ಪಾಟ್ನಾ: ಬಿಹಾರದಲ್ಲಿ ಆರ್‌ಜೆಡಿ-ಜೆಡಿಯು ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಲಾಲು ಪ್ರಸಾದ್ ಯಾದವ್ ಅವರ ಕುಟುಂಬ ಸದಸ್ಯರು ಸರ್ಕಾರಿ ಆಡಳಿತದಲ್ಲಿ ಹಸ್ತಕ್ಷೇಪ ಆರಂಭಿಸಿದ್ದಾರೆ.
ಪರಿಸರ ಮತ್ತು ಅರಣ್ಯ ಸಚಿವ ತೇಜ್ ಪ್ರತಾಪ್ ಯಾದವ್ ನೇತೃತ್ವದಲ್ಲಿ ನಡೆದ ಇಲಾಖಾವಾರು ಸಭೆಯಲ್ಲಿ ಆರ್‌ಜೆಡಿ ಸಂಸ್ಥಾಪಕರ ಹಿರಿಯ ಅಳಿಯ ಶೈಲೇಶ್ ಕುಮಾರ್ ಭಾಗಿಯಾದದ್ದು ವಿವಾದಕ್ಕೆ ಕಾರಣವಾಗಿದೆ. ಅವರು ಇದ್ದ ಸಭೆಯ ಫೋಟೋಗಳು ವೈರಲ್ ಆಗಿವೆ. ಪ್ರತಿಪಕ್ಷ ಬಿಜೆಪಿ ಇದನ್ನು ಕಟುವಾಗಿ ಟೀಕಿಸಿದೆ.
ಆ.17 ಮತ್ತು ಆ.18ರಂದು ನಡೆದಿದ್ದ ಎರಡು ಪ್ರತ್ಯೇಕ ಸಭೆಗಳಲ್ಲಿ ಶೈಲೇಶ್ ಇದ್ದರು. ಬಿಹಾರ ಬಿಜೆಪಿ ಘಟಕದ ಮುಖಂಡ ನಿಖೀಲ್ ಆನಂದ್ ಅವರು ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ ಮತ್ತು ಯಾವ ಆಧಾರದಲ್ಲಿ ಶೈಲೇಶ್ ಕುಮಾರ್ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಲಾಲು ಪ್ರಸಾದ್ ಯಾದವ್ ಅಳಿಯನನ್ನು ಯಾರೂ ಹಗುರವಾಗಿ ಪರಿಗಣಿಸಬೇಡಿ ಎಂದು ಟ್ವೀಟ್‌ನಲ್ಲಿ ಲೇವಡಿ ಮಾಡಿದ್ದಾರೆ.
ಚಾಯ್‌ವಾಲಿಗೆ ಮಳಿಗೆ ಸ್ಥಾಪನೆಗೆ ಅಭಯ
ಪಾಟ್ನಾದಲ್ಲಿ ಜನಪ್ರಿಯಗೊಂಡಿರುವ “ಗ್ರಾಜ್ಯುವೇಟ್ ಚಾಯ್‌ವಾಲಿ’ಯ ಮಳಿಗೆಗೆ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಅಭಯ ಸಿಕ್ಕಿದೆ. ಒತ್ತುವರಿ ತೆರವು ನೆಪದಲ್ಲಿ ಧ್ವಂಸಗೊಂಡಿದ್ದ ಪ್ರಿಯಾಂಕಾ ಗುಪ್ತಾ ಅವರ ಚಹಾ ಮಾರಾಟ ಮಳಿಗೆ ಮತ್ತೆ ಶುರುವಾಗಿದೆ. ಒತ್ತುವರಿ ತೆರವು ವೇಳೆ ಧ್ವಂಸಗೊಂಡಿದ್ದ ಮಳಿಗೆಯನ್ನು ಪುನಃಸ್ಥಾಪಿಸಲು ಹಲವು ರಾಜಕಾರಣಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಕೊನೆಗೆ ಡಿಸಿಎಂ ತೇಜಸ್ವಿ ಯಾದವ್ ಅವರಿಗೆ ಮನವಿ ಮಾಡಿಕೊಂಡಿದ್ದರು. ಕೂಡಲೇ ಸ್ಪಂದಿಸಿದ ತೇಜಸ್ವಿ ಅವರು ಮಳಿಗೆ ಸ್ಥಾಪನೆ ಕುರಿತು ಸ್ಥಳೀಯ ಆಡಳಿತಕ್ಕೆ ಆದೇಶ ನೀಡಿದ್ದಾರೆ.