಕೆಗೆ ಕೊರತೆ ಇಲ್ಲ. ಮುಂಜಾಗ್ರತ ಕ್ರಮ ವಾಗಿ ವ್ಯಾಕ್ಸಿನೇಶನ್‌ ಕಾರ್ಯ ನಿರಂತರ ನಡೆಯುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 18,320 ಜಾನುವಾರುಗಳಿಗೆ ಲಸಿಕೆ ನೀಡಿದ್ದೇವೆ ಎನ್ನುತ್ತಾರೆ ಅಧಿಕಾರಿಗಳು. ಜಿಲ್ಲೆಯ ಪಶು ಸಂಗೋಪನೆ ಇಲಾಖೆಯಲ್ಲಿ 357 ಹುದ್ದೆಗಳಿದ್ದು, 78 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿಬಂದಿ ಕೊರತೆ ನಡುವೆ ವ್ಯಾಕ್ಸಿನೇಶನ್‌ ಕಾರ್ಯ ಸವಾಲಿನಿಂದ ಕೂಡಿದ್ದು, ಕನಿಷ್ಠ ಸಂಖ್ಯೆಯಲ್ಲಿರುವ ವೈದ್ಯರು, ಸಿಬಂದಿ ಹೆಚ್ಚುವರಿ ಸಮಯದಲ್ಲಿಯೂ ಜಾನುವಾರುಗಳ ಲಸಿಕೆ ಮತ್ತು ಚಿಕಿತ್ಸೆ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸಾಕಾಣಿಕೆದಾರರಿಗೆ ಸೂಚನೆ
– ರೋಗ ಲಕ್ಷಣ ಕಾಣಿಸಿದ ಕೂಡಲೇ ಪಶು ವೈದ್ಯರಿಗೆ ಮಾಹಿತಿ ನೀಡಬೇಕು.
– ಸೋಂಕು ಕಂಡು ಬರುವ ರೋಗಗ್ರಸ್ಥ ಜಾನುವಾರುಗಳನ್ನು ಇತರ ದನಗಳ ನಡುವೆ ಸೇರದಂತೆ ತತ್‌ಕ್ಷಣ ಐಸೊಲೇಶನ್‌ ಮಾಡಬೇಕು.
– ನೊಣ, ಸೊಳ್ಳೆ, ಉಣ್ಣಿಗಳಿಂದ ಸೋಂಕು ಹರಡುತ್ತದೆ. ಇವುಗಳು ಬಾರದಂತೆ ಜಾನುವಾರುಗಳ ದೇಹಕ್ಕೆ ನೀಮ್‌, ಹೊಂಗೆ ಎಣ್ಣೆ ಹಚ್ಚಬೇಕು.
– ಚಿಕಿತ್ಸೆ ದೊರೆತಲ್ಲಿ 2 ವಾರದೊಳಗೆ ರೋಗ ಹತೋಟಿಗೆ ಬರುವುದು
– ಸಮರ್ಪಕ ಚಿಕಿತ್ಸೆ ಮಾಡಿ ದರೆ ಸಾವಿನ ಪ್ರಮಾಣ ಶೇ.2ರಷ್ಟು ಮಾತ್ರ

Advertisement

ಆತಂಕ ಪಡುವ ಅಗತ್ಯವಿಲ್ಲ
ಜಿಲ್ಲೆಯಲ್ಲಿ 1,572 ಜಾನುವಾರುಗಳಿಗೆ ಲುಂಪಿ ಸೋಂಕು ಬಾಧಿಸಿದ್ದು ಸೂಕ್ತ ಚಿಕಿತ್ಸೆಯಿಂದ 552 ಜಾನುವಾರು ಗುಣಮುಖ ಹೊಂದಿದೆ. ಬಹುತೇಕ ಜಾನುವಾರುಗಳು ಚೇತರಿಸಿಕೊಳ್ಳುತ್ತಿವೆ. ಸಿಬಂದಿ ಕೊರತೆ ನಡುವೆಯೂ ವೈದ್ಯರು, ವೈದ್ಯಕೀಯ ಸಿಬಂದಿ ಜಾನುವಾರುಗಳ ಲಸಿಕೆ, ಚಿಕಿತ್ಸೆ ಕಾರ್ಯದಲ್ಲಿ ನಿರಂತರ ಶ್ರಮಿಸುತ್ತಿದ್ದಾರೆ. ಕೆಎಂಎಫ್, ಹೊರಗುತ್ತಿಗೆ ನೌಕರರು ಸಹಕಾರ ನೀಡುತ್ತಿದ್ದಾರೆ. ಸಾಕಾಣಿಕಾದಾರರು ಆತಂಕ ಪಡುವ ಅಗತ್ಯವಿಲ್ಲ. ಎಲ್ಲ ಬಗೆಯ ಮುಂಜಾಗ್ರತೆ ತೆಗೆದುಕೊಂಡಿದ್ದೇವೆ ಸೂಕ್ತ ಚಿಕಿತ್ಸಾ ಕ್ರಮದಿಂದ ಸೋಂಕು ಹತೋಟಿಗೆ ಬರುತ್ತದೆ.
– ಡಾ| ಶಂಕರ್‌ ಶೆಟ್ಟಿ, ಉಪ ನಿರ್ದೇಶಕರು, ಪಶು ಸಂಗೋಪನೆ ಇಲಾಖೆ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next