Advertisement

ಸರ್ಕಾರದಿಂದ ಸೇವಾಲಾಲ ಜಯಂತಿ ಆಚರಣೆಗೆ ಹರ್ಷ

11:35 AM Feb 02, 2018 | Team Udayavani |

ಚಿಂಚೋಳಿ: ಲಂಬಾಣಿ ಸಮುದಾಯದ ಆರಾಧ್ಯದೇವ ಸಂತ ಶ್ರೀ ಸೇವಾಲಾಲ ಜಯಂತಿಯನ್ನು ಸರಕಾರದಿಂದಲೇ ಆಚರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿರುವುದರಿಂದ ಪಟ್ಟಣದ ಚಂದಾಪುರ ಗಂಗು ನಾಯಕ ತಾಂಡಾದಲ್ಲಿ ಇರುವ ಸಂತ ಶ್ರೀ ಸೇವಾಲಾಲ ದೇವಾಲಯದ ಎದುರು ಗುರುವಾರ ಬಂಜಾರಾ ಸಮಾಜದ ಗಣ್ಯರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

Advertisement

ಚಂದಾಪುರ ಸೇವಾಲಾಲ ದೇವಾಲಯದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭಲ್ಲಿ ತಾಲೂಕು ಬಂಜಾರಾ ಸಮಾಜದ ಅಧ್ಯಕ್ಷ ರಾಮಶೆಟ್ಟಿ ಪವಾರ ಮಾತನಾಡಿ, ಸಮಾಜದ ಆರಾಧ್ಯದೇವ ಸಂತ ಶ್ರೀ ಸೇವಾಲಾಲ ಜಯಂತಿ ಆಚರಣೆ ಮಾಡುವಂತೆ ಫೆ.15ಂದು ಸರಕಾರ ಆದೇಶ ಹೊರಡಿಸಿದ್ದು, ಸಮಾಜಕ್ಕೆ ಸಂತಸವನ್ನುಂಟು ಮಾಡಿದೆ ಎಂದರು.

ಶಾಸಕ ಡಾ| ಉಮೇಶ ಜಾಧವ್‌ ಮಾತನಾಡಿ, ಎಲ್ಲ ಸಮಾಜದವರ ಸಂತರ ಶರಣರ ಹಾಗೂ ಮಹಾತ್ಮರ ಜಯಂತಿಗಳನ್ನು ಸರಕಾರದಿಂದಲೇ ಆಚರಿಸಿದರೆ ನಾವೆಲ್ಲರೂ ಭಾರತ ದೇಶ ಪ್ರಜೆಗಳಾಗಿದ್ದೇವೆ ಎಂಬ ಭಾವನೆ ಇರುತ್ತದೆ. ಸಮಾಜಕ್ಕಿಂತ ಯಾರೂ ದೊಡ್ಡವರಲ್ಲ ಮತ್ತು ಯಾರೂ ಸಣ್ಣವರಲ್ಲ ಎಂದರು. 

ಕಲಬುರಗಿ ವಿಶ್ವ ವಿದ್ಯಾಲಯದಲ್ಲಿ ಸೇವಾಲಾಲ ಅಧ್ಯಯನ ಪೀಠ ಮಂಜೂರಿಗೊಳಿಸಿ, ಅದಕ್ಕೆ 5 ಕೋಟಿ ರೂ.ನೀಡಿದೆ. ಹುಮನಾಬಾದ ತಾಲೂಕಿನ ಲಾಲಧರಿ ತಾಂಡಾದಲ್ಲಿ ಲಂಬಾಣಿ ಜನಾಂಗದ ಕೌಶಲ್ಯ ಹಾಗೂ ಇನ್ನಿತರ ಚಟುವಟಿಕೆಗಳಿಗೋಸ್ಕರ 160 ಕೋಟಿ ರೂ.ನೀಡಲಾಗಿದೆ. ಸಂತ ಸೇವಾಲಾಲ ಜನ್ಮಸ್ಥಳ ಶಿವಮೊಗ್ಗ ಜಿಲ್ಲೆಯ ಸೂರಗೊಂಡನಕೊಪ್ಪ ಅಭಿವೃದ್ಧಿಗೂ ಹಣ ನೀಡಲಾಗಿದೆ. ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಸರಕಾರ ಕ್ರಮ ಕೈಗೊಂಡಿದೆ ಎಂದು ವಿವರಣೆ ನೀಡಿದರು.

ಅಶೋಕ ಚವ್ಹಾಣ, ರಾಜು ಪವಾರ, ಮೇಘರಾಜ್‌, ತಾಪಂ ಸದಸ್ಯ ಪ್ರೇಮಸಿಂಗ ಜಾಧವ್‌, ವಿಜಯಕುಮಾರ ಗಂಗನಪಳ್ಳಿ, ಚಂದ್ರಶೆಟ್ಟಿ ಜಾಧವ್‌, ವಿಜಯಕುಮಾರ ರಾಠೊಡ, ಡಿ.ಕೆ. ಚವ್ಹಾಣ ಇದ್ದರು. ಗೋಪಾಲ ಜಾಧವ್‌ ಸ್ವಾಗತಿಸಿದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next