ವಾಡಿ: ಸಮಾಜದಿಂದ ದೂರ ತಳ್ಳಲ್ಪಟ್ಟ ಬುಡಕಟ್ಟು ಜನಾಂಗದವರೇ ಲಂಬಾಣಿಗರು. ಕಷ್ಟಗಳನ್ನು ಹೊತ್ತು ಅಲೆಮಾರಿಗಳಾಗಿ ಬದುಕಿದ ಲಂಬಾಣಿ ಸಮುದಾಯವನ್ನು ಈ ಸಮಾಜ ಕಳ್ಳರೆಂದು ಕರೆದಿದೆ ಎಂದು ಮಾಜಿ ಶಾಸಕ, ಬಿಜೆಪಿ ಹಿರಿಯ ಮುಖಂಡ ವಾಲ್ಮೀಕಿ ನಾಯಕ ಹೇಳಿದರು.
ಬಂಜಾರಾ (ಲಂಬಾಣಿ)ಸೇವಾ ಸಂಘದ ವತಿಯಿಂದ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಸಂತ ಶ್ರೀ ಸೇವಾಲಾಲ ಮಹಾರಾಜರ 280ನೇ ಜಯಂತಿ ಕಾರ್ಯಕ್ರಮದ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಅರಣ್ಯದಲ್ಲಿ ಗುಡಿಸಲು ಕಟ್ಟಿಕೊಂಡು ಬೇಟೆಯಾಡಿ, ಆಹಾರ ಹುಡಿಕೊಂಡು
ಬಂಜಾರಾ ಜನಾಂಗ ಸಾಮಾಜಿಕವಾಗಿ ಕಷ್ಟ ಅನುಭವಿಸಿದೆ. ಯುವಕರು ಕಷ್ಟಗಳನ್ನು ಮೆಟ್ಟಿ ಜನಸಮುದಾಯದ ಮಧ್ಯೆ ಬೆಳೆದು ನಿಲ್ಲುವ ಛಲ ತೋರಬೇಕಿದೆ. ದುಡಿದು ಕುಡಿದು ಮಲಗೋದು ಬೇಡ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಪ್ರಗತಿ ಕಾಣೋಣ ಎಂದರು.
ಶಾಸಕ ಉಮೇಶ ಜಾಧವ್, ಅಖೀಲ ಭಾರತ ಬಂಜಾರಾ ಸೇವಾ ಸಂಘದ ರಾಜ್ಯಾಧ್ಯಕ್ಷ ಸುಭಾಷ ರಾಠೊಡ, ಮಹಾರಾಷ್ಟ್ರದ ಅರುಣ ಚವ್ಹಾಣ ಮಾತನಾಡಿದರು. ಕಲಬುರಗಿ ಜಿಲಾನಿ ದರ್ಗಾದ ಖಾಜಾ ಶಮಶೋದ್ದೀನ್, ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಸ್ವಾಮೀಜಿ, ಶ್ರೀ ಮುರಾಹರಿ ಮಹಾರಾಜ ಆಶೀರ್ವಚನ ನೀಡಿದರು.
ಶ್ರೀ ಜೇಮಸಿಂಗ್ ಮಹಾರಾಜ, ಶ್ರೀ ಮುನೀಂದ್ರ ಸ್ವಾಮೀಜಿ, ಶ್ರೀ ಅನೀಲ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ತಾಪಂ ಉಪಾಧ್ಯಕ್ಷ ಹರಿನಾಥ ಚವ್ಹಾಣ, ಜಿಪಂ ಸ್ಥಾಯಿಸಮಿತಿ ಅಧ್ಯಕ್ಷ ಅರವಿಂದ ಚವ್ಹಾಣ, ಹಿರಿಯ ಮುಖಂಡ ರಾಮಚಂದ್ರ ಜಾಧವ್, ಪುರಸಭೆ ಅಧ್ಯಕ್ಷೆ ಮೈನಾಬಾಯಿ ಗೋಪಾಲ ರಾಠೊಡ, ಮುಸ್ಲಿಂ ಸಮಾಜದ ಅಧ್ಯಕ್ಷ ಮಕುಲ್ ಜಾನಿ, ಜಂಗಮ ಕ್ಷೇಮಾವೃದ್ಧಿ ಸಮಾಜದ ತಾಲೂಕು ಅಧ್ಯಕ್ಷ ನೀಲಯ್ಯಸ್ವಾಮಿ ಮಠಪತಿ, ಬಂಜಾರಾ ಸಮಾಜದ ಅಧ್ಯಕ್ಷ ಶಿವರಾಮ ಪವಾರ, ಜಯಂತಿ ಸಮಿತಿ ಅಧ್ಯಕ್ಷ ಗಣೇಶ ಚವ್ಹಾಣ ಮತ್ತಿತರರು ಪಾಲ್ಗೊಂಡಿದ್ದರು.
ಬಂಜಾರಾ ಜನಸಮುದಾಯ ವಾಸಿಸುವ ತಾಂಡಾಗಳಿಗೆ ಪತ್ರಿಕೆಗಳು ಬರುವಂತೆ ನೋಡಿಕೊಳ್ಳಬೇಕು. ಪ್ರತಿಯೊಂದು ತಾಂಡಾಗಳಲ್ಲಿ ಸೇವಾಲಾಲ ಮಂದಿರ ಇರುವಂತೆ ಗ್ರಂಥಾಲಯ ಸ್ಥಾಪನೆಯಾಗಬೇಕು ಎಂದು ಅಖೀಲ ಭಾರತ ಬಂಜಾರಾ ಸೇವಾ ಸಂಘದ ರಾಜ್ಯಾಧ್ಯಕ್ಷ ಸುಭಾಷ ರಾಠೊಡ ಎಂದು ಹೇಳಿದರು.
ಮಾನಸಿಂಗ್ ಚವ್ಹಾಣ ಸ್ವಾಗತಿಸಿದರು. ದೇವಜಿ ನಾಯಕ ನಿರೂಪಿಸಿದರು. ಬೋರು ರಾಠೊಡ ಯಾಗಾಪುರ ವಂದಿಸಿದರು. ಇದೆ ವೇಳೆ ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ವಿವಿಧ ತಾಂಡಾಗಳ ಬಂಜಾರಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇದಕ್ಕೂ ಮುನ್ನ 84 ತಾಂಡಾಗಳಿಂದ ಆಗಮಿಸಿದ್ದ ಸಾವಿರಾರು ಜನರ ನೇತೃತ್ವದಲ್ಲಿ ಶ್ರೀ ಸೇವಾಲಾಲ ಮಹಾರಾಜರ ಭಾವಚಿತ್ರ ಮೆರವಣಿಗೆ ನಡೆಯಿತು.